ಒಣಗುತ್ತಿರುವ ಬೆಳೆ: ರೈತರು ಕಂಗಾಲು

KannadaprabhaNewsNetwork | Published : Oct 21, 2023 12:30 AM

ಸಾರಾಂಶ

ತಮಿಳುನಾಡಿನಲ್ಲಿ ಬೆಳೆದು ನಿಂತಿರುವ ಬೆಳೆಗೆ ನೀರು ಸರಾಗವಾಗಿ ಹರಿಯುತ್ತಿದೆ. ನೀರು ಹರಿಯುತ್ತಿರುವ ಪಕ್ಕದಲ್ಲೇ ಬೆಳೆದಿರುವ ಬೆಳೆಗೆ ಮಾತ್ರ ನೀರು ಸಿಗುತ್ತಿಲ್ಲ. ಇದಲ್ಲವೇ ದುರಂತ. ನೀರಿಲ್ಲದೆ ಒಣಗುತ್ತಿರುವ ಬೆಳೆ ಕಂಡು ರೈತರು ಕಂಗಾಲಾಗಿದ್ದಾರೆ.
ಮಂಡ್ಯ ಮಂಜುನಾಥ ಮಂಡ್ಯ: ತಮಿಳುನಾಡಿನಲ್ಲಿ ಬೆಳೆದು ನಿಂತಿರುವ ಬೆಳೆಗೆ ನೀರು ಸರಾಗವಾಗಿ ಹರಿಯುತ್ತಿದೆ. ನೀರು ಹರಿಯುತ್ತಿರುವ ಪಕ್ಕದಲ್ಲೇ ಬೆಳೆದಿರುವ ಬೆಳೆಗೆ ಮಾತ್ರ ನೀರು ಸಿಗುತ್ತಿಲ್ಲ. ಇದಲ್ಲವೇ ದುರಂತ. ನೀರಿಲ್ಲದೆ ಒಣಗುತ್ತಿರುವ ಬೆಳೆ ಕಂಡು ರೈತರು ಕಂಗಾಲಾಗಿದ್ದಾರೆ. ನೂರಾರು ಕಿ.ಮೀ. ದೂರದಲ್ಲಿ ಬೆಳೆದಿರುವ ಬೆಳೆಗಳನ್ನು ತಣಿಸಲು ಹರಿಯುತ್ತಿರುವ ನೀರು ನಮ್ಮ ನೆಲದಲ್ಲೇ ಬೆಳೆದಿರುವ ಬೆಳೆಗಳನ್ನು ತಣಿಸುತ್ತಿಲ್ಲವೆಂಬ ಕೊರಗು ಅನ್ನದಾತರನ್ನು ಕಾಡುತ್ತಿದೆ. ಈ ವರ್ಷ ಪಂಪ್‌ಸೆಟ್‌ಗಳನ್ನೇ ನಂಬಿಕೊಂಡು ಬೆಳೆ ಬೆಳೆದವರೂ ಖುಷಿಯಾಗಿಲ್ಲ. ಕರೆಂಟ್ ಬರ ಬೆಂಬಿಡದೆ ಕಾಡುತ್ತಿದೆ. ದಿನಕ್ಕೆ ಎರಡರಿಂದ ಮೂರು ಗಂಟೆ ಸಿಗುತ್ತಿರುವ ವಿದ್ಯುತ್ ಏನೇನೂ ಸಾಲದಾಗಿದೆ. ಬೆಳೆ ರಕ್ಷಣೆ ಮಾಡಿಕೊಳ್ಳಲು ರಾತ್ರಿಯಿಡೀ ಕರೆಂಟ್‌ಗಾಗಿ ಕಾದು ಕುಳಿತರೂ ಬೆಳಕು ಮೂಡುತ್ತಿಲ್ಲ. ಬೆಳೆದಿರುವ ಬೆಳೆಗಳನ್ನು ರಕ್ಷಿಸುವುದು ದೂರದ ಮಾತಾಗಿದೆ. ತಮಿಳುನಾಡಿಗೆ ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ನೀರು ಹರಿಸುತ್ತಿರುವುದರಿಂದ ಕಾವೇರಿ ಕಣಿವೆಯ ಅಣೆಕಟ್ಟೆಗಳಲ್ಲಿ ಸಂಗ್ರಹವಾಗಿದ್ದ ಅಲ್ಪಸ್ವಲ್ಪ ನೀರೆಲ್ಲವೂ ಖಾಲಿಯಾಗಿದೆ. ಇದೀಗ ಕುಡಿಯುವ ನೀರು ಸಿಗುವುದೂ ಅನುಮಾನವಾಗಿದೆ. ಬೆಳೆ ಬೆಳೆದಿರುವ ರೈತರ ಗೋಳನ್ನು ಕೇಳುವವರೇ ದಿಕ್ಕಿಲ್ಲದಂತಾಗಿದೆ. ಮಳೆಯ ಮೇಲೆ ಭರವಸೆ ಇಟ್ಟು ರೈತರು ಈ ಸಾಲಿನಲ್ಲಿ ಕಬ್ಬು, ಭತ್ತ, ತರಕಾರಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆದಿದ್ದಾರೆ. ಮಳೆ ಕೊರತೆಯಿಂದ ಈ ಬಾರಿ ಜಿಲ್ಲೆಯೊಳಗೆ ನಿರೀಕ್ಷಿತ ಪ್ರಮಾಣದ ಬಿತ್ತನೆಯಾಗಿಲ್ಲ. ಪಂಪ್‌ಸೆಟ್‌ದಾರರು ವಿದ್ಯುತ್ ಮೇಲೆ ನಂಬಿಕೆ ಇಟ್ಟು ಭತ್ತ, ತರಕಾರಿ, ಅಡಕೆ ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಬೆಳೆದಿದ್ದಾರೆ. ಆದರೆ, ಅವರಿಗೂ ನಿಯಮಿತ ವಿದ್ಯುತ್ ಪೂರೈಕೆಯಾಗದೆ ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕೆ ಹೆಣಗಾಡುತ್ತಿದ್ದಾರೆ. ಈ ಮೊದಲು ಒಂದು ವಾರ ಬೆಳಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯವರೆಗೆ ಮತ್ತೊಂದು ವಾರ ಮಧ್ಯಾಹ್ನ ೧ ರಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಪೂರೈಸಲಾಗುತ್ತಿತ್ತು. ಇದರಿಂದ ಬೆಳೆಗಳಿಗೆ ನೀರು ಹಾಯಿಸಿಕೊಳ್ಳುವುದಕ್ಕೆ ಅನುಕೂಲಕರವಾಗಿತ್ತು. ಈಗ ವಿದ್ಯುತ್ ಯಾವಾಗ ಬರುತ್ತದೋ, ಯಾವಾಗ ಹೋಗುವುದೋ ಗೊತ್ತೇ ಆಗುವುದಿಲ್ಲ. ಪ್ರತಿದಿನ ೨ ರಿಂದ ೩ ಗಂಟೆ ವಿದ್ಯುತ್ ಸಿಗುವುದೂ ಕಷ್ಟವಾಗಿದೆ. ಹೀಗಿರುವಾಗ ಬೆಳೆಗಳನ್ನು ರಕ್ಷಣೆ ಮಾಡುವುದು ಹೇಗೆ ಸಾಧ್ಯ ಎಂಬುದು ರೈತರ ಪ್ರಶ್ನೆಯಾಗಿದೆ. ರಾತ್ರಿ ವೇಳೆ ವಿದ್ಯುತ್ ನೀಡಬಹುದೆಂಬ ಭರವಸೆಯೊಂದಿಗೆ ಪಂಪ್‌ಸೆಟ್ ಮನೆಗಳಲ್ಲೇ ಮಲಗಿಕೊಂಡು ಕಾದರೂ ಬೆಳಕು ಮೂಡದಿರುವುದು ರೈತರಲ್ಲಿ ನಿರಾಸೆ ಮೂಡಿಸಿದೆ. ಕೆಲವರು ಮುಂಜಾನೆ ೩ ಗಂಟೆ ಸಮಯಕ್ಕೆ ಮನೆಯಿಂದ ಎದ್ದುಹೋದರೂ ಕರೆಂಟ್ ಇಲ್ಲದಿರುವುದನ್ನು ಕಂಡು ನಿರಾಸೆಯಿಂದ ವಾಪಸಾಗುತ್ತಿದ್ದಾರೆ. ಪಂಪ್‌ಸೆಟ್‌ಗಳಲ್ಲಿ ನೀರಿದ್ದರೂ ವಿದ್ಯುತ್ ನೆರವಿನಿಂದ ಜಮೀನುಗಳಿಗೆ ಹರಿಸಿಕೊಳ್ಳಲಾಗುತ್ತಿಲ್ಲ. ನೀರಿಲ್ಲದೆ ಭೂಮಿ ಬಿರುಕುಬಿಟ್ಟು ಬೆಳೆಗಳು ಒಣಗುತ್ತಿರುವುದರಿಂದ ಮಮ್ಮಲ ಮರುಗುತ್ತಿದ್ದಾರೆ. ವಿದ್ಯುತ್ ಪೂರೈಕೆಯಾಗದಿರುವ ಬಗ್ಗೆ ಸೆಸ್ಕ್ ಅಧಿಕಾರಿಗಳನ್ನು ಕೇಳಿದರೆ ಲೋಡ್ ಇಲ್ಲ ನಾವೇನು ಮಾಡೋಣ ಎನ್ನುತ್ತಾರೆ. ಕೆಲವರು ಜೂನಿಯರ್ ಎಂಜಿನಿಯರ್ ಕೇಳಿ ಎಂದರೆ ಮತ್ತೆ ಕೆಲವರು ಆಫೀಸ್‌ಗೆ ಬಂದು ಮಾತನಾಡಿ ಅಂತಾರೆ. ಅನಿಯಮಿತ ಲೋಡ್‌ಶೆಡ್ಡಿಂಗ್‌ನಿಂದ ಬೆಳೆಗಳನ್ನು ಉಳಿಸಿಕೊಳ್ಳಲಾಗದೆ ರೈತರು ಕಂಗೆಟ್ಟುಹೋಗಿದ್ದಾರೆ. ಮಳೆಯನ್ನೇ ನಂಬಿಕೊಂಡು ಬೆಳೆ ಬೆಳೆದವರ ಪಾಡಂತೂ ಹೇಳತೀರದಾಗಿದೆ. ಕೆರೆ-ಕಟ್ಟೆಗಳೆಲ್ಲಾ ಒಣಗಿಹೋಗಿವೆ. ನಾಲಾ ಸಂಪರ್ಕ ಜಾಲದಿಂದ ವಂಚಿತವಾಗಿರುವ ಕೆರೆ-ಕಟ್ಟೆಗಳಿಗೆ ಮಳೆಯೇ ಪ್ರಮುಖ ಆಸರೆಯಾಗಿದೆ. ಈ ಬಾರಿ ಮಳೆ ಕೊರತೆ, ತಮಿಳುನಾಡಿಗೆ ನೀರು ಹರಿಸುತ್ತಿರುವ ಕಾರಣ ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಬರುವ ಕಾವೇರಿ ಮತ್ತು ಹೇಮಾವತಿ ನಾಲಾ ವ್ಯಾಪ್ತಿಯ ಕೆರೆಗಳನ್ನೂ ಅಧಿಕಾರಿಗಳು ತುಂಬಿಸಲಿಲ್ಲ. ಇದರಿಂದಾಗಿ ಬೆಳೆಗಳನ್ನು ರಕ್ಷಣೆ ಮಾಡಲಾಗದೆ ಜನಪ್ರತಿನಿಧಿಗಳು, ನೀರಾವರಿ ಇಲಾಖೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾ ರೈತರು ಕೈಚೆಲ್ಲಿ ಕುಳಿತಿದ್ದಾರೆ. -------------------------- ಯಾಕಾದರೂ ಬೆಳೆ ಹಾಕಿದೆವೋ ಅನ್ನಿಸುತ್ತಿದೆ..! ಪಂಪ್‌ಸೆಟ್‌ಗಳನ್ನು ನಂಬಿಕೊಂಡು ಟಮೋಟೋ, ಬೀನಿಸ್, ಮೆಣಸಿನಕಾಯಿ ಬೆಳೆ ಹಾಕಿದ್ದೇವೆ. ನೀರು ಹಾಯಿಸುವುದಕ್ಕೆ ಕರೆಂಟೇ ಸಿಗುತ್ತಿಲ್ಲ. ಹಿಂದೆ ಹಗಲಿನ ವೇಳೆ ಐದು ಗಂಟೆ ವಿದ್ಯುತ್ ಕೊಡುತ್ತಿದ್ದರು. ಈಗ ಎರಡರಿಂದ ಮೂರು ಗಂಟೆ ಕೊಡೋದೇ ಹೆಚ್ಚು. ಅಧಿಕಾರಿಗಳನ್ನ ಕೇಳಿದರೆ ಲೋಡ್ ಇಲ್ಲ ಅಂತಾರೆ. ಎರಡು ಗಂಟೆ ಕೊಡುವ ಕರೆಂಟ್‌ನಿಂದ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ಅದು ಯಾವ ಸಮಯದಲ್ಲಿ ಕೊಡುವರೋ ಗೊತ್ತಾಗದು. ಎಲ್ಲಾ ಕೆಲಸ ಬಿಟ್ಟು ಕರೆಂಟ್ ಬರುವುದನ್ನು ಕಾಯುವುದೇ ದೊಡ್ಡ ಕೆಲಸವಾಗಿದೆ ಎಂದು ತೂಬಿನಕೆರೆ ರೈತ ಸಿದ್ದರಾಮು ಅಳಲು ತೋಡಿಕೊಂಡರು. ನಮ್ಮ ಗೋಳು ಯಾರತ್ರ ಹೇಳೋಣ..! ಕರೆಂಟ್ ಇಲ್ಲದೆ ನಾವು ಪಡ್ತಾ ಇರೋ ಪಾಡು ಆ ದೇವರಿಗೇ ಪ್ರೀತಿ. ನಮ್ಮ ಗೋಳನ್ನ ಕೇಳೋರೇ ಇಲ್ಲವಾಗಿದೆ. ಬೆಳೆ ಹಾಕಿಬಿಟ್ಟಿದ್ದೀವಿ. ದೇವರ ಮೇಲೆ ಭಾರ ಹಾಕಿದ್ದೀವಿ. ಇನ್ನು ಮಳೆ ಅಂತೂ ಬರೋಲ್ಲ. ಕರೆಂಟ್ ಸಿಗುತ್ತೋ ಇಲ್ವೋ ಗೊತ್ತಿಲ್ಲ. ದಿನಾ ಕರೆಂಟ್‌ಗಾಗಿ ಕಾದುಕೂರುವುದೇ ಆಗಿದೆ. ಎರಡು ಅಥವಾ ಮೂರು ಗಂಟೆ ಸಿಗೋದೇ ಹೆಚ್ಚಾಗಿದೆ. ಬೆಳೆಗಳಿಗೆ ನೀರು ಸಾಕಾಗುತ್ತಿಲ್ಲ. ಕರೆಂಟ್ ಯಾವಾಗಂದ್ರೆ ಅವಾಗ ಬರುತ್ತೆ, ಹೋಗುತ್ತೆ. ಈ ಕಣ್ಣಾಮುಚ್ಚಾಲೆ ಆಟದಲ್ಲಿ ಬೆಳೆ ಉಳಿಸಿಕೊಳ್ಳುವುದು ದುಸ್ಸಾಹಸವಾಗಿದೆ ಎಂದು ರೈತ ಬಸವರಾಜು ಬೇಸರ ವ್ಯಕ್ತಪಡಿಸಿದರು.

Share this article