ಕನ್ನಡಪ್ರಭ ವಾರ್ತೆ ಲೋಕಾಪುರ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಈರುಳ್ಳಿ ಬೆಳೆ ಮಣ್ಣು ಪಾಲಾಗಿದೆ. ರೈತರನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ. ಹವಾಮಾನ ಮಾಹಿತಿ ಪ್ರಕಾರ ಲೋಕಾಪುರ ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ನಸುಕಿನ ಜಾವದವರೆಗೆ ೪೬.೪ ಮೀಮೀ ನಷ್ಟು ಮಳೆ ಸುರಿದಿದೆ ತಿಳಿದು ಬಂದಿದೆ.ಈ ಮಳೆಯಿಂದ ಸಾವಿರಾರು ಎಕೆರೆಯಲ್ಲಿ ಬೆಳೆದಂತಹ ಈರುಳ್ಳಿ ಬೆಳೆ ಮಳೆ ನೀರಿನಲ್ಲಿ ನಿಂತಿದ್ದರಿಂದ ಸಂಪೂರ್ಣ ಹಾನಿಗೀಡಾಗಿದ. ಪ್ರಾರಂಭದಲ್ಲಿ ಮಳೆ ಮತ್ತು ಪೂರಕ ವಾತಾವರಣದಿಂದ ಬೆಳೆಗಳು ಉತ್ತಮ ರೀತಿಯಲ್ಲಿ ಬೆಳೆದಿದ್ದವು. ಆದರೆ ನಿರಂತರ ಮಳೆಯಿಂದಾಗಿ ಜಮೀನಿನಲ್ಲಿಯೇ ಈರುಳ್ಳಿ ಕೊಳೆತು ಹೋಗಿವೆ. ರೈತರಿಗೆ ಕೈ ಬಂದಂತಹ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತರು ತಮ್ಮ ನೋವನ್ನು ತೋಡಿಕೊಂಡರು. ಈರುಳ್ಳಿ ಗಡ್ಡೆಗಳು ಕಿತ್ತು ಹಾಕಿದಲ್ಲೇ ಕೊಳೆತು ಮಣ್ಣುಪಾಲಾಗಿದೆ. ಇನ್ನೇನು ಕಿತ್ತು ಮಾರುಕಟ್ಟೆಗೆ ಸಾಗಿಸಬೇಕು ಎಂದುಕೊಂಡಿದ್ದ ರೈತರು ಪೇಚಾಡುವಂತಾಗಿದೆ ಎಂದು ರೈತ ರವಿಗೌಡ ಖಜ್ಜಿಡೋಣಿ ಹೇಳಿದರು. ಪಟ್ಟಣ ಮತ್ತು ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಬೆಳಗ್ಗೆ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಹಳ್ಳ, ಕೊಳ್ಳ, ವಾರ್ಡ್, ಓಣಿಗಳಲ್ಲಿ ನೀರು ತುಂಬಿ ಸಾರ್ವಜನಿಕರಿಗೆ ತೊಂದರೆಯಾಗಿದೆ. ₹೫ ಕೋಟಿ ವೆಚ್ಚದಲ್ಲಿ ಚರಂಡಿ ನಿರ್ಮಾಣಕಾರ್ಯ ಅರ್ಧಕ್ಕೆ ನಿಂತಿದ್ದರಿಂದ ಮಳೆ ನೀರು ಹೋಗದೆ ರಸ್ತೆಯ ಮೇಲೆ ನಿಂತಿದ್ದು, ಸಂತೆ ದಿನವಾಗಿದ್ದರಿಂದ ಸಾರ್ವಜನಿಕರಿಗೆ ತುಂಬಾ ಕಿರಿಕಿರಿಯಾಯಿತು. ಮಹಾದ್ವಾರ, ವೃಂದಾವನ ಹೋಟೆಲ್, ಹಣಮಂತ ದೇವಸ್ಥಾನ ಹಿಂದಿನಿಂದ ಮುಧೋಳ ಹೆದ್ದಾರಿ ರಸ್ತೆ ಕೊಡುವ ರಸ್ತೆ ನೀರು ನಿಂತಿದ್ದರಿಂದ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ವಾಹನ ಸವಾರರಿಗೆ ತೊಂದರೆಯಾಗಿದ್ದರಿಂದ ಕಾಮಗಾರಿಯ ಅವ್ಯವಸ್ಥೆ ಕುರಿತು ಸಂಬಂಧಪಟ್ಟಣ ಅಧಿಕಾರಿಗಳಾದ ಪಟ್ಟಣ ಪಂಚಾಯತಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರು ಹಿಡಿಶಾಪ ಹಾಕಿದ್ದು ಕಂಡು ಬಂದಿತು. ಲೋಕಾಪುರ ಹೊಬಳಿಯ ಗ್ರಾಮಗಳಾದ ದಾದನಟ್ಟಿ, ಕಿಲ್ಲಾ ಹೊಸಕೊಟಿ, ಹೆಬ್ಬಾಳ, ಮುದ್ದಾಪುರ, ತಿಮ್ಮಾಪುರ, ಚಿಕ್ಕೂರ, ಭಂಟನೂರ, ಬದ್ನೂರು, ಜುನ್ನೂರ, ಕಾಡರಕೊಪ್ಪ ಅಪಾರ ಪ್ರಮಾಣ ಮಳೆಯಾಗಿದ್ದರಿಂದ ರೈತರ ಹೊಲ ಗದ್ದೆಗಳಲ್ಲಿ ಈರುಳ್ಳಿ ಬೆಳೆ ನಾಶವಾಗಿದ್ದು, ಮೆಕ್ಕೆಜೋಳ, ಟೊಮೆಟು, ಕಾಯಿಪಲ್ಲೆ, ತರಕಾರಿಗಳು ಮಳೆಗೆ ನೆಲೆ ಕಚ್ಚಿ ಹೋಗಿದೆ.
ಕೋಟ್...ಬಸವೇಶ್ವರ ವೃತ್ತದಿಂದ ಶಿವಾಜಿ ವೃತ್ತದವರೆಗೆ ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದ್ದರಿಂದ ಮಳೆ ನೀರು ಹೋಗದೆ ರಸ್ತೆ ಮೇಲೆ ನಿಂತಿದ್ದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಆದಷ್ಟು ಬೇಗನೆ ಪಟ್ಟಣ ಪಂಚಾಯತಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅರ್ಧಕ್ಕೆ ನಿಂತ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲಮಾಡಿಕೊಡಬೇಕು.
- ಪ್ರಕಾಶ ಚುಳಕಿ, ಸ್ಥಳೀಯರು.ಸಾಲ ಮಾಡಿ ಬೀಜ ಗೊಬ್ಬರ ಹಾಕಿ ಮನೆ ಮಂದಿಯಲ್ಲಾ ಮೂರು ತಿಂಗಳ ಕಾಲ ಹೊಲದಲ್ಲಿ ದುಡಿದು ಈರುಳ್ಳಿ ಬೆಳೆದೆವು. ಉತ್ತಮ ಫಲ ಬಂದಿತ್ತು. ಹೈದರಾಬಾದ, ಬೆಳಗಾವಿ ಮಾರುಕಟೆಯಲ್ಲ್ಟಿ ಬೆಲೆಯು ಉತ್ತಮವಾಗಿತ್ತು. ಆದರೆ, ಮಳೆಯಿಂದ ಎಲ್ಲವೂ ನುಚ್ಚು ನೂರಾಗಿದೆ. ಸರ್ಕಾರ ರೈತರಿಗೆ ಪರಿಹಾರ ನೀಡಬೇಕು.-ನಿಂಗಪ್ಪ ಗಂಗರಡ್ಡಿ, ಬಾಬು ಕರ್ನಾಚಿ ಈರುಳ್ಳಿ ಬೆಳೆದ ನೊಂದ ರೈತರು.
ಬಾಗಲಕೋಟೆ ಜಿಲ್ಲಾದ್ಯಂತ ಮಳೆಯಿಂದ ಸಾವಿರಾರು ಎಕರೆ ಬೆಳೆದಂತಹ ಈರುಳ್ಳಿ ಬೆಳೆ ಸಂಪೂರ್ಣ ಹಾನಿಯಾಗಿದ್ದು, ಸರ್ಕಾರ ಮಳೆ ಹಾನಿ ಸಮೀಕ್ಷೆ ನಡೆಸಿ ರೈತರ ಈರುಳ್ಳಿ ಬೆಳೆಗೆ ಪರಿಹಾರ ನೀಡಬೇಕು.-ಲೋಕಣ್ಣ ಉಳ್ಳಾಗಡ್ಡಿ, ಈರುಳ್ಳಿ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಲೋಕಾಪುರ.