ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕೋಳಿ ಬೆಳೆಗಾರರ ಅಭಿವೃದ್ಧಿ ಒಕ್ಕೂಟದ ಮಹಾಸಭೆಯು ಮಂಗಳವಾರ ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಒಕ್ಕೂಟದ ಅಧ್ಯಕ್ಷ ಪ್ರಭಾಕರ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಪ್ರಭಾಕರ ಸುವರ್ಣ ಅವರು ಕೋಳಿ ಬೆಳೆಗಾರರಿಗೆ ಪ್ರತೀ ಕೆ.ಜಿ.ಗೆ ೧೦ ರೂಪಾಯಿ ನೀಡಬೇಕೆಂದು ಸರಕಾರ ಆದೇಶ ನೀಡಿದ್ದರೂ ಖಾಸಗಿ ಕಂಪನಿಯವರು ಇದನ್ನು ಪರಿಗಣಿಸಿಲ್ಲ. ಹೀಗಾಗಿ ಅಖಿಲ ಕರ್ನಾಟಕ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಇತರ ಸಂಘಟನೆಗಳ ಜೊತೆ ಸೇರಿ ಪಶು ಸಂಗೋಪನೆ ಇಲಾಖೆಗೆ ಮನವಿ ಸಲ್ಲಿಸಲಾಗುವುದು. ಅಗತ್ಯ ಬಿದ್ದಲ್ಲಿ ಬ್ರಹತ್ ಪ್ರತಿಭಟನೆ ನಡೆಸಲಾಗುವುದು. ಕೋಳಿ ಸಾಕಾಣಿಕೆ ಒಂದು ಕೃಷಿ ಕಸುಬು ಆಗಿರುವುದರಿಂದ ಕೃಷಿಗೆ ಸಿಗುವ ಎಲ್ಲ ಸವಲತ್ತುಗಳು ಕೋಳಿ ಬೆಳೆಗಾರರಿಗೆ ಸಿಗಬೇಕಿದೆ. ಆದರೆ ಇನ್ನೂ ಅನೇಕ ಸವಲತ್ತುಗಳು ಸಿಗದೇ ಇರುವ ಕಾರಣ ಕೋಳಿ ಬೆಳೆಗಾರರೆಲ್ಲ ಸೇರಿಕೊಂಡು ಸಂಘಟಿತ ಹೋರಾಟ ನಡೆಸಬೇಕಿದೆ ಎಂದು ತಿಳಿಸಿದರು.
ಮಹಾಸಭೆ ಉದ್ಘಾಟಿಸಿದ ಗೌರವ ಸಲಹೆಗಾರ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ ನಾವು ಕೋಳಿ ಬೆಳೆಗಾರರು ಸಂಘಟಿತರಾಗಿ ಹೋರಾಟ ಮಾಡಿದರೆ ಮಾತ್ರ ಸರಕಾರ ಹಾಗೂ ಕಂಪನಿಗಳು ನಮ್ಮ ಬೇಡಿಕೆಗಳನ್ನು ಈಡೇರಿಸಲು ಸಾಧ್ಯ. ನಾವು ಧನಾತ್ಮಕವಾಗಿ ಚಿಂತಿಸಿ ನಮ್ಮದೇ ಆದ ಸಹಕಾರಿ ಸಂಘ ಸ್ಥಾಪಿಸಿ ಅದರ ಮೂಲಕ ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡಲು ಸಾಧ್ಯ ಎಂದು ಹೇಳಿದರು.
ಒಕ್ಕೂಟದ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಕೆಡೆಂಜಿ ಗುತ್ತು ಮಾತನಾಡಿ ಒಕ್ಕೂಟ ಬೆಳೆದು ಬಂದ ದಾರಿ ಮತ್ತು ಮುಂದಿನ ಹಾದಿಯನ್ನು ವಿವರಿಸಿದರು. ಒಕ್ಕೂಟದ ತಾಲೂಕು ಘಟಕದ ಪದಾ ಕಾರಿಗಳು ತಾಲೂಕು ಮಟ್ಟದಲ್ಲಿ ಬೆಳೆಗಾರರನ್ನು ಸಂಘಟಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.ಕೋಶಾಧಿಕಾರಿ ಸನತ್ ಮುಳುಗಾಡು ಲೆಕ್ಕಪತ್ರ ಮಂಡಿಸಿದರು. ಜೈರಾಜ್ ಭಂಡಾರಿ ಸಂಘಟನೆ ಬಗ್ಗೆ ಮಾಹಿತಿ ನೀಡಿದರು. ದಿವ್ಯನಾಥ್ ಶೆಟ್ಟಿ ಕಾವು, ಮಿತ್ರದಾಸ್ ರೈ, ದಿನೇಶ್ ಶೆಟ್ಟಿ ಕುಂಬ್ರ, ಸಚಿನ್ ರೈ ಬೆಳ್ಳಾರೆ, ಪ್ರಕಾಶ್ ಉಜಿರೆ ಉಪಸ್ಥಿತರಿದ್ದರು.