ಬಸ್‌ ಇಲ್ಲದೇ ನಿಲ್ದಾಣಗಳಲ್ಲಿ ಜನಜಾತ್ರೆ

KannadaprabhaNewsNetwork | Published : Nov 28, 2023 12:30 AM

ಸಾರಾಂಶ

ಕಳೆದ ಕೆಲವು ದಿನಗಳಿಂದ ಬಸ್‌ ಪ್ರಯಾಣಿಕರ ಪರದಾಟ ಮಿತಿಮೀರಿದೆ. ಬಸ್‌ ನಿಲ್ದಾಣದಲ್ಲಿ ಇಡೀ ದಿನ ಪ್ರಯಾಣಿಕರ ಜಾತ್ರೆಯೇ ನೆರೆದಿರುತ್ತದೆ. ಯಾವ ಬಸ್‌ಗಳಲ್ಲೂ ಹತ್ತಲು ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಬಸ್‌ ಪ್ರಯಾಣವೇ ಸಾಕು ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಕಳೆದ ಕೆಲವು ದಿನಗಳಿಂದ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಬವಣೆ ಹೇಳತೀರದಾಗಿದೆ. ಅದರಲ್ಲೂ ಹಬ್ಬ, ಹುಣ್ಣಿಮೆ ಬಂತೆಂದರೆ ನಿಲ್ದಾಣದಲ್ಲೇ ಜಾತ್ರೆಯ ವಾತಾವರಣ ಕಂಡುಬರುತ್ತಿದೆ. ಸೋಮವಾರ ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಜಿಲ್ಲೆಯಿಂದಲೇ ಸಾವಿರಾರು ಪ್ರಯಾಣಿಕರು ತೆರಳಿದ್ದಾರೆ. ಒಂದು ಬಸ್‌ ನಿಲ್ದಾಣ ಪ್ರವೇಶಿಸುತ್ತಿದ್ದಂತೆ, ಪಾರ್ಕಿಂಗ್ ಮಾಡುವ ಮುನ್ನವೇ ಜನ ಮುತ್ತಿಗೆ ಹಾಕುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ

ಶಕ್ತಿ ಯೋಜನೆ ಬಳಿಕವೂ ಹಿಂದಿನಷ್ಟೇ ಬಸ್‌ ಓಡಿಸುತ್ತಿರುವ ಸಂಸ್ಥೆ

ಬಸ್‌ಗಳು ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಸೀಟು ಹಿಡಿಯಲು ಮುತ್ತಿಕೊಳ್ಳುವ ಪ್ರಯಾಣಿಕರುನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

ಕಳೆದ ಕೆಲವು ದಿನಗಳಿಂದ ಬಸ್‌ ಪ್ರಯಾಣಿಕರ ಪರದಾಟ ಮಿತಿಮೀರಿದೆ. ಬಸ್‌ ನಿಲ್ದಾಣದಲ್ಲಿ ಇಡೀ ದಿನ ಪ್ರಯಾಣಿಕರ ಜಾತ್ರೆಯೇ ನೆರೆದಿರುತ್ತದೆ. ಯಾವ ಬಸ್‌ಗಳಲ್ಲೂ ಹತ್ತಲು ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಬಸ್‌ ಪ್ರಯಾಣವೇ ಸಾಕು ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಬವಣೆ ಹೇಳತೀರದಾಗಿದೆ. ಅದರಲ್ಲೂ ಹಬ್ಬ, ಹುಣ್ಣಿಮೆ ಬಂತೆಂದರೆ ನಿಲ್ದಾಣದಲ್ಲೇ ಜಾತ್ರೆಯ ವಾತಾವರಣ ಕಂಡುಬರುತ್ತಿದೆ. ಸೋಮವಾರ ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಜಿಲ್ಲೆಯಿಂದಲೇ ಸಾವಿರಾರು ಪ್ರಯಾಣಿಕರು ತೆರಳಿದ್ದಾರೆ. ಒಂದು ಬಸ್‌ ನಿಲ್ದಾಣ ಪ್ರವೇಶಿಸುತ್ತಿದ್ದಂತೆ, ಪಾರ್ಕಿಂಗ್ ಮಾಡುವ ಮುನ್ನವೇ ಜನ ಮುತ್ತಿಗೆ ಹಾಕುತ್ತಿದ್ದಾರೆ. ಇದನ್ನು ವೃದ್ಧರು, ಅಶಕ್ತರು ಅಸಹಾಯಕರಂತೆ ನೋಡುವಂತಾಗಿದೆ. ಸೀಟು ಸಿಗದೇ, ಬೇರೆ ಬಸ್‌ ಹತ್ತೋಣ ಎಂದು ಕಾದು ಮತ್ತದೇ ಸ್ಥಿತಿ ಕಂಡು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಯೋಜನೆ ಆರಂಭದ ಕೆಲವು ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿತ್ತು. ನಂತರ ಸಹಜ ಸ್ಥಿತಿಗೆ ಬಂದಂತೆ ಕಂಡುಬಂದಿತಾದರೂ ಕಳೆದ ಒಂದು ತಿಂಗಳಿಂದ ಈಚೆಗೆ ಮತ್ತೆ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡುಬರುತ್ತಿದೆ. ಉದ್ಯೋಗ ನಿಮಿತ್ತ ನಿತ್ಯವೂ ಸಂಚರಿಸುವವರು ನಿಂತೇ ಪ್ರಯಾಣಿಸುವಂತಾಗಿದೆ. ಶಾಲಾ- ಕಾಲೇಜು ವಿದ್ಯಾರ್ಥಿಗಳಿಗಂತೂ ಸೀಟು ಮರೀಚಿಕೆಯಾಗಿದೆ. ನಿತ್ಯವೂ ಸೀಟಿಗಾಗಿ ಕಿತ್ತಾಟ ಸಾಮಾನ್ಯವಾಗಿದೆ. ಶಕ್ತಿ ಯೋಜನೆ ಸೈಡ್ ಎಫೆಕ್ಟ್‌ ಎಂಬುದು ಅನೇಕರ ಅಭಿಪ್ರಾಯವಾಗಿದೆ.

2.18 ಕೋಟ ಮಹಿಳಾ ಪ್ರಯಾಣಿಕರು:

ಶಕ್ತಿ ಯೋಜನೆ ಕಳೆದ ಜೂನ್ 11ರಂದು ಆರಂಭವಾದಾಗಿನಿಂದ ಅಕ್ಟೋಬರ್ ಅಂತ್ಯದವರೆಗೆ ಜಿಲ್ಲೆಯಲ್ಲಿ 2.18 ಕೋಟಿ ಮಹಿಳಾ ಪ್ರಮಾಣಿಕರು ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಈ ತಿಂಗಳ ಅಂತ್ಯಕ್ಕೆ ಈ ಸಂಖ್ಯೆ ಸುಮಾರು ಎರಡುವರೆ ಕೋಟಿ ದಾಟಲಿದೆ. ಜೂನ್‌ನಲ್ಲಿ ನಿತ್ಯ ಸರಾಸರಿ 2.56 ಪ್ರಯಾಣಿಕರು ಸಂಚರಿಸಿದ್ದರೆ, ಈ ಪೈಕಿ 1.44 ಲಕ್ಷ ಮಹಿಳಾ ಪ್ರಯಾಣಿಕರು ಪ್ರತಿ ದಿನ ಸಂಚರಿಸಿದ್ದಾರೆ.

ಜುಲೈನಲ್ಲಿ ನಿತ್ಯ 2.57 ಲಕ್ಷ ಪ್ರಯಾಣಿಕರಲ್ಲಿ 1.55 ಲಕ್ಷ ಮಹಿಳೆಯರು ಸಂಚರಿಸಿದ್ದಾರೆ. ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸಿದ್ದಾರೆ. ಜೂನ್‌ನಲ್ಲಿ 28.47 ಲಕ್ಷ, ಜುಲೈನಲ್ಲಿ 48.25 ಲಕ್ಷ, ಆಗಸ್ಟ್‌ನಲ್ಲಿ 44.64 ಲಕ್ಷ, ಸೆಪ್ಟೆಂಬರ್‌ನಲ್ಲಿ 49.82 ಲಕ್ಷ, ಅಕ್ಟೋಬರ್‌ನಲ್ಲಿ 47.28 ಲಕ್ಷ ಸೇರಿದಂತೆ ಯೋಜನೆ ಆರಂಭದಿಂದ ಅಕ್ಟೋಬರ್‌ ಅಂತ್ಯದವರೆಗೆ 2,18, 88,308 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ.

ಬಸ್‌ಗಳ ಕೊರತೆ:

ಶಕ್ತಿ ಯೋಜನೆ ಬಳಿಕ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಸಂಚರಿಸುವವರ ಸಂಖ್ಯೆ ದುಪ್ಪಟ್ಟಾಗಿದೆ. ಶಕ್ತಿ ಯೋಜನೆಗೂ ಮುನ್ನ ಜಿಲ್ಲೆಯಲ್ಲಿ 485 ಶೆಡ್ಯೂಲ್‌ ಇದ್ದದ್ದು ಈಗ 495 ಶೆಡ್ಯೂಲ್‌ಗಳಲ್ಲಿ ಬಸ್‌ ಓಡಿಸಲಾಗುತ್ತಿದೆ. ಈ ಅವಧಿಯಲ್ಲಿ ಕೇವಲ 8 ಹೊಸ ಬಸ್‌ಗಳನ್ನು ಜಿಲ್ಲೆಗೆ ನೀಡಲಾಗಿದೆ. ಇನ್ನೂ ಕನಿಷ್ಠ 30 ಬಸ್‌ಗಳನ್ನು ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ಇದುವರೆಗೆ ನೀಡಿಲ್ಲ. ಇರುವಷ್ಟೇ ಬಸ್‌ಗಳಲ್ಲಿ ದುಪ್ಪಟ್ಟು ಪ್ರಯಾಣಿಕರು ಸಂಚರಿಸುವಂತಾಗಿರುವುದರಿಂದ ಸಮಸ್ಯೆ ಬಿಗಡಾಯಿಸಿದೆ.

ಬಸ್‌ ಫುಲ್‌:

ಈ ಮೊದಲೆಲ್ಲ ಹುಬ್ಬಳ್ಳಿ, ಬೆಂಗಳೂರು ಮಾರ್ಗದಲ್ಲಿ ಹಾವೇರಿಯಿಂದ ಬೇಕಾದಷ್ಟು ಬಸ್‌ಗಳು ಸಿಗುತ್ತಿದ್ದವು. ಆದರೆ, ಈಗ ಬಸ್‌ಗಳು ಅಷ್ಟೇ ಇದ್ದರೂ ಅವು ಭರ್ತಿಯಾಗಿಯೇ ಬರುತ್ತಿವೆ. ಇದರಿಂದ ಅನೇಕರು ನಿಂತೇ ಪ್ರಯಾಣಿಸುತ್ತಿದ್ದಾರೆ. ಅದರಲ್ಲೂ ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಪ್ರಯಾಣ ಮತ್ತಷ್ಟು ಪ್ರಯಾಸವಾಗಿರುತ್ತದೆ. ಯಾವ ಮಾರ್ಗದ ಬಸ್‌ ನೋಡಿದರೂ ಭರ್ತಿಯಾಗಿಯೇ ಹೋಗುತ್ತಿವೆ. ಹೆಚ್ಚಿನ ವಾಹನ ನೀಡದೇ ಹೋದರೆ ಸಮಸ್ಯೆ ಮುಂದುವರಿಯುವುದರಲ್ಲಿ ಅನುಮಾನವಿಲ್ಲ.

ಶಾಲಾ-ಕಾಲೇಜು ವಿದ್ಯಾರ್ಥಿಗಳ ಪ್ರವಾಸ, ಮದುವೆ ಸಮಾರಂಭಗಳಿಗೆ ನಿತ್ಯ 5ರಿಂದ 8 ಬಸ್‌ಗಳು ಬುಕ್ಕಿಂಗ್ ಆಗುತ್ತಿವೆ. ಇರುವ ಬಸ್‌ಗಳನ್ನೇ ಹೊಂದಾಣಿಕೆ ಮಾಡಿಕೊಂಡು ಪ್ರಯಾಣಿಕರಿಗೆ ತೊಂದರೆಯಾಗದ ರೀತಿಯಲ್ಲಿ ನಿರ್ವಹಿಸುತ್ತಿದ್ದೇವೆ. ಹೊಸ ಬಸ್‌ಗಳು ಬಂದರೆ ಸಮಸ್ಯೆ ನಿವಾರಣೆಯಾಗಲಿವೆ ಎನ್ನುತ್ತಾರೆ ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಶಶಿಧರ.

₹62.94 ಕೋಟಿ ಅನುದಾನ ಬರಬೇಕು:

ಮಹಿಳಾ ಪ್ರಯಾಣಿಕರಿಂದ ಜೂನ್‌ನಲ್ಲಿ ₹7.89 ಕೋಟಿ, ಜುಲೈನಲ್ಲಿ ₹13.04 ಕೋಟಿ, ಆಗಸ್ಟ್‌ನಲ್ಲಿ ₹13.79 ಕೋಟಿ, ಸೆಪ್ಟೆಂಬರ್‌ನಲ್ಲಿ ₹13.89 ಕೋಟಿ, ಅಕ್ಟೋಬರ್‌ನಲ್ಲಿ ₹14.33 ಕೋಟಿ ಆದಾಯವು ಹಾವೇರಿ ವಿಭಾಗಕ್ಕೆ ಬಂದಿದೆ. ಒಟ್ಟು ₹62.94 ಕೋಟಿ ಅನುದಾನ ಸರ್ಕಾರದಿಂದ ಬರಬೇಕಿದೆ.

Share this article