ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ

| Published : Sep 18 2025, 01:12 AM IST

ಸಾರಾಂಶ

ಜನಸಾಮಾನ್ಯರ ಬದುಕಿಗೆ ನೆಮ್ಮದಿ ತರುವ ನಿಟ್ಟಿನಲ್ಲಿ, ಹಣದುಬ್ಬರ ನಿಯಂತ್ರಿಸುವ ದೃಷ್ಟಿಯಲ್ಲಿ ಜಿಎಸ್‌ಟಿ ಸ್ಲ್ಯಾಬ್ ಬದಲಾವಣೆ ಅಭೂತಪೂರ್ವ ಪರಿವರ್ತನೆ ಆಗಿದೆ

ಕನ್ನಡಪ್ರಭ ವಾರ್ತೆ ಇಂಡಿ

ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್‌ಟಿ ಕಡಿತ ಮತ್ತು ಸರಳೀಕರಣದ ಘೋಷಣೆ ಸ್ವಾಗತಾರ್ಹ. ಆಹಾರೋತ್ಪನ್ನಗಳಿಗೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸೊನ್ನೆದಾಯಕ ತೆರಿಗೆ ಮತ್ತು ಕೆಲವು ವಸ್ತುಗಳಿಗೆ ತೆರಿಗೆ ಕಡಿಮೆಗೊಳಿಸಿ ಮೋದಿಯವರು ಬಡವರ ಪರ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜಿಎಸ್‌ಟಿ ಪರಿಷ್ಕರಿಸಿ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಅನುಕೂಲ ಮಾಡಿಕೊಟ್ಟಿರುವ ಕೇಂದ್ರ ಸರ್ಕಾರದ ಕ್ರಮ ಸ್ವಾಗತಾರ್ಹ. ಇದರಿಂದ ವ್ಯಾಪಾರಸ್ಥರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗಲಿದೆ. ನವರಾತ್ರಿ ಆರಂಭಕ್ಕೂ ಒಂದು ದಿನ ಮುನ್ನ ಜಿಎಸ್‌ಟಿ ಕಡಿತವಾಗಲಿದೆ. ಕಾರು, ಬೈಕ್, ಮಾತ್ರೆಗಳು ಹಾಗೂ ಅಗತ್ಯ ವಸ್ತುಗಳ ದರ ಕಡಿಮೆಯಾಗಲಿದೆ ಎಂದು ಹೇಳಿದರು.

ಜಿಎಸ್‌ಟಿ ತೆರಿಗೆ ಬಂದು 5 ವರ್ಷ ತುಂಬಿದೆ. ಸರಳೀಕರಣದಿಂದ ಸಣ್ಣ ವ್ಯಾಪಾರಸ್ಥರಿಗೆ, ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಘೋಷಣೆ ಮಾಡಿದ್ದಾರೆ. ಐದು ವರ್ಷದ ಅನುಭವದಲ್ಲಿ ಕೆಲವು ಬದಲಾವಣೆ ಬಯಸಿ, ರೈತರು, ಸಣ್ಣ ವ್ಯಾಪಾರಸ್ಥರು, ದೊಡ್ಡ ವ್ಯಾಪಾರಸ್ಥರು ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ತೆರಿಗೆಯ ಸ್ಲ್ಯಾಬ್‌ ಕಡಿಮೆ ಮಾಡಬೇಕು ಮತ್ತು ಕೆಲವು ವಸ್ತುಗಳ ತೆರಿಗೆ ಕಡಿಮೆ ಮಾಡಲು ನಿರ್ಧರಿಸಿದೆ. ಈ ತೀರ್ಮಾನಕ್ಕಾಗಿ ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಗ್ರೂಪ್ ಒಂದೂವರೆ ವರ್ಷ ಅಧ್ಯಯನ ನಡೆಸಿ ಹಲವು ಸರಳೀಕರಣ ಮತ್ತು ವರ್ಗೀಕರಣ ಮಾಡಿ ವರದಿ ನೀಡಲಾಗಿದೆ. ಬಹಳಷ್ಟು ದಿನಬಳಕೆ ವಸ್ತುಗಳನ್ನು ಕಡಿಮೆ ಸ್ಲ್ಯಾಬ್‌ನಲ್ಲಿ ಹಾಕುವ ನಿರ್ಧಾರಕ್ಕೆ ಬರಲಾಗಿದೆ. ವ್ಯಾಪಾರಸ್ಥರಿಗೆ ಮತ್ತು ಖರೀದಿದಾರರಿಗೆ ಅನುಕೂಲವಾಗುವ ರೀತಿಯಲ್ಲಿ ಸಲಹೆ ಸೂಚನೆಗಳನ್ನು ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಮಂಡನೆ ಮಾಡಲಾಗಿದೆ ಎಂದು ತಿಳಿಸಿದರು.

ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಒಪ್ಪಿರುವ ಕೆಲವು ತಿದ್ದುಪಡಿಗಳನ್ನು ತರಬೇಕೆಂದು ಕೇಂದ್ರ ಸರ್ಕಾರದ ತೀರ್ಮಾನವನ್ನು ಕೆಂಪು ಕೋಟೆಯಿಂದ ಪ್ರಧಾನಿ ಮೋದಿ ಘೋಷಣೆ ಮಾಡಿರುವುದು ಸ್ವಾಗತಾರ್ಹ. ತೆರಿಗೆಯ ಸರಳೀಕರಣ ಮಹತ್ವದ ಹೆಜ್ಜೆ ಘೋಷಣೆ ಮಾಡಿದ್ದಾರೆ. ಇದೊಂದು ದೀಪಾವಳಿಗೆ ನರೇಂದ್ರ ಮೋದಿ ಅವರು ಮಾಡುತ್ತಿರುವ ಕೊಡುಗೆಯಾಗಿದೆ. ರಾಷ್ಟ್ರವೇ ಸ್ವಾಗತ ಮಾಡುತ್ತದೆ ಎನ್ನುವ ವಿಶ್ವಾಸವಿದೆ. ಜಿಎಸ್‌ಟಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡುವ ಮೂಲಕ ಆರ್ಥಿಕ ಸುಧಾರಣೆಯ ಹೊಸ ದಿಕ್ಕಿಗೆ ಭಾರತ ಹೆಜ್ಜೆ ಹಾಕುವಂತೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.

ಮಧ್ಯಮ ಮತ್ತು ಕೆಳ ಮಧ್ಯಮವರ್ಗದ ಜನ ಬಳಸುವ ವಾಹನಗಳ ಮೇಲಿನ ತೆರಿಗೆಯನ್ನು ಭಾರಿ ಪ್ರಮಾಣದಲ್ಲಿ ಕಡಿತ ಗೊಳಿಸುವ ಕ್ರಮ ಕಾರು, ದ್ವಿಚಕ್ರ ಕೊಳ್ಳುವ ಬಡವರ ಕನಸನ್ನು ನನಸಾಗಿಸುತ್ತದೆ. ಶ್ಯಾಂಪೂ, ಫೇಸ್ ಪೌಡರ್ ಸೇರಿ, ಭಾರತೀಯ ಬ್ರೆಡ್, ಪಿಜ್ಜಾ, ರೊಟ್ಟಿ, ಪನ್ನೀರ್, ಕೆಲವು ಧಾನ್ಯಗಳ ಮೇಲಿನ ಜಿಎಸ್‌ಟಿ ಇಳಿಕೆ ಅತ್ಯುತ್ತಮ ಕ್ರಮ ಆಗಿದೆ. ರೈತರು ಬಳಸುವ ಟ್ರ್ಯಾಕ್ಟರ್ ಸೇರಿ ಕೃಷಿ ಯಂತ್ರೋಪಕರಣದ ವಿಚಾರದಲ್ಲಂತೂ ದೊಡ್ಡ ಮಟ್ಟದಲ್ಲಿ ತೆರಿಗೆ ಕಡಿತ ಆಗಿ, ಬದಲಾವಣೆ ಆಗಿದೆ. ಇದರಿಂದ ಕೃಷಿಯಲ್ಲಿ ಇನ್ನಷ್ಟು ಉತ್ಪಾದನೆ ಸಾಧ್ಯ. ರೈತರ ಬದುಕಲ್ಲಿ ಉಳಿತಾಯ ಮತ್ತು ನೆಮ್ಮದಿ ಮೂಡುವಂತಾಗಿದೆ. ಇನ್ನು ಔಷಧ ಮತ್ತು ವಿಮೆ ವಲಯದಲ್ಲಂತೂ ಭಾರಿ ಸುಧಾರಣೆಯಾಗಿ ಆರೋಗ್ಯ ಕ್ಷೇತ್ರದ ವ್ಯವಸ್ಥೆ ದಿಕ್ಕನ್ನೇ ಕೇಂದ್ರ ಸರ್ಕಾರ ಬದಲಿಸಿದೆ. ಜೀವರಕ್ಷಕ ಔಷಧಿ ಸೇರಿ ಇತರೆ ಔಷಧಿಗಳ ತೆರಿಗೆಯನ್ನು ಶೇ.೫ರ ಸ್ಲ್ಯಾಬ್ ವ್ಯಾಪ್ತಿಗೆ ತಂದು ಮಹತ್ವದ ಬದಲಾವಣೆ ಮಾಡಲಾಗಿದೆ. ಜೀವವಿಮೆ, ಆರೋಗ್ಯ ವಿಮೆಯ ಮೇಲಿನ ತೆರಿಗೆ ಕಡಿತವೂ ಜನಪರ ಕ್ರಮವಾಗಿದ್ದು, ಇದಕ್ಕಾಗಿ ಪ್ರಧಾನಿ ಮೋದಿಯವರ ಜನಪರ ಕಾಳಜಿಗೆ ಅಭಿನಂದಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಜನಸಾಮಾನ್ಯರ ಬದುಕಿಗೆ ನೆಮ್ಮದಿ ತರುವ ನಿಟ್ಟಿನಲ್ಲಿ, ಹಣದುಬ್ಬರ ನಿಯಂತ್ರಿಸುವ ದೃಷ್ಟಿಯಲ್ಲಿ ಜಿಎಸ್‌ಟಿ ಸ್ಲ್ಯಾಬ್ ಬದಲಾವಣೆ ಅಭೂತಪೂರ್ವ ಪರಿವರ್ತನೆ ಆಗಿದೆ. ಮದ್ಯಮ ಮತ್ತು ಬಡವರ್ಗದ ಬದುಕಿಗೆ ನೆರವು ನೀಡುವ ನಿಟ್ಟಿನಲ್ಲಿ, ದಿನಬಳಕೆಯ ವಸ್ತುಗಳ ದರವನ್ನು ತಗ್ಗಿಸುವ ನಿಟ್ಟಿನಲ್ಲಿ ಇದೊಂದು ಶ್ಲಾಘನಾರ್ಹ ಆರ್ಥಿಕ ಸುಧಾರಣಾ ಕ್ರಮ. ಬಡ, ಮಧ್ಯಮ ವರ್ಗ ಅಷ್ಟೇ ಅಲ್ಲ ರೈತಾಪಿ ವರ್ಗಕ್ಕೆ ಪ್ರಧಾನಿ ಮೋದಿ ಅವರ ಸಾರಥ್ಯದ ಕೇಂದ್ರ ಸರ್ಕಾರ ಭಾರಿ ಕೊಡುಗೆ ಕೊಟ್ಟಿದೆ ಎಂದು ರಮೇಶ ಜಿಗಜಿಣಗಿ ಹೇಳಿದರು.