ವಿಶೇಷ ವರದಿ
ನರಗುಂದದ ಹಳೆ ಎಪಿಎಂಸಿ ಆವರಣದಲ್ಲಿರುವ ಜ್ಞಾನ ಮುದ್ರಾ ಪಬ್ಲಿಕ್ ಶಾಲೆಯ ಆವರಣದಲ್ಲಿರುವ ತೆಂಗಿನ ಮರವೊಂದರಲ್ಲಿ ಶಾಲೆಯ ನಿರ್ದೇಶಕ ಶಿವಪ್ರಕಾಶ ಹೊಸಕೇರಿಮಠರವರು ತೆಂಗಿನ ಮರದಿಂದ ಒಣಗಿದ ತೆಂಗಿನ ಕಾಯಿ ಕೀಳುವ ಸಂದರ್ಭದಲ್ಲಿ ತಂತಿಯಿಂದ ನಿರ್ಮಿತವಾದ ಕಾಗೆಯ ಗೂಡು ಕಂಡು ಬಂದಿದೆ.
ಏಪ್ರಿಲ್‌ದಿಂದ ಜುಲೈವರೆಗೂ ಕಾಗೆಗಳು ಸಂತಾನಭಿವೃದ್ಧಿ ಕಾಲಾವಧಿಯಾಗಿದ್ದು, ತೆಂಗಿನ ಮರದಲ್ಲಿ ದೊರೆತ ಈ ಗೂಡು ಕಳೆದ ವರ್ಷದ ಸಂತಾನ ಋತುವಿನಲ್ಲಿ ನಿರ್ಮಿತವಾಗಿದ್ದು, ಕಾಗೆಗಳು ಒಮ್ಮೆ ನಿರ್ಮಿಸಿದ ಗೂಡುಗಳನ್ನು ಪುನಃ ಬಳಸದೆ ಮುಂದಿನ ಸಂತಾನ ಋತುವಿಗೆ ಹೊಸಗೂಡು ನಿರ್ಮಿಸುವುದರಿಂದ ಈ ವಿಶೇಷ ಗೂಡನ್ನು (850ಗ್ರಾಂ) ತೆರವುಗೊಳಿಸಿ ಶಾಲೆಯ ವಿಜ್ಞಾನ ಪ್ರಯೋಗಾಲಯದಲ್ಲಿರಿಸಲಾಗಿದ್ದು, ಶಾಲೆಯ ಕಿರಣ ಚಿಕ್ಕಮಠ, ವಿ.ಜಿ. ಮಮಟಗೇರಿ ರಕ್ಷಣೆಗೆ ವಿಶೇಷ ಗಮನ ನೀಡಿದ್ದಾರೆ.ಹಲವಾರು ಅಪನಂಬಿಕೆ: ಹಿಂದೂ ಸಂಪ್ರದಾಯದ ಪ್ರಕಾರ ಪಿತೃಪಕ್ಷದಲ್ಲಿ ಕಾಗೆಗೆ ವಿಶೇಷವಾದ ಗೌರವ ಇದೆ. ಪಿತೃತರ್ಪಣ ಸಮಯದಲ್ಲಿ ಪೂಜಾವಿಧಿಗಳ ನಡುವೆ ಮೊದಲ ಭೋಜನ ಕಾಗೆಗೆ ನೀಡಲಾಗುತ್ತದೆ. ಪುರಾಣ ಕಥೆಗಳ ಪ್ರಕಾರ ಸೂರ್ಯ ಶನಿ ದೇವರನ್ನು ಕೊಲ್ಲಲೆಂದು ಶನಿ ಇರುವ ಇಡಿ ಕಾಡಿಗೆ ಬೆಂಕಿ ಹಾಕಿದನು. ಆದರೆ ಕಾಗೆಯು ಬೆಂಕಿಯಿಂದ ಶನಿ ದೇವನನ್ನು ಕಾಪಾಡಿದ್ದರಿಂದ ಅಂದಿನಿಂದ ಶನಿದೇವರಿಗೆ ಕಾಗೆ ಪ್ರಿಯವಾಗಿ ಶನಿ ದೇವನ ವಾಹನ ವಾಯಿತೆಂದು ನಂಬಿಕೆಯೂ ಇದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಗೋಚರಿಸಿದ ಸಂಗತಿ ಎಂದರೆ ಕಾಗೆಗಳು ಗೂಡು ನಿರ್ಮಿಸಲು ಸಾಮಾನ್ಯವಾಗಿ ಗಿಡಮರಗಳ ಕಟ್ಟಿಗೆ ತುಂಡುಗಳನ್ನು ಬಳಸುವ ಬದಲು ಕಟ್ಟಡ ನಿರ್ಮಾಣ ಮಾಡಲು ಬಳಸುವ ಲೋಹದ ತಂತಿಗಳಿಂದ ಗೂಡುಗಳ ನಿರ್ಮಾಣ ಮಾಡುವ ಪ್ರವೃತ್ತಿಗೆ ತಮ್ಮನ್ನು ತಾವು ಹೊಂದಾಣಿಕೆ ಮಾಡಿಕೊಂಡಿವೆ. ಸೂಕ್ತ ಕಡ್ಡಿಗಳು ದೊರಕದ ಪರಿಣಾಮವೋ ಅಥವಾ ಗೂಡು ಸುಭದ್ರವಾಗಿರುತ್ತದೆಂಬ ಕಾರಣದಿಂದಾಗೆ ಕಾಗೆಗಳು ಸೆಂಟ್ರಿಂಗ್ ಕಾಮಗಾರಿಗೆ ಬಳಸುವ ಸಣ್ಣ ಸಣ್ಣ ಕಬ್ಬಿಣ ತಂತಿಗಳಿಂದ ತನ್ನ ಗೂಡುಗಳನ್ನು ನಿರ್ಮಿಸಿರುವುದ ವಿಚಿತ್ತವಾದರೂ ಸತ್ಯ. ರಾಜ್ಯದ ಬೇರೆ ಬೇರೆ ಭಾಗದಲ್ಲಿ ಕಾಗೆಗಳು ಕಬ್ಬಿಣದ ತಂತಿಗಳಿಂದ ಕಟ್ಟಿದ ಗೂಡುಗಳು 800 ಗ್ರಾಂ ನಿಂದ 1500ಗ್ರಾಂ ವರೆಗಿನ ತೂಕವಿರುವುದು ಕಂಡು ಬರುತ್ತವೆ ಎನ್ನುತ್ತಾರೆ ಪಕ್ಷ ತಜ್ಞರು.