ವಿಧಾನಸೌಧದಲ್ಲಿ ಭಯೋತ್ಪಾದಕರು ಇದ್ದಾರೆ ಹೇಳಿಕೆ ಸಮರ್ಥಿಸಿಕೊಂಡ ಎಚ್‌ಡಿಕೆ

| N/A | Published : Nov 11 2025, 01:23 PM IST

HD Kumaraswamy
ವಿಧಾನಸೌಧದಲ್ಲಿ ಭಯೋತ್ಪಾದಕರು ಇದ್ದಾರೆ ಹೇಳಿಕೆ ಸಮರ್ಥಿಸಿಕೊಂಡ ಎಚ್‌ಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ರೈತರನ್ನು ಹೆದರಿಸಿ ಒಕ್ಕಲೆಬ್ಬಿಸುವವರನ್ನು, ರೈತರನ್ನು ಹೆದರಿಸಲು ಜಿಲ್ಲಾಧಿಕಾರಿ ಕಚೇರಿ ಬಳಿಗೆ ಬಸ್ಸುಗಳಲ್ಲಿ ಗೂಂಡಾಗಳನ್ನು ಕರೆದುಕೊಂಡು ಬರುವವರನ್ನು ಭಯೋತ್ಪಾದಕರು ಎನ್ನದೇ ಬೇರೆ ಏನೆನ್ನಬೇಕು? ನಾನು ಹೇಳಿದ್ದು ರಾಜಕೀಯ ಟೆರರಿಸ್ಟ್‌ಗಳ ಬಗ್ಗೆ ಎಂದು ಹೇಳಿದರು.

  ಬೆಂಗಳೂರು :  ವಿಧಾನಸೌಧದಲ್ಲಿ ಭಯೋತ್ಪಾದಕರು ಇದ್ದಾರೆ ಎಂಬ ತಮ್ಮ ಹೇಳಿಕೆಯನ್ನು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರನ್ನು ಹೆದರಿಸಿ ಒಕ್ಕಲೆಬ್ಬಿಸುವವರನ್ನು, ರೈತರನ್ನು ಹೆದರಿಸಲು ಜಿಲ್ಲಾಧಿಕಾರಿ ಕಚೇರಿ ಬಳಿಗೆ ಬಸ್ಸುಗಳಲ್ಲಿ ಗೂಂಡಾಗಳನ್ನು ಕರೆದುಕೊಂಡು ಬರುವವರನ್ನು ಭಯೋತ್ಪಾದಕರು ಎನ್ನದೇ ಬೇರೆ ಏನೆನ್ನಬೇಕು? ನಾನು ಹೇಳಿದ್ದು ರಾಜಕೀಯ ಟೆರರಿಸ್ಟ್‌ಗಳ ಬಗ್ಗೆ ಎಂದು ಹೇಳಿದರು.

ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿಧಾನಸೌಧದಲ್ಲಿ ಈಗ ಇರುವವರು ಯಾವುದರಲ್ಲಾದರೂ ದಾಖಲೆ ಕೊಟ್ಟಿದ್ದಾರಾ? ಹಿಂದಿನ ಸರ್ಕಾರದ ವಿರುದ್ಧ 40 ಪರ್ಸೆಂಟ್‌ ಸರ್ಕಾರ ಎಂದು ಆರೋಪಿಸಿದರು. ಇದಕ್ಕೆ ಇವರು ದಾಖಲೆ ಕೊಟ್ಟರಾ? ಯಾವ ರೀತಿ ದುರಹಂಕಾರದಿಂದ ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ನಾವು ನೀವೆಲ್ಲರೂ ನೋಡುತ್ತಿದ್ದೇವೆ ಎಂದರು.

ಮುಗ್ಧ ರೈತರನ್ನು ಹೆದರಿಸಿ ಬೆದರಿಸಿದ್ದನ್ನು ಏನೆಂದು ಕರೆಯಬೇಕು

ಬಿಡದಿಯಲ್ಲಿ ಭೂಸ್ವಾಧೀನ ವಿರೋಧಿಸಲು ಬಂದ ಮುಗ್ಧ ರೈತರನ್ನು ಹೆದರಿಸಿ ಬೆದರಿಸಿದ್ದನ್ನು ಏನೆಂದು ಕರೆಯಬೇಕು? ಆ ದೃಶ್ಯಗಳನ್ನು ಮಾಧ್ಯಮಗಳೇ ದಿನಗಟ್ಟಲೆ ತೋರಿಸಿದರು. ಅದಕ್ಕಿಂತ ಟೆರರಿಸ್ಟ್ ಆಕ್ಟಿವಿಸ್ಟ್ ಬೇರೆ ಯಾರಾದರೂ ಬೇಕಾ? ರೈತರ ಮೇಲೆ ದಬ್ಬಾಳಿಕೆಯನ್ನು ಮಾಡಿದರು ಎಂದು ಕಿಡಿಕಾರಿದರು.

ಭೂಸ್ವಾಧೀನಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯುವ ಸಂದರ್ಭದಲ್ಲಿ ಬಾಡಿಗೆ ಗೂಂಡಾಗಳನ್ನ ಕರೆದುಕೊಂಡು ಬಂದರು. ನಿಜವಾದ ರೈತರನ್ನ ಬಿಟ್ಟು, ಗೂಂಡಾಗಳನ್ನು ಡಿಸಿ ಕಚೇರಿಗೆ ಕರೆದುಕೊಂಡು ಬಂದಿದ್ದರು. ಇದು ಟೆರಿರಿಸ್ಟ್ ಸಂಸ್ಕೃತಿನಾ? ಅಥವಾ ಇನ್ನಾವ ಸಂಸ್ಕೃತಿ ಎಂದು ಪ್ರಶ್ನಿಸಿದರು.

ಎಚ್‌ಡಿಕೆಯೂ ಉಗ್ರರ ಒಂದು ಭಾಗವೇ?: ಡಿಕೆ

  ನವದೆಹಲಿ :  ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರೂ ಸಹ ಭಯೋತ್ಪಾದಕರ ಭಾಗವಾಗಿದ್ದಾರೆಯೇ? ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

ದೆಹಲಿಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ವಿಧಾನಸೌಧದಲ್ಲಿ ಭಯೋತ್ಪಾದಕರಿದ್ದಾರೆ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಹಾಗಿದ್ದರೆ, ಕುಮಾರಸ್ವಾಮಿ ಅವರೂ ಸಹ ಭಯೋತ್ಪಾದಕರ ಭಾಗವಾಗಿದ್ದಾರೆಯೇ?. ಅವರೂ ಸಹ ವಿಧಾನಸೌಧದಲ್ಲಿ ಕುಳಿತಿರಲಿಲ್ಲವೇ? ಅವರಿಗೂ, ಅವರ ಪಕ್ಷದವರಿಗೂ, ಅವರ ಆಡಳಿತಕ್ಕೂ ಅವರ ಈ ಹೇಳಿಕೆ ಅನ್ವಯಿಸುತ್ತದೆ ಎಂದು ತಿರುಗೇಟು ನೀಡಿದರು.

Read more Articles on