ಜುಲೈ ಅಂತ್ಯಕ್ಕೆ ಕ್ರಸ್ಟ್‌ಗೇಟ್‌ ಕಾಮಗಾರಿ ಪೂರ್ಣ: ಸಂಸದ ಹಿಟ್ನಾಳ

KannadaprabhaNewsNetwork |  
Published : May 30, 2025, 12:37 AM IST
29ಕೆಪಿಎಲ್22 ಸಂಸದ ರಾಜಶೇಖರ ಹಿಟ್ನಾಳ  | Kannada Prabha

ಸಾರಾಂಶ

ಕಳೆದ ವರ್ಷ ತುಂಡರಿಸಿದ್ದ ಕ್ರಸ್ಟ್‌ಗೇಟ್‌ 19ಕ್ಕೆ ಸ್ಟಾಪ್‌ಲಾಗ್‌ ಎಲಿಮೆಂಟ್‌ ಅಳವಡಿಸಿದ್ದರಿಂದ ರೈತರ ಎರಡು ಬೆಳೆಗೆ ನೀರು ಕೊಡಲು ಅನುಕೂಲವಾಯಿತು. ಆದರೆ, ತಜ್ಞರು ಆಗಮಿಸಿ ಪರಿಶೀಲಿಸಿದ ಬಳಿಕ ಗೇಟ್‌ನ್ನು ಸಂಪೂರ್ಣವಾಗಿ ದುರಸ್ತಿ ಮಾಡಿಸಬೇಕೆಂದು ಹೇಳಿದರು. ಇದೀಗ ಟೆಂಡರ್‌ ಪ್ರಕಿಯೆ ಮುಗಿದಿದ್ದು ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ.

ಕೊಪ್ಪಳ:

ತುಂಗಭದ್ರಾ ಜಲಾಯಶದ ಕ್ರಸ್ಟ್‌ಗೇಟ್‌ 19ರ ಕಾಮಗಾರಿ ಜುಲೈ ಅಂತ್ಯದೊಳಗೆ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ತುಂಡರಿಸಿದ್ದ ಕ್ರಸ್ಟ್‌ಗೇಟ್‌ 19ಕ್ಕೆ ಸ್ಟಾಪ್‌ಲಾಗ್‌ ಎಲಿಮೆಂಟ್‌ ಅಳವಡಿಸಿದ್ದರಿಂದ ರೈತರ ಎರಡು ಬೆಳೆಗೆ ನೀರು ಕೊಡಲು ಅನುಕೂಲವಾಯಿತು. ಆದರೆ, ತಜ್ಞರು ಆಗಮಿಸಿ ಪರಿಶೀಲಿಸಿದ ಬಳಿಕ ಗೇಟ್‌ನ್ನು ಸಂಪೂರ್ಣವಾಗಿ ದುರಸ್ತಿ ಮಾಡಿಸಬೇಕೆಂದು ಹೇಳಿದರು. ಇದೀಗ ಟೆಂಡರ್‌ ಪ್ರಕಿಯೆ ಮುಗಿದಿದ್ದು ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ ಎಂದರು. ಉಳಿದ ಗೇಟ್‌ಗಳು ಸಹ ಸವಕಳಿಯಾಗಿವೆ ಎಂದು ಕೇಂದ್ರ ಜಲ ಆಯೋಗದ ತಜ್ಞರು ವರದಿ ನೀಡಿದ್ದು ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆ ಮಾಡುವಂತೆ ಶಿಫಾರಸು ಮಾಡಿದ್ದಾರೆ. ಈ ಕುರಿತು ತುಂಗಭದ್ರಾ ಬೋರ್ಡ್‌ ಸೂಕ್ತ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದರು.

ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಬರೋಬ್ಬರಿ 12ರಿಂದ 13 ಲಕ್ಷ ಎಕರೆ ನೀರಾವರಿ ಪ್ರದೇಶ ಹೊಂದಿದೆ. ಹೀಗಾಗಿ, ರೈತ ಹಿತದೃಷ್ಟಿಯಿಂದ ನೀರು ಸಂಗ್ರಹ ಸಾಮರ್ಥ್ಯ ಕಡಿಮೆ ಮಾಡದೆ, ತಂತ್ರಜ್ಞಾನ ಬಳಸಿಕೊಂಡು ನೀರು ಸಂಗ್ರಹಣೆಯನ್ನು ಪ್ರತಿ ವರ್ಷದಂತೆ ಮಾಡಬೇಕು ಎಂದು ರೈತರ ಪರವಾಗಿ ಮನವಿ ಮಾಡಿದ್ದು, ತುಂಗಭದ್ರಾ ಬೋರ್ಡ್ ಈ ದಿಸೆಯಲ್ಲಿ ಕ್ರಮ ವಹಿಸುತ್ತದೆ ಎನ್ನುವ ವಿಶ್ವಾಸವಿದೆ ಎಂದರು.

ಈ ವಿಷಯದಲ್ಲಿ ಒತ್ತಡ ಹಾಕಲು ಬರುವುದಿಲ್ಲ, ಇದು ಜಲಾಶಯ ಸಂರಕ್ಷಣೆಯ ಪ್ರಶ್ನೆಯಾಗಿರುವುದರಿಂದ ತಜ್ಞರೇ ನಿರ್ಣಯ ಕೈಗೊಳ್ಳಬೇಕಾಗಿದೆ ಎಂದರು.ನಮಗೆ ನೋವಾಗಿಲ್ಲ:

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಏನೇ ಹೇಳಿದ್ದರೂ ನಮಗೇನು ಅದರಿಂದ ನೋವಾಗಿಲ್ಲ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

ಹೊಸಪೇಟೆಯಲ್ಲಿ ನಡೆದ ಸರ್ಕಾರದ ಸಾಧನಾ ಸಮಾವೇಶಕ್ಕೆ ಆಹ್ವಾನ ಬಾರದಂತೆ ಹಿಟ್ನಾಳ ಕುಟುಂಬ ನೋಡಿಕೊಂಡಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಇದೆಲ್ಲವನ್ನು ನಮ್ಮ ಹಿರಿಯರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ ಎಂದರು. ಆದರೆ, ಹೊಸಪೇಟೆ ಕಾರ್ಯಕ್ರಮದ ಉಸ್ತುವಾರಿಯನ್ನು ಆ ಜಿಲ್ಲೆಯವರು ನೋಡಿಕೊಂಡಿದ್ದರಿಂದ ನಾವೇನು ಮಧ್ಯಪ್ರವೇಶಿಸಲು ಆಗಿಲ್ಲ. ಅಷ್ಟಕ್ಕೂ ಪೂರ್ವಭಾವಿ ಸಭೆಯಲ್ಲಿ ಅನ್ಸಾರಿ ಅವರ ಬೆಂಬಲಿಗರು ಭಾಗವಹಿಸಿದ್ದಾರೆ ಎಂದರು.

ಗಂಗಾವತಿ ಉಪಚುನಾವಣೆಯಲ್ಲಿ ಟಿಕೆಟ್ ಯಾರಿಗೆ ಎನ್ನುವುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಯಾರಿಗೆ ಟಿಕೆಟ್ ಕೊಟ್ಟರು ಅವರ ಗೆಲುವಿಗಾಗಿ ನಾವು ಶ್ರಮಿಸುತ್ತೇವೆ. ಆದರೆ, ಅನ್ಸಾರಿ ಅವರು ನಾನೇ ಅಭ್ಯರ್ಥಿ ಎಂದಿದ್ದಾರೆ ಎನ್ನುವ ಪ್ರಶ್ನೆಗೆ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು.ಬಿಎಸ್‌ಪಿಎಲ್ ಕಾರ್ಖಾನೆ ಆಗಲ್ಲ:

ಕೊಪ್ಪಳ ಬಳಿ ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ ಎಂದು ಸರ್ಕಾರವೇ ಹೇಳಿದೆ. ಹೀಗಾಗಿ, ಸ್ಥಾಪನೆ ಆಗದು ಮತ್ತು ಆಗಬಾರದು ಎನ್ನುವುದು ನನ್ನ ನಿಲುವು ಎಂದು ರಾಜಶೇಖರ ಹಿಟ್ನಾಳ ಸ್ಪಷ್ಟಪಡಿಸಿದರು.

ಕಾರ್ಖಾನೆ ಸ್ಥಾಪನೆಗೆ ಅನುಮತಿ ನೀಡುವ ಮುನ್ನವೇ ಕೊಪ್ಪಳಕ್ಕೆ ಬಂದು ಜನರ ಹಾಗೂ ಗವಿಸಿದ್ಧೇಶ್ವರ ಶ್ರೀಗಳ ಅಭಿಪ್ರಾಯ ಕೇಳುತ್ತೇನೆ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ. ಅವರಿನ್ನೂ ಬಂದಿಲ್ಲ. ಬರದೇ ಅವರು ತೀರ್ಮಾನ ಮಾಡುವುದಿಲ್ಲ ಎಂದರು. ಅವರು ಈ ವರೆಗೂ ಬಂದಿಲ್ಲ ಎಂದರೆ ಸ್ಥಾಪನೆ ಮಾಡದೆ ಇರಲು ನಿರ್ಧರಿಸಿರಬಹುದು ಎಂದರು. ಬಿಎಸ್‌ಪಿಎಲ್ ಕಾರ್ಖಾನೆ ಅವರು ಏನು ಬೇಕಾದರು ಮಾಡಿಕೊಳ್ಳಲಿ, ತಮ್ಮ ಪೇರಾರಿ ಕಾರಿಗೆ ಬಿಎಸ್‌ಪಿಎಲ್ ಎಂದು ಹಾಕಿಕೊಳ್ಳಲಿ, ಅದು ನಮಗೆ ಸಂಬಂಧಿಸಿದಲ್ಲ. ಆದರೆ, ನಮ್ಮೂರ ಬಳಿ ಕಾರ್ಖಾನೆ ಸಾಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!