ಕನ್ನಡ ವಿರೋಧಿ ನಿಲುವಿನ ಕುರಿತು ಸಮಗ್ರ ತನಿಖೆಗೆ ಸಿಎಸ್ ಸೂಚನೆ

KannadaprabhaNewsNetwork |  
Published : Jun 20, 2026, 03:00 AM IST
ಸಂಸದ ಜಗದೀಶ ಶೆಟ್ಟರ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಲಹಾ ಸಮಿತಿ ಸಭೆ ನಡೆಯಿತು | Kannada Prabha

ಸಾರಾಂಶ

ಗಡಿನಾಡು ಬೆಳಗಾವಿಯಲ್ಲಿ ಕನ್ನಡ ಮತ್ತು ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿ ಬೆಳಗಾವಿ ಮಹಾನಗರ ಪಾಲಿಕೆ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪ ಇದೀಗ ರಾಜ್ಯ ಸರ್ಕಾರದ ಅತ್ಯುನ್ನತ ಆಡಳಿತ ಮಟ್ಟ ತಲುಪಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಗಡಿನಾಡು ಬೆಳಗಾವಿಯಲ್ಲಿ ಕನ್ನಡ ಮತ್ತು ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿ ಬೆಳಗಾವಿ ಮಹಾನಗರ ಪಾಲಿಕೆ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪ ಇದೀಗ ರಾಜ್ಯ ಸರ್ಕಾರದ ಅತ್ಯುನ್ನತ ಆಡಳಿತ ಮಟ್ಟ ತಲುಪಿದೆ.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಹಾಗೂ ನಾಡು ವಿರೋಧಿ ನಿಲುವು ಅನುಸರಿಸಲಾಗುತ್ತಿದೆ ಎಂಬ ದೂರನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ ಕಚೇರಿಯು ಪ್ರಕರಣದ ಕುರಿತು ಸಮಗ್ರ ಪರಿಶೀಲನೆ ನಡೆಸಿ ಸೂಕ್ತಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ.ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಮುಖ್ಯಮಂತ್ರಿ ಕಚೇರಿಗೆ ಸಲ್ಲಿಸಿದ್ದ ಮನವಿಯ ಆಧಾರದಲ್ಲಿ ಜೂ. 10 ರಂದು ಈ ಸಂಬಂಧ ಸೂಚನಾ ಪತ್ರ ಹೊರಡಿಸಲಾಗಿದೆ. ಸಾಮಾನ್ಯವಾಗಿ ಜನರಿಂದ ಸಲ್ಲಿಕೆಯಾಗುವ ಮನವಿಗಳನ್ನು ಸಂಬಂಧಿತ ಇಲಾಖೆಗೆ ವರ್ಗಾಯಿಸಿ ಕೈತೊಳೆದುಕೊಳ್ಳುವ ಆಡಳಿತ ಕ್ರಮ ಅನುಸರಿಸಲಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಮುಖ್ಯ ಕಾರ್ಯದರ್ಶಿಯವರ ಕಚೇರಿ ನೇರವಾಗಿ ಪರಿಶೀಲನೆ ಮತ್ತು ಕ್ರಮದ ಕುರಿತು ಸೂಚನೆ ನೀಡಿರುವುದು ಪ್ರಕರಣದ ಗಂಭೀರತೆ ಹೆಚ್ಚಿಸಿದೆ.ಮುಖ್ಯ ಕಾರ್ಯದರ್ಶಿಯವರ ಕಚೇರಿಯು ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ಕೈಗೊಂಡ ಕ್ರಮದ ವಿವರವನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದೆ. ಅಲ್ಲದೆ, ದೂರುದಾರರಿಗೆ ಕೈಗೊಂಡ ಕ್ರಮದ ಕುರಿತು ಲಿಖಿತ ಮಾಹಿತಿ ನೀಡಬೇಕು ಹಾಗೂ ಅದರ ವಿವರವನ್ನು ಜನಸ್ಪಂದನ ಐಪಿಜಿಆರ್ಎಸ್ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು ಎಂದು ನಿರ್ದೇಶನ ನೀಡಿದೆ.ಅಧಿಕಾರಿಗಳತ್ತ ಎಲ್ಲರ ದೃಷ್ಟಿ:

ಬೆಳಗಾವಿ ಮಹಾನಗರ ಪಾಲಿಕೆಯ ಕೆಲವು ನಿರ್ಧಾರಗಳು ಮತ್ತು ನಿಲುವುಗಳ ವಿರುದ್ಧ ಕನ್ನಡ ಸಂಘಟನೆಗಳು ಕಳೆದ ಹಲವು ತಿಂಗಳುಗಳಿಂದ ಆಕ್ಷೇಪ ವ್ಯಕ್ತಪಡಿಸುತ್ತಿವೆ. ವಿಶೇಷವಾಗಿ ಕನ್ನಡ ಭಾಷೆ, ರಾಜ್ಯದ ಅಸ್ಮಿತೆ ಹಾಗೂ ಕರ್ನಾಟಕದ ಪರವಾದ ವಿಚಾರಗಳಲ್ಲಿ ಪಾಲಿಕೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಕನ್ನಡ ಸಂಘಟನೆಗಳ ಮನವಿಗಳಿಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಅಸಮಾಧಾನವೂ ವ್ಯಕ್ತವಾಗಿತ್ತು.

ಇದೀಗ ರಾಜ್ಯದ ಮುಖ್ಯ ಕಾರ್ಯದರ್ಶಿಯವರ ಕಚೇರಿಯೇ ಮಧ್ಯಪ್ರವೇಶಿಸಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೇವಲ ಔಪಚಾರಿಕ ಉತ್ತರ ನೀಡುವ ಮೂಲಕ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಕಡಿಮೆಯಾಗಿದೆ. ಕನ್ನಡ ಮತ್ತು ನಾಡಿನ ಹಿತಾಸಕ್ತಿಗೆ ವಿರುದ್ಧವಾಗಿ ಯಾವ ನಿರ್ಧಾರಗಳು ಕೈಗೊಳ್ಳಲಾಗಿದೆ, ಅಂತಹ ನಿರ್ಧಾರಗಳಿಗೆ ಯಾರು ಹೊಣೆ, ಸರ್ಕಾರದ ಭಾಷಾ ನೀತಿ ಅನುಷ್ಠಾನದಲ್ಲಿ ಎಲ್ಲಿ ಲೋಪವಾಗಿದೆ ಎಂಬುದರ ಕುರಿತು ಸಂಬಂಧಿತ ಅಧಿಕಾರಿಗಳು ದಾಖಲೆ ಸಹಿತ ಸ್ಪಷ್ಟನೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಮಹಾನಗರ ಪಾಲಿಕೆ ಠರಾವು ಸೇರಿದಂತೆ ಹಲವು ಕನ್ನಡಪರ ವಿಚಾರಗಳಲ್ಲಿ ಪಾಲಿಕೆ ಅನುಸರಿಸುತ್ತಿರುವ ವಿಳಂಬದ ಧೋರಣೆ ಈಗಾಗಲೇ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಯವರ ಮಧ್ಯಪ್ರವೇಶವು ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಸರ್ಕಾರದ ಸೂಚನೆಗೆ ಅಧಿಕಾರಿಗಳು ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.ಕನ್ನಡ ಸಂಘಟನೆಗಳು ಮಾತ್ರವಲ್ಲದೆ ಗಡಿ ಭಾಗದ ಕನ್ನಡಿಗರೂ ಈ ಬೆಳವಣಿಗೆಯನ್ನು ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಿದ್ದಾರೆ. ದೂರು ಸ್ವೀಕರಿಸಿದ್ದೇವೆ ಎಂದು ಕಡತ ಮುಚ್ಚುವ ಬದಲು ಸಮಗ್ರ ಪರಿಶೀಲನೆ ನಡೆಸಿ, ತಪ್ಪುಗಳು ಕಂಡುಬಂದರೆ ಹೊಣೆಗಾರರ ವಿರುದ್ಧ ಕ್ರಮ ಕೈಗೊಂಡು ಅದರ ಸಂಪೂರ್ಣ ವಿವರವನ್ನು ಸರ್ಕಾರಕ್ಕೂ ದೂರುದಾರರಿಗೂ ತಿಳಿಸಬೇಕೆಂದು ಮುಖ್ಯ ಕಾರ್ಯದರ್ಶಿಯವರ ಕಚೇರಿ ನೀಡಿರುವ ಸ್ಪಷ್ಟ ನಿರ್ದೇಶನ ಇದೀಗ ಬೆಳಗಾವಿ ಮಹಾನಗರ ಪಾಲಿಕೆಯ ಮುಂದಿನ ನಡೆಗೆ ಮಹತ್ವದ ಪರೀಕ್ಷೆಯಾಗಿ ಪರಿಣಮಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಜೆ.ಟಿ.ಪಾಟೀಲರನ್ನ ಸಂಪುಟದಲ್ಲಿ ಸೇರಿಸಿಕೊಳ್ಳಿ
ನೀರಿಗಾಗಿ ಖಾಲಿ ಕೊಡಗಳೊಂದಿಗೆ ಮಹಿಳೆಯರ ಪ್ರತಿಭಟನೆ