ಚಿಕ್ಕಮಗಳೂರು : ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನ ಕೊನೆಯ ದಿನ ವಿಧಾನ ಪರಿಷತ್ತಿನಲ್ಲಿ ನಡೆದ ಆರೋಪ ಪ್ರತ್ಯಾರೋಪ ವೇಳೆ ಶಾಸಕ ಸಿ.ಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಕೆ ಮಾಡಿದ್ದಾರೆನ್ನಲಾದ ಪ್ರಕರಣ ಸಂಬಂಧ ಶನಿವಾರ ಸಿ.ಟಿ. ಮನೆಗೆ ಪ್ರಾಣ ಬೆದರಿಕೆ ಪತ್ರ ಬಂದಿದೆ. ಮನೆಗೆ ನುಗ್ಗಿ ಕೈ, ಕಾಲು ಮುರಿಯುತ್ತೇವೆ. ನಿನ್ನ ಮಗನ ಜೀವಕ್ಕೂ ಅಪಾಯವಿದೆ ಎಂದು ಬೆದರಿಕೆ ಹಾಕಲಾಗಿದೆ.
ಚಿಕ್ಕಮಗಳೂರು ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಸಿ.ಟಿ. ರವಿ ಅವರ ಮನೆ ವಿಳಾಸಕ್ಕೆ ಜ.9 ರಂದು ಈ ಅನಾಮಧೇಯ ಪತ್ರ ಬಂದಿದೆ. ಈ ಪತ್ರದಲ್ಲಿ ನಿನ್ನನ್ನು ಹುಡುಕಿಕೊಂಡು ಬೆಳಗಾವಿಯಿಂದ ಚಿಕ್ಕಮಗಳೂರಿಗೆ ಬಂದಿದ್ದೇವೆ. ನೀನು 15 ದಿವಸದೊಳಗೆ ಬೆಳಗಾವಿಯ ಅಭಿನೇತ್ರಿಯವರ ಕಾಲನ್ನು ಹಿಡಿದು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಿನ್ನ ಮನೆಗೆ ನುಗ್ಗಿ ಕೈ, ಕಾಲು ಮುರಿಯುತ್ತೇವೆ. ನೀನು ಯಾವ ಪಾತಾಳಕ್ಕೆ ಹೋದ್ರು ಬಿಡುವುದಿಲ್ಲ ಹುಷಾರ್. ನಿನ್ನ ಮಗನ ಜೀವಕ್ಕೂ ಅಪಾಯವಿದೆ ಎಂದು ಬೆದರಿಕೆ ಹಾಕಲಾಗಿದೆ.
ಈ ಸಂಬಂಧ ಸಿ.ಟಿ. ರವಿ ಅವರ ಆಪ್ತ ಸಹಾಯಕ ಚೇತನ್ ಅವರು ನಗರದ ಬಸವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.