ಸಮಾಜ ಅಭಿವೃದ್ಧಿಗೆ ದಾನ ನೀಡುವ ಸಂಸ್ಕೃತಿ ಬೆಳೆಸಿಕೊಳ್ಳಿ: ಮನೋಜ ಮಾನೇಕ್‌

KannadaprabhaNewsNetwork |  
Published : Nov 11, 2024, 12:47 AM IST
10ಡಿಡಬ್ಲೂಡಿ7ಧಾರವಾಡ ಲಯನ್ಸ್‌ ಕ್ಲಬ್‌ ಸಂಸ್ಥೆಯ 59ನೇ ದಿನಾಚರಣೆಯಲ್ಲಿ ಸಂಸ್ಥೆಯ ಸದಸ್ಯರು | Kannada Prabha

ಸಾರಾಂಶ

ಸಮಾಜದ ಸಮತೋಲನಕ್ಕಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಸಂಘ-ಸಂಸ್ಥೆಗಳಿಗೆ ಉಳ್ಳವರು ದಾನ ನೀಡುವ ಮೂಲಕ ಬಡ ಜನರ ಹಾಗೂ ಅಶಕ್ತ ಸಮುದಾಯಕ್ಕೆ ಬಲ ನೀಡುವ ಕೆಲಸ ಮಾಡಬೇಕು ಎಂದು ಮಾನೇಕ್ ಹೇಳಿದರು.

ಧಾರವಾಡ: ಸಾಮಾಜಿಕ ಕಳಕಳಿ ಹೊಂದಿದ ಲಯನ್ಸ್‌ ಕ್ಲಬ್‌ನಂತಹ ಸಂಘ-ಸಂಸ್ಥೆಗಳಿಗೆ ಸದಸ್ಯರು ಸೇರಿದಂತೆ ಉಳ್ಳವರು ದಾನ ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಲಯನ್ಸ್‌ ಜಿಲ್ಲಾ ಗವರ್ನರ್‌ ಮನೋಜ ಮಾನೇಕ್‌ ಮನವಿ ಮಾಡಿದರು.

ಇಲ್ಲಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಲಯನ್ಸ್‌ ಕ್ಲಬ್‌ ಸಂಸ್ಥೆಯ 59ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

ಸಮಾಜದ ಆರ್ಥಿಕ ಸ್ಥಿತಿಗತಿಯಲ್ಲಿ ಏರಿಳಿತ ಸಾಮಾನ್ಯ. ಈ ನಿಟ್ಟಿನಲ್ಲಿ ಸಮಾಜದ ಸಮತೋಲನಕ್ಕಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಸಂಘ-ಸಂಸ್ಥೆಗಳಿಗೆ ಉಳ್ಳವರು ದಾನ ನೀಡುವ ಮೂಲಕ ಬಡ ಜನರ ಹಾಗೂ ಅಶಕ್ತ ಸಮುದಾಯಕ್ಕೆ ಬಲ ನೀಡುವ ಕೆಲಸ ಮಾಡಬೇಕು ಎಂಬ ಸಲಹೆ ನೀಡಿದರು.

ಧಾರವಾಡ ಲಯನ್ಸ್‌ ಕ್ಲಬ್ 60 ವರ್ಷಗಳಿಂದ ಸಮಾಜದ ಉನ್ನತಿಗೆ ಸೇವೆ ಸಲ್ಲಿಸುತ್ತಿದೆ. ಪ್ರಸ್ತುತ ಸಂದರ್ಭದಲ್ಲೂ ಸಮಾಜದಲ್ಲಿರುವ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ಲಬ್‌ ಕೆಲಸ ಮಾಡಲಿ. ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಬಾಲಕಿಯರಿಗೆ, ಯುವತಿಯರಿಗೆ ಶೌಚಾಲಯ ಅಂತಹ ಸೌಲಭ್ಯ ನಿರ್ಮಿಸಿಕೊಡುವಲ್ಲಿ ಕ್ಲಬ್‌ ಹೆಚ್ಚು ಕಾರ್ಯೋನ್ಮುಖವಾಗಲಿ. ಸಾಮಾಜಿಕ ಕಳಕಳಿಯ ಇಂತಹ ಸಂಸ್ಥೆಗಳಿಗೆ ಯುವಕರು ಸದಸ್ಯರಾಗುವ ಮೂಲಕ ಗ್ರಾಮೀಣಾಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಲಯನ್ಸ್‌ ಕ್ಲಬ್‌ ಅಧ್ಯಕ್ಷ ಗುರುರಾಜ ಪಿಸೆ ಅಧ್ಯಕ್ಷತೆ ವಹಿಸಿ, ಕ್ಲಬ್‌ ಹಿರಿಯರ ಮಾರ್ಗದರ್ಶನದಂತೆ ಅನೇಕ ಸೇವಾ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು. ಕಾರ್ಯದರ್ಶಿ ಕವಿತಾ ಅಂಗಡಿ ಕಳೆದ ಆರು ತಿಂಗಳಲ್ಲಿ ಕ್ಲಬ್‌ ಮಾಡಿರುವ ಸೇವಾ ಕಾರ್ಯಗಳನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಕ್ಲಬ್‌ಗೆ ನೂತನ ಸದಸ್ಯರಾದ ಡಾ. ಅಶ್ವಿನ್‌ ಕುಲಕರ್ಣಿ, ರಶ್ಮಿ ಭಾರದ್ವಾಜ, ಡಾ. ರಮೇಶ ಹೆಬ್ಬಳ್ಳಿ, ಡಾ. ಶ್ರೇಯಾ ಪಾಸ್ತೆ, ಜಯಂತ ಇಟಗಿ, ಸಂತೋಷ ಮೇಸ್ತ್ರಿ, ಷಣ್ಮುಖ ಸವಣೂರ, ಗಿರೀಶ ಅಂಗಡಿ ಅವರಿಗೆ ಜಿಲ್ಲಾ ಗವರ್ನರ್‌ ಪ್ರತಿಜ್ಞಾ ವಿಧಿ ಬೋಧಿಸಿದರು. ಹರ್ಷ ದೇಸಾಯಿ, ಅರವಿಂದ ಹೆಬಸೂರ, ಖಜಾಂಚಿ ವೃಷಬ ಕರೋಲೆ, ಆರ್.ಕೆ. ಹೆಗಡೆ, ಮುಕುಂದ ಹೆಬ್ಳೀಕರ ಇದ್ದರು.

ಶೈಲಾ ಕರಗುದರಿ ಪ್ರಾರ್ಥಿಸಿದರು. ಆನಂದ ಕಮಲಾಪುರ ಸ್ವಾಗತಿಸಿದರು. ಭುಜಂಗ ಶೆಟ್ಟಿ ಪರಿಚಯಿಸಿದರು. ಗಿರಿಧರ ದೇಸಾಯಿ ನಿರೂಪಿಸಿದರು. ಮೀರಾ ರಾವ್‌ ವಂದಿಸಿದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ