ಕಲಿಕಾ ಹಂತದಲ್ಲೇ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ: ಗುತ್ತೇದಾರ

KannadaprabhaNewsNetwork | Published : Mar 1, 2024 2:21 AM

ಸಾರಾಂಶ

ಮಕ್ಕಳು ಮೂಢನಂಬಿಕೆ, ಕಂದಾಚಾರದಿಂದ ದೂರವಿದ್ದು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಕಲಿಕೆಯ ಹಂತದಲ್ಲೇ ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಮಕ್ಕಳು ಮೂಢನಂಬಿಕೆ, ಕಂದಾಚಾರದಿಂದ ದೂರವಿದ್ದು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಕಲಿಕೆಯ ಹಂತದಲ್ಲೇ ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಹೇಳಿದರು.

ಪಟ್ಟಣದ ನಾಗಾವಿ ಕ್ಯಾಂಪಸ್‌ನ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಆಧುನಿಕ, ವಿಜ್ಞಾನದ ಯುಗದಲ್ಲೂ ಅಜ್ಞಾನ ಪ್ರದರ್ಶಿಸುವ ಹಾಗೂ ಮೂಢನಂಬಿಕೆಗೆ ಒಳಗಾಗುತ್ತಿರುವುದು ದುರಂತ ಎಂದರು.

ವಿದ್ಯಾರ್ಥಿಗಳಿಗೆ ವಿಜ್ಞಾನದ ಪಾಠವನ್ನು ಬೋಧನೆ ಮಾಡುವುದಕ್ಕಿಂತ ವಿವಿಧ ರೀತಿಯ ಸಂಶೋಧನೆಯನ್ನು ಮಾಡಿದ ವಿಜ್ಞಾನಿಗಳ ಜೀವನ ಚರಿತ್ರೆಯನ್ನು ತಿಳಿಸುವುದರ ಮೂಲಕ ವಿಜ್ಞಾನ ಕಲಿಕೆಗೆ ಆಸಕ್ತಿ ಮೂಡಿಸಬೇಕಿದೆ ಎಂದರು. ಜೀವನದಲ್ಲಿ ಕಲಿಕೆ ಎನ್ನುವುದು ನಿರಂತರವಾಗಿದ್ದು ಪ್ರಯತ್ನ ಮಾಡುವುದು ನಿಲ್ಲಿಸಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ ಪ್ರಭಾರಿ ಮುಖ್ಯಶಿಕ್ಷಕಿ ಜನತುಲ್ ಫಿರದೋಸ್ ಮಾತನಾಡಿ, ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ.ವಿ.ರಾಮನ್ ಅವರ ಅಪೂರ್ವ ಸಾಧನೆಯ ನೆನಪಿನಲ್ಲಿ ಫೆ.೨೮ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನ ಎಂದು ಆಚರಿಸಲಾಗುತ್ತಿದೆ, ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ವಿದ್ಯಾರ್ಥಿಗಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಉದ್ದೇಶವಾಗಿದೆ ಎಂದರು.

ವಿದ್ಯಾರ್ಥಿಗಳೇ ತಯ್ಯಾರಿಸಿದ ಚಂದ್ರಾಯಾನ-೩, ವಾಯು ಮಾಲಿನ್ಯ, ಡ್ರಿಪ್ ಇರಿಗೇಷನ್, ಸೇವ್ ವಾಟರ್, ಪ್ಲಾಸ್ಟಿಕ್ ಬಳಕೆ ತಡೆಗಟ್ಟುವುದು, ಆಸಿಡ್ ರೇನ್, ವಾಟರ್ ಫಿಲ್ಟರ್ ಸೇರಿದಂತೆ ವಿಜ್ಞಾನದ ಅನೇಕ ಮಾದರಿಗಳು ಆಕರ್ಷಕವಾಗಿ ಕಂಡುಬಂದವು. ಶಿಕ್ಷಕರಾದ ಸಂತೋಷಕುಮಾರ ಜಮಾದಾರ, ಶಿವಪುತ್ರಪ್ಪಪ್ಪ, ಶಿವರಾಜ್ ಹೆಬ್ಬಾಳ, ಅಗಸ್ತ್ಯ ಫೌಂಡೇಷನ್ ಶಿಕ್ಷಕಿ ಸಿದ್ದಮ್ಮ, ರೇಣುಕಾ ರೋಣದ್, ಹಣಮಂತ, ಮಂಜುನಾಥ, ಪಲ್ಲವಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು. ಶಿಕ್ಷಕಿ ಪುಷ್ಪಾ ಪ್ರಾರ್ಥಿಸಿದರು, ಶಿಕ್ಷಕ ಸಂಗಮೇಶ ರೋಣದ್ ಸ್ವಾಗತಿಸಿದರು, ಶಿಕ್ಷಕ ಶಿವಪುತ್ರ ವಿ.ಬಿ ನಿರೂಪಿಸಿದರು.

Share this article