ಕನ್ನಡಪ್ರಭ ವಾರ್ತೆ ಗುಡಿಬಂಡೆ
ಪ್ರತಿಯೊಬ್ಬರು ತಾವು ತಮ್ಮ ಕುಟುಂಬ ಎಂದು ಭಾವಿಸದೇ ತಮಗೆ ಜನ್ಮ ನೀಡಿದಂತಹ ಪ್ರಕೃತಿಗೆ ಏನಾದರೂ ಸೇವೆ ಮಾಡಬೇಕು. ಪರೋಪಕಾರ ಮನೋಭಾವ ಬೆಳೆಸಿಕೊಂಡು ಸಮಾಜ ಸೇವೆ ಮಾಡಬೇಕು ಎಂದು ರಾಜ್ಯಸಭಾ ಸದಸ್ಯ ಕೆ.ನಾರಾಯಣ ತಿಳಿಸಿದರು.ತಾಲೂಕಿನ ಕೊಂಡಾವಲಹಳ್ಳಿ ಗ್ರಾಮದಲ್ಲಿ ರಾಜ್ಯಸಭಾ ಸದಸ್ಯರ ಅನುದಾನದಡಿ ನಿರ್ಮಾಣವಾಗಿರುವ ಕಾಂಕ್ರೀಟ್ ರಸ್ತೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಪ್ರಾಣಿಗೂ ಹುಟ್ಟು ಎಂಬುದು ಹೇಗೆ ಇರುತ್ತದೆಯೋ ಸಾವು ಸಹ ಖಚಿತವಾಗಿರುತ್ತದೆ. ಆದರೆ ಆ ಸಾವು ಯಾರಿಗೆ ಯಾವಾಗ ಬರುತ್ತದೆ ಎಂದು ತಿಳಿದಿರುವುದಿಲ್ಲ. ಒಂದು ಮರ ತಾನು ಸತ್ತರೂ ಪರರಿಗೆ ಉಪಯೋಗವಾಗುತ್ತದೆ. ಅದನ್ನೇ ಮರ ಸಹ ಬಯಸುತ್ತದೆ. ಪ್ರಕೃತಿ ನನಗೆ ಸಾಕಷ್ಟು ನೀಡಿದೆ ಅದಕ್ಕೆ ನಾಕು ಚಿಕ್ಕ ಸೇವೆ ಎಂದು ಭಾವಿಸುತ್ತದೆ.
ಅದೇ ರೀತಿ ಮನುಷ್ಯರಾದ ನಾವುಗಳು ಪ್ರಕೃತಿಯನ್ನು ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದೇವೆ. ನಮ್ಮ ಸುತ್ತಮುತ್ತಲಿನ ಜನರೊಂದಿಗೆ ಜಾತಿಬೇಧ ಮರೆತು ಎಲ್ಲರೂ ಒಂದೇ ಕುಟುಂಬದಂತೆ ಭಾವಿಸಿ ಜೀವನ ಸಾಗಿಸಬೇಕು. ಜೊತೆಗೆ ಪರರಿಗೂ ಸಹ ಸಹಾಯ ಮಾಡುವಂತಹ ಮನೋಭಾವ ಬೆಳೆಸಿಕೊಳ್ಳಬೇಕು. ಜನ್ಮ ಕೊಟ್ಟ ಭೂಮಿಗೆ ನಮ್ಮಿಂದ ಆಗುವಂತಹ ಸೇವೆ ಮಾಡಬೇಕು ಎಂದರು.ಈಗಾಗಲೇ ಸಂಸದ ಆದರ್ಶ ಗ್ರಾಮ ಯೋಜನೆಯಡಿ ಗ್ರಾಮಗಳನ್ನು ದತ್ತು ಪಡೆಯುವುದಕ್ಕೆ ಜಿಲ್ಲಾಧಿಕಾರಿಗಳಿಗೆ ಪತ್ರ ವ್ಯವಹಾರವನ್ನೂ ಸಹ ಮಾಡಲಾಗಿದೆ. ಆದರೆ ನನ್ನ ಪತ್ರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಡೆಹಿಡಿಯಲಾಗಿದೆ. ಸಂಸದರ ಆದರ್ಶ ಗ್ರಾಮ ಯೋಜನೆಯಡಿ ನಾನು ನೀಡಿದಂತಹ ಗ್ರಾಮ ಮಂಜೂರಾದರೇ ಈ ಗ್ರಾಮ ಕೇಂದ್ರ ಸರ್ಕಾರದಿಂದ ಬರುವಂತಹ ಎಲ್ಲಾ ಅನುದಾನ ಬರುತ್ತದೆ. ಗ್ರಾಮ ಮತ್ತಷ್ಟು ಅಭಿವೃದ್ದಿಯಾಗುತ್ತದೆ. ಗ್ರಾಮಗಳಲ್ಲಿ ಪ್ರತಿಯೊಬ್ಬರೂ ಸ್ವಚ್ಚತೆ ನೈರ್ಮಲ್ಯ ಕಾಪಾಡಬೇಕು ಎಂದು ಸಲಹೆ ನೀಡಿದರು.
ಮುಖಂಡ ನಾರಾಯಣಸ್ವಾಮಿ ಮಾತನಾಡಿ, ಗ್ರಾಮ ವಿಕಾಸ ಸಂಸ್ಥೆಯವರು ನಮ್ಮ ಗ್ರಾಮಕ್ಕೆ ಸಾಕಷ್ಟು ಅನುಕೂಲ ಮಾಡಿಕೊಡುತ್ತಿದ್ದಾರೆ. ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೇಸಿಗೆ ಶಿಬಿರ, ಬಾಲ ಸಂಗಮ ಕಾರ್ಯಕ್ರಮ ಸೇರಿದಂತೆ ರಸ್ತೆ ಅಭಿವೃದ್ದಿ ಕಾರ್ಯಕ್ರಮಗಳನ್ನು ಸಹ ಕೈಗೊಂಡಿದ್ದಾರೆ. ನಮ್ಮ ಗ್ರಾಮದಲ್ಲಿ ಯಾವುದೇ ಜಾತಿ ಬೇದ ವಿಲ್ಲ. ಎಲ್ಲರೂ ಅನ್ಯೋನ್ಯವಾಗಿ ಸಹೋದರರಂತೆ ಬದುಕುತ್ತಾರೆ. ಮುಂದಿನ ದಿನಗಳಲ್ಲೂ ಇದೇ ರೀತಿಯಾಗಿ ನಡೆದುಕೊಂಡು ಹೋಗುತ್ತೇವೆ ಎಂದರು.ಗ್ರಾಮ ವಿಕಾಸ ಸಂಸ್ಥೆಯ ಮುಖ್ಯಸ್ಥ ಶ್ರೀಧರ್ ಸಾಗರ್ ಜೀ, ಸಾವಯವ ಕೃಷಿ ತಾಲೂಕು ಸಂಯೋಜಕ ವಾಹಿನಿ ಸುರೇಶ್, ಹಾಜರಿದ್ದರು.