ಹೊಸಪೇಟೆ: ಜಿಲ್ಲೆಯಲ್ಲಿ ಮಳೆಯ ಕೊರತೆ ಹಾಗೂ ಮಣ್ಣಿನಲ್ಲಿ ತೇವಾಂಶದ ಅಭಾವದಿಂದ ಬರ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆ ರೈತರು ಹಿಂಗಾರು ಹಂಗಾಮಿನಲ್ಲಿ ಕಡಿಮೆ ನೀರು ಬಳಸಿ ಕಡಿಮೆ ಅವಧಿಯಲ್ಲಿ ಕಟಾವಿಗೆ ಬರುವ ಹಾಗೂ ಬರ ತಡೆದುಕೊಳ್ಳುವ ಸಾಮರ್ಥ್ಯವಿರುವ ಪರ್ಯಾಯ ಬೆಳೆ ಬೆಳೆಯಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ರೈತರು ಬೆಳೆ ಆಯ್ಕೆ ಮಾಡುವ ಮುನ್ನ ಪ್ರಸ್ತುತ ಮಳೆಯ ಪ್ರಮಾಣ, ಮುಂದಿನ ಮಳೆ ಮುನ್ಸೂಚನೆ ಹಾಗೂ ಬಿತ್ತನೆಗೆ ಉಳಿದಿರುವ ಅವಧಿ ಗಮನಿಸಬೇಕು. ತೀವ್ರ ಬರ ಪರಿಸ್ಥಿತಿಯಲ್ಲಿ ಬೆಳೆ ನಷ್ಟ ಕಡಿಮೆ ಮಾಡಲು ಹಾಗೂ ಜಾನುವಾರುಗಳಿಗೆ ಮೇವಿನ ಲಭ್ಯತೆ ಕಾಪಾಡಲು ಕಡಲೆ, ಜೋಳ, ಕುಸುಬೆ, ಹುರಳಿ, ಸೂರ್ಯಕಾಂತಿ ಮತ್ತು ಅಲಸಂದಿ ಬೆಳೆ ಪರ್ಯಾಯವಾಗಿ ಬೆಳೆಯುವುದು ಸೂಕ್ತವಾಗಿದೆ ಎಂದು ತಿಳಿಸಿದರು.
ನೀರಾವರಿ ಸೌಲಭ್ಯವಿರುವ ರೈತರು ರಾಗಿ ಹಾಗೂ ಶೇಂಗಾ ಬೆಳೆಯಬಹುದು. ಬಿತ್ತನೆಗೂ ಮುನ್ನ ಬೀಜ ಮೊಳಕೆಯೊಡೆಯಲು ಮತ್ತು ಸಸಿಗಳ ಬೆಳವಣಿಗೆಗೆ ಅಗತ್ಯ ತೇವಾಂಶ ಮಣ್ಣಿನಲ್ಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಬೀಜೋಪಚಾರ, ತೇವಾಂಶ ಸಂರಕ್ಷಣೆ, ನೀರಿನ ಉಳಿತಾಯ ಹಾಗೂ ಮೇವು ನಿರ್ವಹಣಾ ಪದ್ಧತಿ ಅನುಸರಿಸಬೇಕು ಎಂದು ಸಲಹೆ ನೀಡಿದರು.ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ರೈತರ ಬೆಳೆ ಸಮೀಕ್ಷೆ ತಂತ್ರಾಅಶದಲ್ಲಿ ಕಡ್ಡಾಯವಾಗಿ ದಾಖಲಿಸಬೇಕು. ಫ್ರೂಟ್ಸ್ ತಂತ್ರಾಂಶದಲ್ಲಿ ಎಫ್ಐಡಿ ಮಾಡಿಸಿ ಬಾಕಿ ಉಳಿದಿರುವ ಸರ್ವೆ ನಂಬರ್ ಸೇರ್ಪಡೆಗೊಳಿಸಬೇಕು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮುಂದಿನ ಕಂತಿನ ಹಣ ಪಡೆಯಲು ಇಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಅಲ್ಲದೆ ಆಯಾ ಗ್ರಾಪಂ ಹಾಗೂ ಹೋಬಳಿ ವ್ಯಾಪ್ತಿಗೆ ನಿಗದಿಪಡಿಸಿರುವ ಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.