ಕನ್ನಡಪ್ರಭ ವಾರ್ತೆ ತುಮಕೂರು
ಭವ್ಯ ಭಾರತದ ಪರಂಪರೆ, ಇತಿಹಾಸ ಉಳಿಸಲು ವಿದ್ಯಾರ್ಥಿಗಳು ಸಂಕಲ್ಪ ಮಾಡಬೇಕು. ಗಹನ, ಧಾರಣ ಶಕ್ತಿ ಬೆಳೆಸಿಕೊಂಡು ಪ್ರತಿಭಾವಂತರಾಗಬೇಕು ಎಂದು ಸಿದ್ಧಗಂಗಾ ಮಠದ ಶಿವಸಿದ್ಧೇಶ್ವರ ಸ್ವಾಮೀಜಿ ಹೇಳಿದರು.ನಗರದ ಎಸ್‌ಐಟಿಯ ಬಿರ್ಲಾ ಸಭಾಂಗಣದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಸೇವಾ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸುವ ಸಮಾರಂಭದಲ್ಲಿ ಮಾತನಾಡಿದರು.ನಮ್ಮ ಮಕ್ಕಳನ್ನು ನಾವು ಅಂಕಗಳ ಹಿಂದೆ ಓಡುವ ಕುದುರೆಗಳನ್ನಾಗಿ ಮಾಡಿದ್ದೇವೆ. ಅಂಕ ಗಳಿಸುವುದಷ್ಟೇ ಅಲ್ಲ, ಸಮಾಜದ ಹೃದಯ ಗೆಲ್ಲುವ ಮಾನವೀಯ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಬೇಕು. ಅಂತಹ ವಿಚಾರಧಾರೆಗಳನ್ನು ಉಣಬಡಿಸುವುದರಿಂದ ನಿರಂತರವಾಗಿ ಜ್ಞಾನ ಪಡೆಯಲು ಸಾಧ್ಯವಾಗುತ್ತದೆ ಎಂದರು.ಪ್ರಪಂಚದಲ್ಲಿ ಮನುಷ್ಯರ ಸಂಖ್ಯೆ ಎಷ್ಟಿದೆಯೋ ಅಷ್ಟೇ ಸಂಖ್ಯೆಯಲ್ಲಿ ನಮ್ಮ ದಾರ್ಶನಿಕರು ಮಾಡಿರುವ ಉಪದೇಶಗಳಿವೆ. ಆದರೆ ಅವುಗಳ ಪಾಲನೆ ಆಗುತ್ತಿವೆಯೇ ಎಂಬುದು ಪ್ರಶ್ನೆಯಾಗಿ ಉಳಿದಿದೆ. ಮಾನವನ ಬದುಕು ಜ್ಯೋತಿ ಇದ್ದಂತೆ. ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಮಾಡಿಕೊಂಡಾಗ ಬದುಕಿನ ಜ್ಯೋತಿ ಪ್ರಜ್ವಲಿಸುತ್ತದೆ. ಆತ್ಮ ಹಣತೆಯಿದ್ದಂತೆ, ತೈಲ ದೈವನಿಷ್ಠೆ, ತಾಳ್ಮೆ ಎಂಬುದು ಬತ್ತಿ, ಉರಿ ಎಂಬುದು ಪರಿಪೂರ್ಣ ಪ್ರಮಾಣಿಕತೆ. ಈ ನಾಲ್ಕು ಅಂಶಗಳು ಗಟ್ಟಿಯಾದಾಗ ಮಾನವನ ಬದುಕಿನ ಜ್ಯೋತಿ ಪ್ರಜ್ಞಲಿಸಿ ಬೆಳಕು ನೀಡುತ್ತದೆ ಎಂದು ಸ್ವಾಮೀಜಿ ಹೇಳಿದರು.ವೀರಬಸವ ಸ್ವಾಮೀಜಿ ಮಾತನಾಡಿ, ಮನುಷ್ಯನನ್ನು ಮಹದೇವನನ್ನಾಗಿ ಮಾಡುವುದು ವೀರಶೈವ ಸಮಾಜ. ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಜೊತೆಗೆ ಅವರಿಗೆ ಧಾರ್ಮಿಕ ಸಂಸ್ಕಾರ ನೀಡಬೇಕು ಎಂದು ಹೇಳಿದರು.ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ, ಮಠಮಾನ್ಯಗಳಿಂದ ಜಗತ್ತಿನಲ್ಲಿ ವೀರಶೈವ ಸಮಾಜಕ್ಕೆ ದೊಡ್ಡ ಗೌರವ ದೊರಕಿದೆ. ಅನೇಕ ಮಠಾಧೀಶರು ಮಾನವೀಯ ಧರ್ಮವನ್ನು ಆಚರಣೆಗೆ ತಂದಿದ್ದಾರೆ. ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಮಕ್ಕಳು ಉಳಿಯಲು ಜಾಗ ಕೊಟ್ಟು, ಅನ್ನ ನೀಡಿ, ಶಿಕ್ಷಣ ಕೊಟ್ಟು ನೆರವಾಗಿದ್ದಾರೆ. ಇಲ್ಲಿ ಕಲಿತವರು ಪ್ರಪಂಚದ ವಿವಿಧೆಡೆ ಬದುಕು ಕಟ್ಟಿಕೊಂಡಿದ್ದಾರೆ. ಶಿಕ್ಷಣದಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆ ಜೊತೆಗೆ ಸಮಾಜದಲ್ಲಿ ಗೌರವವೂ ಹೆಚ್ಚಾಗುತ್ತದೆ ಎಂದರು.ಅಖಿಲ ಭಾರತ ವೀರಶೈವ ಮಹಾ ಸಭಾದ ರಾಜ್ಯ ನಿರ್ದೇಶಕ ಸಾಗರನಹಳ್ಳಿ ನಟರಾಜ್ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಜೊತೆಗೆ ನಮ್ಮ ಸಮಾಜದಲ್ಲಿರುವ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನಮ್ಮ ಸಂಘಸಂಸ್ಥೆಗಳು ನೆರವಾಗಬೇಕು ಎಂದರು.ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಪರಮೇಶ್ ಮಾತನಾಡಿ, ಎಸ್ಸೆಸ್ಸೆಲ್ಸಿ, ಪಿಯುಸಿ ನಂತರ ಮುಂದೇನು ಎಂಬ ಪ್ರಶ್ನೆ ಎದುರಾದಾಗ ಕೆಲವೇ ಆಯ್ಕೆಗಳು ಕಾಣಬಹುದು. ಆದರೆ ಬಹಳಷ್ಟು ಉದ್ಯೋಗ ಆಧರಿತ ಅವಕಾಶಗಳಿವೆ. ಆ ಬಗ್ಗೆ ಮಕ್ಕಳಿಗೆ, ಪೋಷಕರಿಗೆ ಮಾರ್ಗದರ್ಶನ ನೀಡಬೇಕು ಎಂದರು.ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್, ಸಿಐಟಿ ಕಾಲೇಜು ಉಪಪ್ರಾಂಶುಪಾಲ ಡಾ.ಸಿ.ಪಿ.ಶಾಂತಲಾ, ಮನೋಹರ್ ಅಬ್ಬಿಗೆರೆ, ರುದ್ರೇಶ್, ಎಚ್.ಎನ್.ದೀಪಕ್, ಸತ್ಯಮಂಗಲ ಜಗದೀಶ್, ಕೊಪ್ಪಳ್ ನಾಗರಾಜ್, ಯಶಸ್ ದೇವಿಪ್ರಸಾದ್, ಎಸ್.ನಿತೀನ್, ಎಚ್.ಎಂ.ರವೀಶ್, ಎಂ.ಎಸ್.ಗುರುಪ್ರಸಾದ್ ಭಾಗವಹಿಸಿದ್ದರು.