ಕನ್ನಡಪ್ರಭ ವಾರ್ತೆ ಚಡಚಣ
ಜನ್ಮ ಜನ್ಮಾಂತರದ ಪುಣ್ಯಗಳಿಂದ ಲಭಿಸುವ ಮಾನವ ಜನ್ಮ ಅತ್ಯಂತ ಶ್ರೇಷ್ಠವಾಗಿದೆ. ಆದುದರಿಂದ ಯುವಜನತೆಯಲ್ಲಿ ಧರ್ಮಪುಜೆ ಮಾಡುವುದನ್ನು ಬೆಳೆಸಬೇಕು ಎಂದು ಬಾಳೆಹೊನ್ನೂರು ರಂಭಾಪುರಿಯ ಜಗದ್ಗುರು ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.ಸಮೀಪದ ಕನ್ನೂರು ಗುರುಮಠದಲ್ಲಿ ಲಿಂಗೈಕ್ಯ ಮಲ್ಲಿಕಾರ್ಜುನ ಶಿವಾಚಾರ್ಯರ 18ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಗುರುಪರಂಪರೆ ಜಾತ್ರೋತ್ಸವದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಆಧುನಿಕತೆ ಮತ್ತು ಸುಧಾರಣೆ ನೆಪದಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿಗೆ ಧಕ್ಕೆ ಉಂಟಾಗುತ್ತಿದೆ. ಬುದ್ಧಿ ಶಕ್ತಿ ಬೆಳೆದಷ್ಟು ಭಾವನೆಗಳು ಬೆಳೆಯದೆ ಎಲ್ಲ ರಂಗಗಳಲ್ಲಿ ಅಶಾಂತಿ, ಅತೃಪ್ತಿ ಹೆಚ್ಚುತ್ತಿದೆ. ಯುವ ಜನಾಂಗದಲ್ಲಿ ಧರ್ಮ ಮತ್ತು ರಾಷ್ಟ್ರಪ್ರಜ್ಞೆ ಕಡಿಮೆಯಾಗುತ್ತಿದೆ. ಇಂದಿನ ಜನಾಂಗಕ್ಕೆ ಶಿಕ್ಷಣದ ಜತೆ ಸಂಸ್ಕಾರ ನೀಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.ಜಗದ್ಗುರು ರೇಣುಕಾಚಾರ್ಯರು ಜೀವನ ಶ್ರೇಯಸ್ಸಿಗೆ ಅಹಿಂಸೆ, ಧ್ಯಾನ ಮತ್ತಿತರ ದಶ ಧರ್ಮಸೂತ್ರಗಳನ್ನು ಬೋಧಿಸಿದ್ದಾರೆ. ವೀರಶೈವ ಧರ್ಮ ಸಕಲ ಜೀವಾತ್ಮರಿಗೂ ಒಳ್ಳೆಯದನ್ನೇ ಬಯಸುತ್ತಿದೆ. ಸತ್ಯ, ಶುದ್ಧ ಹಾಗೂ ಧರ್ಮ ಮಾರ್ಗದಲ್ಲಿ ನಡೆದು ಎಲ್ಲರೂ ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ಬದ್ಧರಾಗಬೇಕು ಎಂದರು.
ಕನ್ನೂರು ಗುರುಮಠದ ಲಿಂ.ಮಲ್ಲಿಕಾರ್ಜುನ ಶಿವಾಚಾರ್ಯರು ವಾಗ್ಮಿಗಳಾಗಿ, ಸಮಾಜ ಸಂಘಟಕರಾಗಿ, ಧರ್ಮ ಬೆಳೆಸಿರುವುದು ಹೆಮ್ಮೆಯ ಸಂಗತಿ ಎಂದರು.ಸಮಾರಂಭ ಉದ್ಘಾಟಿಸಿದ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಇಂದು ಬದುಕಿನಲ್ಲಿ ಶಾಂತಿ ನೆಮ್ಮದಿ ಇಲ್ಲದಂತಾಗಿದ್ದು, ಅಧ್ಯಾತ್ಮದ ಅರಿವು ಅಗತ್ಯವಾಗಿದೆ. ಶರಣರು ಅಮೂಲ್ಯ ಸಂದೇಶಗಳನ್ನು ಜಗತ್ತಿಗೆ ನೀಡಿದ್ದಾರೆ. ಅವುಗಳನ್ನು ಅನುಸರಿಸಿ ಎಲ್ಲರೂ ಸಾರ್ಥಕ ಬದುಕು ನಡೆಸಬೇಕು ಎಂದರು.
ಕನ್ನೂರು ಗುರುಮಠದ ಸೋಮನಾಥ ಶಿವಾಚಾರ್ಯರು ಮಾತನಾಡಿ, ಜೀವನದಲ್ಲಿ ನಿರ್ದಿಷ್ಟ ಗುರಿ ಮತ್ತು ಗುರುವನ್ನು ಆಶ್ರಯಿಸಿ ಬಾಳಿದರೆ ಬದುಕು ಉಜ್ವಲವಾಗುತ್ತದೆ. ಗುರು ಹಾಗೂ ಗುರಿ ಇಲ್ಲದ ಜೀವನ ವ್ಯರ್ಥ. ಮಾನವ ಧರ್ಮಕ್ಕೆ ಜಯವಾಗಲಿ ಎಂಬ ವಿಶ್ವ ಬಂಧುತ್ವ ಸಂದೇಶವನ್ನು ಎಲ್ಲರೂ ಪಾಲಿಸಿ ಸಾಮರಸ್ಯ ಕಾಪಾಡಬೇಕು. ರಂಭಾಪುರಿ ಶ್ರೀಗಳ ಮಾರ್ಗದರ್ಶನದಲ್ಲಿ ಧರ್ಮ, ಸಂಸ್ಕೃತಿ ಬೆಳವಣಿಗೆಗೆ ಶ್ರಮಿಸುತ್ತಿದ್ದೇವೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದರು.ಇಳಕಲ್, ಗುಡೂರಿನ ಅನ್ನದಾನ ಶಾಸ್ತ್ರಿಗಳಿಂದ ಕಲಬುರ್ಗಿ ಶರಣಬಸವೇಶ್ವರ ಪುರಾಣ ಪ್ರವಚನ ಜರುಗಿತು. ನಾಗಠಾಣ ಹಿರೇಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಎಮ್ಮಿಗನೂರು ವಾಮದೇವ ಮಹಾಂತ ಶಿವಾಚಾರ್ಯರು ಆಶೀರ್ವಚನ ನೀಡಿದರು. ಪದ್ಮಶ್ರೀ ಡಾ.ಮಲ್ಲಮ್ಮ ಜೋಗತಿಗೆ ಸಮಾಜ ಸೇವಾ ಚಂದ್ರಿಕೆ ಹಾಗೂ ಹೊರ್ತಿಯ ಸಮಾಜ ಸೇವಕ ಅಣ್ಣಪ್ಪ ಖೈನೂರುಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಡವಲಗಾ ರಾಚೋಟೇಶ್ವರ ಶಿವಾಚಾರ್ಯರು, ಗುಡ್ಡಾಪುರ ಗುರುಪಾದ ಶಿವಾಚಾರ್ಯರು, ಮಸ್ಕಿ ವರರುದ್ರಮುನಿ ಶಿವಾಚಾರ್ಯರು, ಚಿಮ್ಮಲಗಿ ಸಿದ್ಧರೇಣುಕ ಶಿವಾಚಾರ್ಯರು, ಬೊಮ್ಮನಳ್ಳಿ ಗುರುಶಾಂತ ಶಿವಾಚಾರ್ಯರು, ಶಿರಶ್ಯಾಡ ಮುರುಘೇಂದ್ರ ಶಿವಾಚಾರ್ಯರು, ಜಮಖಂಡಿ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು, ಗಣ್ಯರು ಭಾಗವಹಿಸಿದ್ದರು.ಪುಣ್ಯಸ್ಮರಣೋತ್ಸವ ನಿಮಿತ್ತ 1008 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಸಮಾರಂಭಕ್ಕೂ ಮುನ್ನ ರಂಭಾಪುರಿ ಶ್ರೀಗಳಿಗೆ ಅಶ್ವಾರೂಢ ಸಾರೋಟಿನ ಮೆರವಣಿಗೆ ಮೂಲಕ ಭವ್ಯ ಸ್ವಾಗತ ಕೋರಲಾಯಿತು.