ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಿ: ಮಲ್ಲಿಕಾರ್ಜುನ ತೊದಲಬಾಗಿ

KannadaprabhaNewsNetwork | Published : Mar 1, 2025 1:06 AM

ಸಾರಾಂಶ

ಪ್ರಸ್ತುತ ತಂತ್ರಜ್ಞಾನಗಳು ಬೆಳೆದಂತೆ ಮಕ್ಕಳು ಓದುವ ಹವ್ಯಾಸ ಬಿಟ್ಟು ಮೊಬೈಲ್‌ ಬಳಕೆಯಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಮೊಬೈಲ್ ಬದಲಾಗಿ ಪುಸ್ತಕ ಅಭ್ಯಾಸ ಮಾಡುವ ಹವ್ಯಾಸ ಬೆಳೆಸಬೇಕಿದೆ.

ಕೊಪ್ಪಳ:

ಮಗುವಿನಲ್ಲಿ ಪುಸ್ತಕ ಓದುವ ಅಭ್ಯಾಸ ಬೆಳೆಸಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಹೇಳಿದರು.

ಇಲ್ಲಿನ ಶ್ರೀಶೈಲ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಾಂಚಜನ್ಯ ಅಕ್ಷರ ಕಲಿತವರ ಬದುಕು ಧನ್ಯ ಎಂಬ ಅಡಿ ಬರಹದಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ತಂತ್ರಜ್ಞಾನಗಳು ಬೆಳೆದಂತೆ ಮಕ್ಕಳು ಓದುವ ಹವ್ಯಾಸ ಬಿಟ್ಟು ಮೊಬೈಲ್‌ ಬಳಕೆಯಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಮೊಬೈಲ್ ಬದಲಾಗಿ ಪುಸ್ತಕ ಅಭ್ಯಾಸ ಮಾಡುವ ಹವ್ಯಾಸ ಬೆಳೆಸಬೇಕಿದೆ. ಪುಸ್ತಕ ಹೆಚ್ಚು ಹೆಚ್ಚು ಅಧ್ಯಯನ ಮಾಡುವುದರಿಂದ ಹೆಚ್ಚು ಜ್ಞಾನ ಸಿಗುತ್ತದೆ. ಸಮಯ ಬಹಳ ಮಹತ್ವದಾಗಿದೆ. ವಿದ್ಯಾರ್ಥಿಗಳು ತಮಗೆ ಸಿಕ್ಕ ಸಮಯವನ್ನು ಸದ್ಬಳಕೆ ಮಾಡಿಕೊಂಡು ಯಶಸ್ಸು ಸಾಧಿಸಬೇಕೆಂದು ಕರೆ ನೀಡಿದರು.

ಕಷ್ಟದಿಂದ ಬೆಳೆದು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿ ಉನ್ನತ ಹುದ್ದೆ ಪಡೆದ ಅನೇಕರಿದ್ದಾರೆ. ಅಂತಹವರ ಸಾಧನೆ ಬಗ್ಗೆ ಮಕ್ಕಳಿಗೆ ತಿಳಿಸಿದಾಗ ಮಕ್ಕಳಲ್ಲೂ ತಾವು ಸಾಧಿಸಬೇಕೆಂಬ ಹಂಬಲ ಉಂಟಾಗುತ್ತದೆ. ಪಾಲಕರು ಮಕ್ಕಳ ಶೈಕ್ಷಣಿಕ ಪ್ರಗತಿಯ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಮುಖ್ಯಶಿಕ್ಷಕರಾದ ಬಾಲನಾಗಮ್ಮ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಕಾರಾಗೃಹದ ಮುಖ್ಯ ಅಧೀಕ್ಷಕ ಅಂಬರೇಶ ಪೂಜಾರ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಪಾಂಚಜನ್ಯ ಎಂಬ ವಿನೂತನ ಪರಿಪಲ್ಪನೆ ಇಟ್ಟುಕೊಂಡು ವಾರ್ಷಿಕೋತ್ಸವ ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ. ಪಾಂಚಜನ್ಯ ಸಾಹಿತ್ಯ ಅಭಿರುಚಿ ಬೆಳೆಸುವುದು, ಸ್ಪಷ್ಟ ಓದು-ಶುದ್ಧ ಬರಹ, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಮಾಹಿತಿ ಪಡೆಯುವುದು, ಪರಿಸರ ಜಾಗೃತಿ, ಕಲಿಕಾ ಖಾತರಿ ಎಂಬ ಅಂಶ ಒಳಗೊಂಡಿದೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಅಮ್ದಜ ಪಟೇಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ತಾಲೂಕು ಅಧಿಕಾರಿ ಮಲ್ಲಿಕಾರ್ಜುನ ಗುಡಿ, ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಶಿವಪ್ಪ ಜೋಗಿ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸವನಗೌಡ ಪಾಟೀಲ, ತಾಲೂಕು ಅಧ್ಯಕ್ಷ ಹೋಳಿಬಸಯ್ಯಾ.ಕೆ.ಎಂ., ಶಿಕ್ಷಣ ಪ್ರೇಮಿಗಳಾದ ಅಜರತ ಅಲಿ, ಪೀರಸಾಬ್‌ ಬೆಳಗಟ್ಟಿ, ಸಲೀಂ ಅಳವಂಡಿ, ಬಸವರಾಜಯ್ಯಾ ವಸ್ತ್ರದ, ಶಿಕ್ಷಕರಾದ ಮುಸ್ತಿಸಾಬ್‌ ವಾಲಿಕಾರ, ಬೀಬಿಜಾನ್‌ ಇದ್ದರು.

Share this article