ರಕ್ಷಿತ್‌ ಪಡ್ರೆಗೆ ಕುಂದೇಶ್ವರ ಸಮ್ಮಾನ್‌ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Jan 25, 2024, 02:06 AM IST
ರಕ್ಷಿತ್‌ ಪಡ್ರೆಗೆ ಕುಂದೇಶ್ವರ ಸಮ್ಮಾನ್‌ ಪ್ರಶಸ್ತಿ ಪ್ರದಾನ | Kannada Prabha

ಸಾರಾಂಶ

ರಕ್ಷಿತ್‌ ಪಡ್ರೆ ನೇತೃತ್ವದಲ್ಲಿ ನಡೆದ ಶ್ವೇತಕುಮಾರ ಚರಿತ್ರೆ ಯಕ್ಷ-ನಾಟಕ ಜನ ಮೆಚ್ಚುಗೆ ಗಳಿಸಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ ಹಿರ್ಗಾನ ಶ್ರೀ ಕುಂದೇಶ್ವರ ಕ್ಷೇತ್ರ ವತಿಯಿಂದ ತೆಂಕು- ಬಡಗು ತಿಟ್ಟಿನ ಕಲಾ ಸವ್ಯಸಾಚಿ ರಕ್ಷಿತ್‌ ಪಡ್ರೆಗೆ ಕುಂದೇಶ್ವರ ಸಮ್ಮಾನ್‌ ಪ್ರಶಸ್ತಿಯನ್ನು ಜಾತ್ರೆಯ ಸಾಂಸ್ಕೃತಿಕ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನ ಮಾಡಿದ ಕೇಮಾರು ಸಾಂದೀಪನಿ ಆಶ್ರಮದ ಈಶ ವಿಠಲದಾಸ ಸ್ವಾಮೀಜಿ ಮಾತನಾಡಿ, ಬ್ರಹ್ಮದೇವ ಬ್ರಹ್ಮಲೋಕದವರು, ವಿಷ್ಣು ವೈಕುಂಠಲೋಕದಿಂದ ಭೂಲೋಕಕ್ಕೆ ಬರುವವರು ಆದರೆ ಈಶ್ವರ ಮಾತ್ರ ಭಾರತದೇಶದ ಹಿಮಾಲಯದ ಕೈಲಾಸದವರು. ಹೀಗಾಗಿ ಈಶ ಸ್ವದೇಶಿ ಎಂದು ವ್ಯಾಖ್ಯಾನಿಸಿದರು. ಬಡವರ ಕಣ್ಣೀರು ಒರೆಸಿದರೆ, ಅಶಕ್ತರಿಗೆ ಕೊಡುವ ಸಹಾಯ ದೇವರಿಗೆ ಸೇರುತ್ತದೆ. ಹೀಗಾಗಿ ಬಡವರಲ್ಲಿ ದೇವರನ್ನು ಕಾಣಬೇಕು ಎಂದರು.

ಕದ್ರಿ ನವನೀತ ಶೆಟ್ಟಿ ಮಾತನಾಡಿ, 60 ವರ್ಷಗಳ ಹಿಂದೆ ಸೀನು ಸೀನರಿ ವಿಶಿಷ್ಟ ಯಕ್ಷಗಾನ ಮಂಗಳೂರಲ್ಲಿ ನಡೆಯುತ್ತಿತ್ತು. ಇದನ್ನು ಮತ್ತೆ ರಂಗದಲ್ಲಿ ತರಬೇಕು ಎಂದು ಉರ್ವ ಸಾಯಿ ಶಕ್ತಿ ಕಲಾ ಬಳಗ ಯೋಚಿಸಿದಾಗ ಸಮರ್ಥ ಯಕ್ಷಗುರು ರಕ್ಷಿತ್‌ ಪಡ್ರೆ ಅದರ ನೇತೃತ್ವ ವಹಿಸಿ, ನಿಟ್ಟೆ ಎಂಜಿನಿಯರಿಂಗ್‌ ವಿದ್ಯಾರ್ಥಿಗಳೇ ಹೆಚ್ಚಾಗಿ ಇರುವ ಅಪೂರ್ವ ತಂಡ ಕಟ್ಟಿದರು. ಅವರಿಗೆ ಅರ್ಹತೆಗೆ ಅನುಗುಣವಾಗಿಯೇ ಈ ಪ್ರಶಸ್ತಿ ಲಭಿಸಿದೆ ಎಂದರು.

ಪ್ರಶಸ್ತಿ ಸ್ವೀಕರಿಸಿದ ರಕ್ಷಿತ್‌ ಶೆಟ್ಟಿ ಪಡ್ರೆ ಮಾತನಾಡಿ, ಹನುಮಗಿರಿ ಮೇಳದಲ್ಲಿ ಕಲಾವಿದನಾಗಿರುವಾಗಲೇ ಕಾಲೇಜು ವಿದ್ಯಾಭ್ಯಾಸ ಮಾಡುತ್ತಾ ಎಂಎಸ್ಸಿ ಮುಗಿಸಿದೆ. ಈ ಸಂದರ್ಭ ಸದಾ ಪ್ರೋತ್ಸಾಹಿಸಿದ ಮೇಳದ ಯಜಮಾನರಾದ ಟಿ. ಶ್ಯಾಮ್‌ ಭಟ್‌ ಅವರನ್ನು ಕೃತಜ್ಞತೆ ಸ್ಮರಿಸುತ್ತೇನೆ. ಈ ಸಮ್ಮಾನವನ್ನು ಹೆತ್ತ ತಾಯಿ, ಗುರುಗಳಾದ ಗಿರೀಶ್‌ ನಾವಡ, ಲೋಕೇಶ್‌, ದೇವಿಪ್ರಸಾದ್‌ ಮತ್ತು ಭರತನಾಟ್ಯ ಗುರು ಸುಮಂಗಲಾ ರತ್ನಾಕರ್‌ ಅವರಿಗೆ ಅರ್ಪಿಸುತ್ತೇನೆ ಎಂದರು.

ಕಾರ್ಯಕ್ರಮ ಸಂಯೋಜಿಸಿದ ಕುಂದೇಶ್ವರ ಪ್ರತಿಷ್ಠಾನ ಅಧ್ಯಕ್ಷ ಜಿತೇಂದ್ರ ಕುಂದೇಶ್ವರ ಮಾತನಾಡಿ, ಕುಂದೇಶ್ವರ ಕ್ಷೇತ್ರದ ಧರ್ಮದರ್ಶಿ ದಿ. ರಾಘವೇಂದ್ರ ಭಟ್‌ ಅರ್ಥಧಾರಿಗಳಾಗಿದ್ದು, ಶೃಂಗೇರಿ ಮೇಳದ ಸಂಚಾಲಕರೂ ಆಗಿದ್ದರು. ಅವರ ನೆನಪಲ್ಲಿ ಕ್ಷೇತ್ರದ ವತಿಯಿಂದ ಕುಂದೇಶ್ವರ ಸಮ್ಮಾನ್‌ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.

ಕ್ಷೇತ್ರ ಆಡಳಿತ ವರ್ಗದ ಗಂಗಾ ಆರ್.ಭಟ್‌, ವೇ.ಮೂ. ಕೃಷ್ಣ ರಾಜೇಂದ್ರ ಭಟ್‌, ವೇ.ಮೂ. ರವೀಂದ್ರ ಭಟ್‌, ಅಜೆಕಾರ್‌ ಬಾಲಕೃಷ್ಣ ಶೆಟ್ಟಿ, ರಂಜಿನಿ ಲಕ್ಷ್ಮೀನಾರಾಯಣ, ರಂಗಿಣಿ ಉಪೇಂದ್ರ ರಾವ್‌, ಸುಮನಾ ಸುಧೀಂದ್ರ ಭಟ್‌ ಇದ್ದರು. ಪ್ರತಿಜ್ಞಾ ಪ್ರಾರ್ಥಿಸಿದರು.

ಕಲಾಭೂಷಣ: ಇದೇ ಸಂದರ್ಭ ಛಾಯಾಗ್ರಹಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಶ್ರೀಗುರು ಸ್ಟುಡಿಯೋದ ಶರತ್‌ ಕಾನಂಗಿ ಅವರಿಗೆ ಕುಂದೇಶ್ವರ ಕಲಾಭೂಷಣ ಗೌರವ ಅರ್ಪಿಸಲಾಯಿತು.

ಉದ್ಘಾಟನೆ: ಶಾಸಕ ವಿ. ಸುನಿಲ್‌ ಕುಮಾರ್‌ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ, ಧಾರ್ಮಿಕ ಕಾರ್ಯಕ್ರಮಗಳ ಜತೆಯಲ್ಲಿ ನಾಟಕ, ಯಕ್ಷಗಾನದ ಮೂಲಕ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ‘ಕುಂದೇಶ್ವರ’ದಿಂದ ಕಲೆಗೆ ಪ್ರೋತ್ಸಾಹ ನೀಡುವ ಕೆಲಸ ಆಗುತ್ತಿದೆ ಎಂದರು. ಈ ಸಂದರ್ಭ ಹಿರ್ಗಾನ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹಾವೀರ ಕಟ್ಟಡ, ಮಾಜಿ ಅಧ್ಯಕ್ಷ ಸಂತೋಷ್‌ ಕುಮಾರ್‌ ಶೆಟ್ಟಿ, ಕಲಾವಿದ ಕದ್ರಿ ನವನೀತ ಶೆಟ್ಟಿ, ಅಜೆಕಾರ್‌ ಬಾಲಕೃಷ್ಣ ಶೆಟ್ಟಿ ಇದ್ದರು.

ಬಳಿಕ ರಕ್ಷಿತ್‌ ಪಡ್ರೆ ನೇತೃತ್ವದಲ್ಲಿ ನಡೆದ ಶ್ವೇತಕುಮಾರ ಚರಿತ್ರೆ ಯಕ್ಷ-ನಾಟಕ ಜನ ಮೆಚ್ಚುಗೆ ಗಳಿಸಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ