ಆತ್ಮವಿಶ್ವಾಸ ಹೆಚ್ಚಳಕ್ಕೆ ಸಾಂಸ್ಕೃತಿಕ ಸ್ಪರ್ಧೆ ಪೂರಕ: ಸುಜಾತಾ ಗಾಂವಕರ್

KannadaprabhaNewsNetwork | Updated : Nov 13 2024, 12:05 AM IST

ಸಾರಾಂಶ

ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಯಾಶೀಲವಾಗಿರುವುದರ ಬದಲು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದರೆ ಸಂತೋಷ ಇಮ್ಮಡಿಯಾಗುತ್ತದೆ.

ಅಂಕೋಲಾ: ವಿದ್ಯಾರ್ಥಿಗಳು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದರೆ ಅವರ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವುದು ತುಂಬಾ ಮುಖ್ಯ. ಬಹುಮಾನ ನಂತರದ್ದು. ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವಲ್ಲಿ ಸಿಗುವ ಖುಷಿ ಬದುಕಿನ ಕೊನೆಯವರೆಗೂ ಜೀವಂತವಾಗಿರುತ್ತದೆ ಎಂದು ತಾಪಂ ಮಾಜಿ ಅಧ್ಯಕ್ಷೆ ಸುಜಾತಾ ಗಾಂವಕರ್ ಅಭಿಪ್ರಾಯಪಟ್ಟರು.ಪಟ್ಟಣದ ಪ್ರತಿಷ್ಠಿತ ಕೆನರಾ ವೆಲ್ಫೇರ್ ಟ್ರಸ್ಟಿನ ಪಿ.ಎಂ. ಸಂಯುಕ್ತ ಪಪೂ ಕಾಲೇಜಿನಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಪಪೂ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಕೆನರಾ ವೆಲ್ಫೆರ್ ಟ್ರಸ್ಟಿನ ಟ್ರಸ್ಟಿ ಡಾ. ವಿ.ಎನ್. ನಾಯಕ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಯಾಶೀಲವಾಗಿರುವುದರ ಬದಲು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿದರೆ ಸಂತೋಷ ಇಮ್ಮಡಿಯಾಗುತ್ತದೆ ಎಂದರು.ವಿದ್ಯಾರ್ಥಿನಿಯರಾದ ಯಶೋದಾ ಗೌಡ ಸಂಗಡಿಗರು ಸ್ವಾಗತಗೀತೆ ಹಾಡಿದರು. ಕಾಲೇಜಿನ ಪ್ರಾಚಾರ್ಯ ಫಾಲ್ಗುಣ ಗೌಡ ಸರ್ವರನ್ನು ಸ್ವಾಗತಿಸಿದರು.

ಉಪನ್ಯಾಸಕರಾದ ಉಲ್ಲಾಸ ಹುದ್ದಾರ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿ ಪರಿಚಯಿಸಿದರು. ಉಮೇಶ್ ಎಲ್. ಗೌಡ ನಿರೂಪಿಸಿದರು. ಶ್ರೀನಿವಾಸ ಯು.ಕೆ. ವಂದಿಸಿದರು. ಉಪನ್ಯಾಸಕ ರಮೇಶ ಗೌಡ ಎಂ. ಬೋಧಕೇತರ ಸಿಬ್ಬಂದಿಗಳಾದ ವಿನಾಯಕ ನಾಯ್ಕ, ಗಣಪತಿ ಗೌಡ, ಜಿ.ಸಿ. ಕಾಲೇಜಿನ ಉಪನ್ಯಾಸಕಿಯರಾದ ಸೌಮ್ಯ ಕಾಮತ, ಅನುಷಾ ಪಡ್ನೆಕರ್, ರೇಷ್ಮಾ ನಾಯ್ಕ, ಶಿಲ್ಪಾ ಹೊನ್ನಕೋಟೆ ಮತ್ತು ಶೃತಿ ನಾಯ್ಕ ಸಹಕರಿಸಿದರು.

ಸಾಹಿತಿಗಳಾದ ನಾಗೇಂದ್ರ ನಾಯಕ ತೊರ್ಕೆ, ಜೆ. ಪ್ರೇಮಾನಂದ, ಮಹಾಂತೇಶ ರೇವಡಿ, ಎಸ್.ಆರ್. ಉಡುಪ, ಉಪನ್ಯಾಸಕ ಎಸ್.ಆರ್. ನಾಯಕ, ಅಶೋಕ ಆಗೇರ, ಶಿಕ್ಷಕರಾದ ಬಾಲಚಂದ್ರ ನಾಯಕ, ಮಹಾಬಲೇಶ್ವರ ಗೌಡ, ಪ್ರಶಾಂತ ನಾಯ್ಕ, ಮಧುರಾ ಭಟ್ಟ, ಶಶಿಧರ ಭಟ್ಟ ಮುಂತಾದವರು ನಿರ್ಣಾಯಕರಾಗಿ ಭಾಗವಹಿಸಿದ್ದರು.

ಸುಜಾತಾ ಗಾಂವಕರ್, ಡಾ ವಿ.ಎನ್. ನಾಯಕ, ಸುನೀಲ್ ಪ್ರಭು, ಡಾ. ಎಸ್.ಎನ್. ಭಟ್ಟ ಸಹಕಾರ ನೀಡಿದರು. ನಂತರ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.ಅಡಕೆ ಕದ್ದ ಆರೋಪಿಯ ಬಂಧನ

ಶಿರಸಿ: ಮನೆಯ ಜಗಲಿಯಲ್ಲಿ ಸುಲಿದು ಚೀಲದಲ್ಲಿ ತುಂಬಿಟ್ಟ ಸುಮಾರು 75 ಕೆಜಿ ತೂಕದ ಅಡಕೆಯನ್ನು ಕಳ್ಳತನ ನಡೆಸಿದ್ದ ವ್ಯಕ್ತಿಯನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.ತಾಲೂಕಿನ ಬೊಮ್ಮನಳ್ಳಿಯ ಪ್ರಭಾಕರ ಗಣಪತಿ ಭಂಡಾರಿ(62) ಬಂಧಿತ ವ್ಯಕ್ತಿ.ಯಾರೋ ಕಳ್ಳರು ಮನೆಯ ಜಗಲಿಯಲ್ಲಿ ಸುಲಿದು ಚೀಲದಲ್ಲಿ ತುಂಬಿಟ್ಟ ಸುಮಾರು 75 ಕೆಜಿ ತೂಕದ ₹30 ಸಾವಿರ ಮೌಲ್ಯದ ಅಡಕೆಯನ್ನು ಕಳ್ಳತನ ಮಾಡಿದ ಬಗ್ಗೆ ಬೊಮ್ಮನಳ್ಳಿಯ ಗಣಪತಿ ರಾಮಕೃಷ್ಣ ಹೆಗಡೆ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆತನನ್ನು ವಶಕ್ಕೆ ಪಡೆದು ಕಳ್ಳತನ ಮಾಡಿದ ₹30 ಸಾವಿರ ಮೌಲ್ಯದ 75 ಕೆಜಿ ತೂಕದ ಅಡಕೆಯನ್ನು ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ. ಜಯಕುಮಾರ್, ಜಗದೀಶ ನಾಯ್ಕ, ಡಿಎಸ್‌ಪಿ ಗಣೇಶ್‌ ಕೆ.ಎಲ್., ಗ್ರಾಮೀಣ ಠಾಣೆ ಪಿಐ ಸೀತಾರಾಮ.ಪಿ ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆಯ ತನಿಖಾ ಪಿಎಸ್‌ಐ ದಯಾನಂದ್ ಜೋಗಳೇಕರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಹಾದೇವ ನಾಯಕ್, ಗಣಪತಿ ನಾಯ್ಕ, ಯಲ್ಲಪ್ಪ ಪೂಜೆರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Share this article