19-20ರಂದು ಸಾಂಸ್ಕೃತಿಕ ಸಮಾವೇಶ: 31 ಕೃತಿ ಲೋಕಾರ್ಪಣೆ

KannadaprabhaNewsNetwork | Published : Apr 18, 2025 12:43 AM

ಸಾರಾಂಶ

ಸಾಹಿತಿಗಳ ಸಾಂಸ್ಕೃತಿಕ ಸಮಾವೇಶ ಹಾಗೂ ಕುರುಬರ ಸಂಸ್ಕೃತಿ ದರ್ಶನ ಜನಪ್ರಿಯ ಮಾಲೆಯ 32 ಗ್ರಂಥಗಳ ಅನಾವರಣ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತುಮಕೂರುಕುರುಬರ ಸಾಂಸ್ಕೃತಿಕ ಪರಿಷತ್ತು(ಟ್ರಸ್ಟ್) ಬೆಂಗಳೂರು, ಶ್ರೀದೇವಿ ಶಿಕ್ಷಣ ಸಂಸ್ಥೆ ತುಮಕೂರು ಹಾಗೂ ಪ್ರಜಾಪ್ರಗತಿ-ಪ್ರಗತಿ ಟಿವಿ ಸಮೂಹದ ಸಹಯೋಗದಲ್ಲಿ ಸಾಹಿತಿಗಳ ಸಾಂಸ್ಕೃತಿಕ ಸಮಾವೇಶ ಹಾಗೂ ಕುರುಬರ ಸಂಸ್ಕೃತಿ ದರ್ಶನ ಜನಪ್ರಿಯ ಮಾಲೆಯ 32 ಗ್ರಂಥಗಳ ಅನಾವರಣ ಕಾರ್ಯಕ್ರಮವನ್ನು ನಗರದ ಶಿರಾ ರಸ್ತೆ ಶ್ರೀದೇವಿ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ದಿ.19 ಹಾಗೂ 20ರಂದು 2 ದಿನಗಳ ಕಾಲ ಏರ್ಪಡಿಸಲಾಗಿದೆ ಎಂದು ಶ್ರೀದೇವಿ ಶಿಕ್ಷಣ ಸಮೂಹದ ಅಧ್ಯಕ್ಷರು, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್ ತಿಳಿಸಿದರು.ನಗರದ ಪತ್ರಿಕಾ ಭವನದಲ್ಲಿ ಗುರುವಾರ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಇದೊಂದು ಅನನ್ಯ. ಅಪೂರ್ವ ಕಾರ್ಯಕ್ರಮ. ಕುರುಬರು, ಹಾಲುಮತ ಸಮುದಾಯದ ಸಂಸ್ಕೃತಿ, ಚರಿತ್ರೆ, ಕುಲದೈವ, ಸಾಹಿತ್ಯ, ಉತ್ಸವಕ್ಕೆ ಸಂಬಂಧಿಸಿದಂತೆ ೩೧ ಸಂಗ್ರಹಯೋಗ್ಯ ಕೃತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸುತ್ತಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಸಹಕಾರಿ ಸಚಿವ ಕೆ.ಎನ್.ರಾಜಣ್ಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಪಾಲ್ಗೊಳ್ಳುವರು. ರಾಜ್ಯದ ವಿವಿಧೆಡೆಯ ಸಾಹಿತಿಗಳು, ವಿದ್ವಾಂಸರು, ಸಂಶೋಧಕರು ಈ ಗ್ರಂಥ ಲೋಕಾರ್ಪಣೆ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ ಎಂದರು. ಭಾನುವಾರ ಸಂಜೆ ೪ಕ್ಕೆ ಸಮಾರೋಪ ನಡೆಯಲಿದ್ದು, ಕೊಪ್ಪಳ ವಿವಿ ಕುಲಪತಿ ಡಾ.ಬಿ.ಕೆ.ರವಿ ಸಮಾರೋಪ ಭಾಷಣ ಮಾಡಲಿದ್ದು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಎಂಎಲ್ಸಿ , ಶ್ರೀದೇವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ಹಾಗೂ ಎಸ್.ನಾಗಣ್ಣ ಪಾಲ್ಗೊಳ್ಳುವರು. ವಿವಿಧ ಕ್ಷೇತ್ರದ ಹದಿನಾಲ್ಕು ಮಂದಿ ಪ್ರಮುಖರು ಸಮಾರೋಪದಲ್ಲಿ ಉಪಸ್ಥಿತರಿರುವರು ಎಂದರು.

Share this article