ಸಾಂಸ್ಕೃತಿಕ ಚಿಂತನೆಗಳು ಬದುಕಿನ ಆಶಯಕ್ಕೆ ಪೂರಕ: ದಿವ್ಯ ಜ್ಞಾನಾನಂದ ಸ್ವಾಮೀಜಿ

KannadaprabhaNewsNetwork |  
Published : Nov 23, 2025, 01:30 AM IST
ದೊಡ್ಡಬಳ್ಳಾಪುರದ ತಾಲೂಕು ಕಲಾವಿದರ ಸಂಘದ ವತಿಯಿಂದ ಕಲಾವಿದರ ಸಾಂಸ್ಕೃತಿಕ ಹಬ್ಬದ ಅಂಗವಾಗಿ ಆಕರ್ಷಕ ಮೆರವಣಿಗೆ ನಡೆಯಿತು. | Kannada Prabha

ಸಾರಾಂಶ

ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲೂಕಿನ ಹಿರಿಯ ಕಲಾವಿದರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಇಲ್ಲಿನ ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘದಿಂದ 3 ದಿನಗಳ ಕಾಲ ನಗರದ ಡಾ. ರಾಜ್‌ಕುಮಾರ್ ಕಲಾ ಮಂದಿರದಲ್ಲಿ ನಡೆಯಲಿರುವ 70ನೇ ಕನ್ನಡ ರಾಜ್ಯೋತ್ಸವ ಹಾಗೂ ಕಲಾವಿದರ ಸಾಂಸ್ಕೃತಿಕ ಹಬ್ಬ- 2025 ಕಾರ್ಯಕ್ರಮಕ್ಕೆ ಸಂಭ್ರಮದ ಚಾಲನೆ ದೊರೆಯಿತು.

ಡಾ.ರಾಜ್‌ಕುಮಾರ್ ಕಲಾ ಮಂದಿರದಲ್ಲಿ ನಡೆದ ವೇದಿಕೆ ಕಾರ್ಯಕ್ರಮವನ್ನು ತಪಸೀಹಳ್ಳಿಯ ಪುಷ್ಪಾಂಡಜ ಆಶ್ರಮದ ಪೀಠಾಧ್ಯಕ್ಷ ದಿವ್ಯ ಜ್ಞಾನಾನಂದ ಸ್ವಾಮೀಜಿ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ, ನಮ್ಮ ಕಲೆ, ಸಂಸ್ಕೃತಿಗಳ ಉಳಿವಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪೂರಕವಾಗಿದ್ದು, ಕಲೆಯಿಂದ ಸಾಂಸ್ಕೃತಿಕ ಬೆಸುಗೆಯಾಗಲಿದೆ. ಪೌರಾಣಿಕ ಪಾತ್ರಗಳು ನಮ್ಮ ಬದುಕಿನ ಸಂವೇದನೆಯನ್ನು ಬಿಂಬಿಸುತ್ತವೆ. ಸಾಂಸ್ಕೃತಿಕ ಚಿಂತನೆಗಳು ಜೀವನದ ಉತ್ಸಾಹವನ್ನು ಹೆಚ್ಚಿಸುವ ಪೂರಕ ಘಟಕಗಳಾಗಿವೆ ಎಂದರು.

ಬೆಂ.ಗ್ರಾ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ ಮಾತನಾಡಿ, ಇಂದಿನ ಪೀಳಿಗೆಗೆ ನಾವು ಕಲೆಯ ಬಗ್ಗೆ ಅಭಿರುಚಿ ಮೂಡಿಸಿ, ಕಲಿಸದಿದ್ದರೆ ಅನೇಕ ಕಲೆಗಳು ನೇಪಥ್ಯಕ್ಕೆ ಸರಿಯುತ್ತವೆ. ಈ ದಿಸೆಯಲ್ಲಿ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಕಲಾವಿದರ ಪಾತ್ರ ಮಹತ್ವದ್ದಾಗಿದೆ. ಅಂತೆಯೇ ಸಮುದಾಯದ ಉತ್ತೇಜನ ಬೇಕಿದೆ. ಕಲಾವಿದರು, ಮಾಸಾಶನಕ್ಕೆ ಮಾತ್ರ ಸೀಮಿತರಾಗದೇ ಎಲ್ಲಾ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕಿದೆ ಎಂದು ಹೇಳಿದರು.

ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲೂಕಿನ ಹಿರಿಯ ಕಲಾವಿದರನ್ನು ಸನ್ಮಾನಿಸಲಾಯಿತು.

ಆಕರ್ಷಕ ಮೆರವಣಿಗೆ:

ನಗರದ ವಿನಾಯಕನಗರದ ಕಲಾಭವನದ ಬಳಿಯಿಂದ ಡಾ.ರಾಜ್‌ಕುಮಾರ್ ಕಲಾ ಮಂದಿರದವರೆಗೆ, ಭುವನೇಶ್ವರಿ ದೇವಿ ಭವ್ಯ ಮೆರವಣಿಗೆ ವೀರಗಾಸೆ, ಡೊಳ್ಳು ಕುಣಿತ, ಗೊರವನ ಕುಣಿತ, ಗಾರುಡಿ ಗೊಂಬೆಗಳು, ತಮಟೆ ವಾದ್ಯ, ಮಂಗಳ ವಾದ್ಯ ಮೊದಲಾದ ಜಾನಪದ ಕಲಾ ತಂಡಗಳೊಡನೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಕಲಾವಿದರ ವಿವಿಧ ವೇಷ ಭೂಷಣಗಳು ಗಮನ ಸೆಳೆದವು. ಕನ್ನಡದ ಶಾಲುಗಳನ್ನು ಧರಿಸಿ ಬಾವುಟ ಹಿಡಿದ ನೂರಾರು ಕಲಾವಿದರು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಶಿವರಾಜ್, ನಟ ವೀಡಾ ಸುಧೀರ್, ಕೆ.ಎನ್.ತಮ್ಮಣ್ಣ ತಾಲೂಕು ಕಲಾವಿದರ ಸಂಘದ ಗೌ.ಅಧ್ಯಕ್ಷ ಎಸ್. ರಾಮಮೂರ್ತಿ, ಪ್ರಧಾನ ಕಾರ್ಯನದರ್ಶಿ ಬಿ.ಚಂದ್ರಶೇಖರ್, ಉಪಾಧ್ಯಕ್ಷರಾದ ಎಚ್ ಪ್ರಕಾಶ್ ರಾವ್, ನರಸಿಂಹಯ್ಯ, ಖಜಾಂಚಿ ಎಚ್.ಮುನಿಪಾಪಯ್ಯ, ಕಾರ್ಯದರ್ಶಿ ಎ.ಮಂಜುನಾಥ್, ಜಂಟಿ ಕಾರ್ಯದರ್ಶಿ ಮುದ್ದುಕೃಷ್ಣಪ್ಪ, ವೆಂಕಟರಾಜು, ಸಲಹಾ ಸಮಿತಿಯ ಇತರರಿದ್ದರು.

ಫೋಟೋ-

22ಕೆಡಿಬಿಪಿ2- ದೊಡ್ಡಬಳ್ಳಾಪುರದ ತಾಲೂಕು ಕಲಾವಿದರ ಸಂಘದ ವತಿಯಿಂದ ಕಲಾವಿದರ ಸಾಂಸ್ಕೃತಿಕ ಹಬ್ಬದ ಅಂಗವಾಗಿ ಆಕರ್ಷಕ ಮೆರವಣಿಗೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೋಲ್ಡನ್‌ ಅವರ್‌ನಲ್ಲಿ ವಂಚಕರ ಪಾಲಾಗುತ್ತಿದ್ದ 2.16 ಕೋಟಿ ರು ವಾಪಸ್
ಇಂದಿನಿಂದ ಲಂಡನ್‌ ಮಾದರಿ ಡಬಲ್‌ ಡೆಕ್ಕರ್‌ ಬಸ್‌ ಸಂಚಾರ