ಆಧುನಿಕತೆಯಿಂದ ಮರೆಯಾದ ಸಂಸ್ಕೃತಿ, ಪರಂಪರೆ

KannadaprabhaNewsNetwork |  
Published : Aug 31, 2025, 02:00 AM IST
30ಕೆಕೆಆರ್2:ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ಶ್ರೀ ಜಯದೇವ ಗಜಾನನ ಗೆಳೆಯರ ಬಳಗದ ವತಿಯಿಂದ ಗಣೇಶ ಪ್ರತಿಷ್ಠಾಪನೆಯ ಪ್ರಯುಕ್ತವಾಗಿ  ಜನಪದ ಉತ್ಸವ ಕಾರ್ಯಕ್ರಮ ಜರುಗಿತು. | Kannada Prabha

ಸಾರಾಂಶ

ಜೀವನದಲ್ಲಿ ದೇವರನ್ನು ಕಾಣಬೇಕು ಎನ್ನುವವರು ನೂರಾರು ಮೈಲಿ ತೀರ್ಥಯಾತ್ರೆ ಮಾಡುವುದು ಬೇಡ. ಪಾಪ ಕಳೆಯಲೆಂದು ಸಾವಿರ ಬಾರಿ ಗಂಗಾಸ್ನಾನ ಮಾಡುವುದು ಬೇಡ. ತಂದೆ-ತಾಯಿಗೆ ಪ್ರತಿದಿನ ಬೆಳಗ್ಗೆ ಒಂದು ಬಾರಿ ಪ್ರದಕ್ಷಿಣೆ ಹಾಕಿದರೆ ಸಾಕು.

ಕುಕನೂರು:

ಆಧುನಿಕತೆಯ ಭರಾಟೆಯಲ್ಲಿ ನಮ್ಮ ಸಂಸ್ಕೃತಿ, ಪರಂಪರೆ ಮರೆಯುತ್ತಿದ್ದೇವೆ. ಅದನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ಎಂದು ಹರ್ಲಾಪುರದ ಡಾ. ಅಭಿನವ ಕೊಟ್ಟುರೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಬಿನ್ನಾಳದಲ್ಲಿ ಜಯದೇವ ಗಜಾನನ ಗೆಳೆಯರ ಬಳಗದ ವತಿಯಿಂದ ಗಣೇಶ ಪ್ರತಿಷ್ಠಾಪನೆ ಪ್ರಯುಕ್ತವಾಗಿ ಜರುಗಿದ ಜನಪದ ಉತ್ಸವ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಅವರು, ಸಾವಿರ ದೇವರ ಪೂಜಿಸುವ ಮೊದಲು ವಿಘ್ನ ವಿನಾಯಕನನ್ನು ಪೂಜಿಸುವುದು ಭಾರತೀಯರ ಸಂಪ್ರದಾಯ. ಯುವಕರು ಗಣೇಶ ಪ್ರತ್ರಿಷ್ಠಾಪನೆ ಮಾಡುವುದಷ್ಟೇ ಅಲ್ಲದೆ ಆ ಮೂಲಕ ಜನಪದ ಕಂಪು ಪಸರಿಸುವ ಕೆಲಸ ಮಾಡುತ್ತಿರುವುದು ಮುಂದಿನ ಪೀಳಿಗೆಗೆ ಜನಪದ ನೀಡಿದಂತೆ ಆಗುತ್ತದೆ ಎಂದರು.

ಭಾರತೀಯ ಜನಪದ ಕಂಪು ಬಹಳ ಇಂಪಾಗಿದೆ. ಜೀವನದಲ್ಲಿ ದೇವರನ್ನು ಕಾಣಬೇಕು ಎನ್ನುವವರು ನೂರಾರು ಮೈಲಿ ತೀರ್ಥಯಾತ್ರೆ ಮಾಡುವುದು ಬೇಡ. ಪಾಪ ಕಳೆಯಲೆಂದು ಸಾವಿರ ಬಾರಿ ಗಂಗಾಸ್ನಾನ ಮಾಡುವುದು ಬೇಡ. ತಂದೆ-ತಾಯಿಗೆ ಪ್ರತಿದಿನ ಬೆಳಗ್ಗೆ ಒಂದು ಬಾರಿ ಪ್ರದಕ್ಷಿಣೆ ಹಾಕಿದರೆ ಸಾಕು, ಎಲ್ಲ ಭಾಗ್ಯಗಳು ನಿಮ್ಮದಾಗುತ್ತವೆ ಎಂದು ಹೇಳಿದರು.

ಪತ್ರಕರ್ತ ಜಗದೀಶ್ ಚಟ್ಟಿ ಮಾತನಾಡಿ, ಕಲಾವಿದರ ತವರೂರು ಎಂದು ಕರೆಯಲ್ಪಡುವ ಬಿನ್ನಾಳದಲ್ಲಿ ರಾಜ್ಯ, ರಾಷ್ಟ್ರಮಟ್ಟದ ಕಲಾವಿದರನ್ನು ಆಹ್ವಾನಿಸಿ, ಕಲೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಮಾದರಿ ಕಾರ್ಯ ಎಂದರು.

ಸಾವಿರ ಹಾಡುಗಳ ಸರದಾರ ಎಂದು ಖ್ಯಾತರಾಗಿರುವ ಕರ್ನಾಟಕ ಜನಪದ ಅಕಾಡೆಮಿ ಸದಸ್ಯ ಶಂಕ್ರಣ್ಣ ಸಂಕಣ್ಣವರ ಮತ್ತು ಕಬ್ಬನೂರ ಕಲಾ ತಂಡ ಸತತ ನಾಲ್ಕು ತಾಸು ದೇಶಿ ಸೊಗಡಿನ ಸೋಬಾನೆ, ಹಂತಿ, ಲಾವಣಿ, ಜೋಗತಿ ಪದಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಈ ವೇಳೆ ಸಿದ್ದಲಿಂಗಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ದ್ರಾಕ್ಷಾಯಣಿ ತಹಸೀಲ್ದಾರ್‌, ಸದಸ್ಯರಾದ ಕಮಲಾಕ್ಷಿ ಕಂಬಳಿ, ಚನ್ನಮ್ಮ ಮುತ್ತಾಳ, ಮಹಮದಾಸಾಬ್ ಉಮಚಗಿ, ಲಕ್ಷ್ಮಣ ಚಲವಾದಿ, ಗೂರಪ್ಪ ಪಂತರ, ಬಸವರಾಜ ಭಜಂತ್ರಿ, ಬಸವರಾಜ ಮೆಣಸಿನಕಾಯಿ, ಸಂತೋಷ ಮೆಣಸಿನಕಾಯಿ, ಮಹಮ್ಮದ್‌ ಗೌಸ್ ಇದ್ದರು.

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ