ಸಂಸ್ಕಾರ ಆಧರಿತ ಶಿಕ್ಷಣ ಆದ್ಯತೆಯಾಗಲಿ: ಮಂಗೇಶ ಭೇಂಡೆ

KannadaprabhaNewsNetwork |  
Published : May 23, 2025, 12:13 AM IST
ಫೋಟೋ : 22ಎಚ್‌ಎನ್‌ಎಲ್1 | Kannada Prabha

ಸಾರಾಂಶ

ಭಾರತದ ಮೇಲೆ ಹಲವು ಸಾಂಸ್ಕೃತಿಕ ದಾಳಿಗಳಾಗಿವೆ. ಆದರೆ ಎಲ್ಲ ದಾಳಿಗಳನ್ನು ಮೆಟ್ಟಿ ನಿಂತು ನಮ್ಮ ಸಂಸ್ಕೃತಿ ಗಟ್ಟಿಯಾಗಿ ಉಳಿದಿದೆ.

ಹಾನಗಲ್ಲ: ಉದಾತ್ತವಾದ ಭಾರತೀಯ ಸಂಸ್ಕೃತಿಯ ಸಂವೇದನಗೆಳನ್ನು ಒಳಗೊಂಡು, ನೈತಿಕ, ಬೌದ್ಧಿಕ ಶಿಕ್ಷಣ ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ತೀರ ಅಗತ್ಯವಿದೆ ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ತಿಳಿಸಿದರು.ಗುರುವಾರ ಹಾನಗಲ್ಲ ಬಳಿಯ ಮಲ್ಲಿಗಾರ ಗ್ರಾಮದಲ್ಲಿ ನೂತನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಟ್ಟಡ ಉದ್ಘಾಟಿಸಿ ಮಾತನಾಡಿ, ಸಂಸ್ಕಾರ ಆಧರಿತ ಶಿಕ್ಷಣ ನಮ್ಮ ಆದ್ಯತೆಯಾಗಬೇಕು. ಬ್ರಿಟಿಷರ ಆಳ್ವಿಕೆ ಸಂದರ್ಭದಲ್ಲಿ ನಮ್ಮ ದೇಶದ ಆಡಳಿತಾತ್ಮಕ ವ್ಯವಹಾರವಷ್ಟೇ ಅವರ ಕೈಯ್ಯಲ್ಲಿ ಇರಲಿಲ್ಲ. ಅವರು ನಮ್ಮ ಸಂಸ್ಕೃತಿ ಶಿಕ್ಷಣ ಬದಲಾಯಿಸುವ ಹುನ್ನಾರ ನಡೆಸಿದರು ಎಂದರು.ಭಾರತದ ಮೇಲೆ ಹಲವು ಸಾಂಸ್ಕೃತಿಕ ದಾಳಿಗಳಾಗಿವೆ. ಆದರೆ ಎಲ್ಲ ದಾಳಿಗಳನ್ನು ಮೆಟ್ಟಿ ನಿಂತು ನಮ್ಮ ಸಂಸ್ಕೃತಿ ಗಟ್ಟಿಯಾಗಿ ಉಳಿದಿದೆ. ಈಗಿನ ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮೆಕಾಲೆ ಶಿಕ್ಷಣದ ದೋಷಗಳನ್ನು ನಿವಾರಿಸಿ, ಜೀವನ ಮೌಲ್ಯದ ಶಿಕ್ಷಣ ನೀಡುವ ಉದ್ದೇಶ ಇದೆ ಎಂದು ಭೇಂಡೆ ಹೇಳಿದರು.

ದೇಶದ್ರೋಹಿಗಳ ಬಗ್ಗೆ ಎಚ್ಚರವಾಗಿರಿ. ಬರುವ ಪೀಳಿಗೆ ದೇಶಕ್ಕೆ ಆಸ್ತಿಯಾಗಬೇಕು. ಜಗತ್ತನ್ನೇ ಉದ್ಧರಿಸುವ ವಿಚಾರಧಾರೆ ಹಿಂದೂ ಧರ್ಮ ಹಾಗೂ ಶಿಕ್ಷಣ ಪದ್ಧತಿಯಲ್ಲಿದೆ. ಸ್ವಾಭಿಮಾನದ ಶಿಕ್ಷಣದ ಪುನರುತ್ಥಾನಕ್ಕೆ ನಾವೆಲ್ಲ ಮುಂದಾಗೋಣ ಎಂದರು.ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಮಾತನಾಡಿ, ಶಾಲೆಗಳು ಸಂಸ್ಕಾರದ ವಾತಾವರಣದಲ್ಲಿರಬೇಕು. ಶಿಕ್ಷಕ ಸೇವೆ ಅತ್ಯಂತ ಪವಿತ್ರವಾದುದು. ಒಳ್ಳೆಯ ಮಕ್ಕಳನ್ನು ಬೆಳೆಸಲು, ದೇಶ ಸಮಾಜಕ್ಕೆ ಒಳ್ಳೆಯದನ್ನು ನೀಡಲು ಆದರ್ಶ ಶಿಕ್ಷಣ ಬೇಕಾಗಿದೆ. ಶಾಲೆಗಳಿಗೆ ನೈತಿಕ, ವ್ಯಾವಹಾರಿಕ ಬೆಂಬಲ ಪಾಲಕ- ಪೋಷಕರದ್ದಾಗಬೇಕು. ಶಿಕ್ಷಕ, ತಾಯಿ, ವೈದ್ಯ, ಮಠಾಧೀಶ, ಸೈನಿಕರು ಸಂಬಳಕ್ಕಾಗಿ ಕೆಲಸ ಮಾಡುವುದಿಲ್ಲ. ಅವರೆಲ್ಲ ಮಾಡುತ್ತಿರುವುದು ಸೇವೆ. ಗುರುವೇ ನಮ್ಮ ಪಾಲಿನ ನಿಜವಾದ ದೇವರು. ಶಿಕ್ಷಕ, ಬಾಲಕ, ಪಾಲಕ, ಸಂಸ್ಥೆಯ ಸಮಭಾಗಿತ್ವದಿಂದ ಮಾತ್ರ ಒಳ್ಳೆಯ ಶಿಕ್ಷಣ ಸಾಧ್ಯ ಎಂಬ ಅರಿವು ಎಲ್ಲರಿಗೂ ಇರಲಿ ಎಂದರು.

ಹುಬ್ಬಳ್ಳಿ ಮೂರುಸಾವಿರ ಮಠದ ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು ಆಶೀರ್ವಚನ ನೀಡಿ, ರಾಷ್ಟ್ರೀಯತೆಯನ್ನೇ ಉಸಿರಾಗಿಸಿಕೊಂಡ ಆರ್‌ಎಸ್‌ಎಸ್ ಹಾಗೂ ಪರಿವಾರದ ಸ್ವಯಂ ಸೇವಕರು ಬಿಳಿ ವಸ್ತ್ರದ ಸನ್ಯಾಸಿಗಳು. ನಿಸ್ವಾರ್ಥ ಸೇವೆಯನ್ನು ಅವರ ನಿತ್ಯ ನಿರಂತರ ಚಟುವಟಿಕೆಯಲ್ಲಿ ಕಲಿಯುವಂತಹದ್ದು. ಈ ಸಂಸ್ಥೆ ರಾಷ್ಟ್ರೋತ್ಥಾನ ಅಂಗ ಸಂಸ್ಥೆಯ ಮೂಲಕ ಶ್ರೇಷ್ಠವಾದ ವಿದ್ಯಾದಾನಕ್ಕೆ ಹೆಸರಾಗಿರುವುದಲ್ಲದೆ, ಹಾನಗಲ್ಲಿನಂಥ ಗ್ರಾಮೀಣ ಭಾಗದಲ್ಲಿ ಇಂತಹ ಉತ್ತಮ ಶಿಕ್ಷಣ ಸಂಸ್ಥೆ ಆರಂಭಿಸಿರುವುದು ಅವರ ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರೀತಿಯ ದ್ಯೋತಕ ಎಂದರು.ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನೇಶ ಹೆಗಡೆ, ಆರ್‌ಇಸಿ ಸ್ವತಂತ್ರ ನಿರ್ದೇಶಕ ನಾರಾಯಣನ್ ತಿರುಪತಿ, ಹಿರಿಯ ಸಿಪಿಎಂ ಆರ್‌ಸಿಇ ಸೋಮ್ಯಕಾಂತ್, ಕಾರ್ಯಕಾರಿ ನಿರ್ದೇಶಕ ಅಣ್ಣಪ್ಪ ದೇವರಮನೆ, ಪ್ರಾಚಾರ್ಯೆ ಜಿ.ಎನ್. ಶ್ರೀದೇವಿ ಉಪಸ್ಥಿತರಿದ್ದರು.

ಸಂಗೀತ ಶಿಕ್ಷಕಿ ಶಾಂಭವಿ ಪಾಟೀಲ ಪ್ರಾರ್ಥನೆ ಹಾಡಿದರು. ಪ್ರಾಚಾರ್ಯ ಜಿ.ಎನ್. ಶ್ರೀದೇವಿ ಸ್ವಾಗತಿಸಿದರು. ಜಯಣ್ಣ ವಂದಿಸಿದರು.ಜಿಲ್ಲೆಗೊಂದು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ: ದಿನೇಶ ಹೆಗಡೆ

ಹಾನಗಲ್ಲ: ರಾಜ್ಯದ ಎಲ್ಲ ಜಿಲ್ಲೆಗೊಂದು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸ್ಥಾಪಿಸುವ ಸಂಕಲ್ಪ ನಮ್ಮದಾಗಿದ್ದು, ಭಾರತೀಯ ಸಂಸ್ಕೃತಿ, ಪರಂಪರೆಗೆ ಪೂರಕವಾದ ದೇಶಾಭಿಮಾನದ ಬೆಳೆಸುವ, ಪ್ರತಿಭೆಗಳನ್ನು ಪ್ರಜ್ವಲಿಸುವಂತೆ ಮಾಡುವ ಸದುದ್ದೇಶ ನಮ್ಮದಾಗಿದೆ ಎಂದು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನೇಶ ಹೆಗಡೆ ತಿಳಿಸಿದರು.ಗುರುವಾರ ಹಾನಗಲ್ಲ ಬಳಿಯ ಮಲ್ಲಿಗಾರ ಗ್ರಾಮದಲ್ಲಿ ನೂತನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಹಾಗೂ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಈಗಿನ ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮೆಕಾಲೆ ಶಿಕ್ಷಣದ ದೋಷಗಳನ್ನು ನಿವಾರಿಸಿ ಜೀವನ ಮೌಲ್ಯದ ಶಿಕ್ಷಣ ನೀಡುವ ಆದ್ಯತೆ ಇದೆ. ದೇಶದ್ರೋಹಿಗಳ ಬಗ್ಗೆ ಎಚ್ಚರವಾಗಿರಿ. ಬರುವ ಪೀಳಿಗೆ ದೇಶಕ್ಕೆ ಆಸ್ತಿಯಾಗಬೇಕು. ಜಗತ್ತನ್ನೇ ಉದ್ಧರಿಸುವ ವಿಚಾರಧಾರೆ ಹಿಂದೂ ಧರ್ಮ ಹಾಗೂ ಶಿಕ್ಷಣ ಪದ್ಧತಿಯಲ್ಲಿದೆ. ಸ್ವಾಭಿಮಾನದ ಶಿಕ್ಷಣದ ಪುನರುತ್ಥಾನಕ್ಕೆ ಮುಂದಾಗೋಣ ಎಂದರು.ಹಾನಗಲ್ಲಿನಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಸ್ಥಾಪನೆಯಲ್ಲಿ ಮಾಜಿ ಸಚಿವ ದಿ. ಸಿ.ಎಂ. ಉದಾಸಿ ಅವರ ದಿವ್ಯ ಸಂಕಲ್ಪಶಕ್ತಿ ಇದೆ. ಅವರು ಅತ್ಯಂತ ಕಾಳಜಿಯಿಂದ ಈ ಸಂಸ್ಥೆ ಕಟ್ಟಲು ಮುಂದಾಗಿ ಎಲ್ಲ ಸಹಕಾರ ನೀಡಿದ್ದರು. ಇದರೊಂದಿಗೆ ಮಾಜಿ ಸಂಸದ ಶಿವಕುಮಾರ ಉದಾಸಿ ಅವರು ತಂದೆಯವರ ಸಂಕಲ್ಪವನ್ನು ಸಾಕಾರ ಮಾಡುವಲ್ಲಿ ಪೂರ್ಣ ಸಹಕಾರ ನೀಡಿದ್ದರ ಫಲವಾಗಿ ಇಲ್ಲಿ ರಾಷ್ಟ್ರೋತ್ಥಾನ ಸಂಸ್ಥೆ ಆರಂಭಗೊಂಡಿದೆ. ಇದು ಇಲ್ಲಿ ಸಾರ್ಥಕವಾಗಿ ಸೇವೆ ಸಲ್ಲಿಸಲಿದೆ ಎಂದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ