ಗದಗ: ಸ್ಪರ್ಧಾತ್ಮಕ ಇಂದಿನ ಆಧುನಿಕ ದಿನಮಾನಗಳಲ್ಲಿ ಪಾಲಕ-ಪೋಷಕರು ತಮ್ಮ ಮಕ್ಕಳಿಗೆ ಧರ್ಮದ ಹಾದಿಯಲ್ಲಿ ಮುನ್ನಡೆಸುವ ಮೂಲಕ ಅವರಿಗೆ ಒಳ್ಳೆಯ ಸಂಸ್ಕಾರ ಸನ್ನಡತೆ ರೂಢಿಸಬೇಕು. ಸಂಸ್ಕಾರ-ಸನ್ನಡತೆ ಇಲ್ಲದಿದ್ದರೆ ಶಿಕ್ಷಣಕ್ಕೆ ನೆಲೆ ಬೆಲೆ ಇಲ್ಲ ಎಂದು ಶ್ರೀ ಕ್ಷೇತ್ರ ಪಂಢರಾಪುರದ ಪ್ರಭಾಕರ (ದಾದಾ) ಬೋಧಲೆ ಮಹಾರಾಜರು ಹೇಳಿದರು.
ಯುವಕರು ಕೇವಲ ಮನೆ, ಸಮಾಜಕ್ಕೆ ಮಾತ್ರವಲ್ಲ ದೇಶಕ್ಕೆ ಆಸ್ತಿ. ಇಂತಹ ಯುವ ಜನಾಂಗವನ್ನು ದುಶ್ಚಟಗಳಿಂದ ದೂರವಿರಿಸಿ ಸದೃಢವಾಗಿ ಬೆಳೆಸಬೇಕು. ಯು ಎಂದರೆ ಯುಧಿಷ್ಠಿರನಲ್ಲಿದ್ದಂತಹ ನೀತಿ, ವ ಎಂದರೆ ವಶಿಷ್ಠನಲ್ಲಿದ್ದಂತಹ ಜ್ಞಾನ ಕ ಎಂದರೆ ಗಾನ, ಕೇಳು ಎಂದರ್ಥ. ಇವೆಲ್ಲವೂ ಸಮ್ಮಿಳಿತಗೊಂಡು ‘ಯುವಕ’ ಎಂದು ಅರ್ಥೈಸಬಹುದಾಗಿದೆ ಎಂದು ಹೇಳಿದರು.
ಶಿಕ್ಷಣ ಪಡೆದ ಎಲ್ಲರೂ ಸರ್ಕಾರಿ ಉದ್ಯೋಗ ಪಡೆಯಲಾಗದು, ಅವಕಾಶ ವಂಚಿತರು ಎದೆಗುಂದದೆ ಅಲ್ಪ ಬಂಡವಾಳದೊಂದಿಗೆ ಸ್ವಂತ ಉದ್ಯೋಗ ಆರಂಭಿಸಿ ಹಂತ ಹಂತವಾಗಿ ಅದರಲ್ಲಿ ಹೊಸತನವನ್ನು ಅಳವಡಿಸಿಕೊಂಡು ಸಾಧನೆ ಮಾಡಬೇಕು ಎಂದರು.ಧರ್ಮದ ಸನ್ಮಾರ್ಗದಲ್ಲಿ ಮುನ್ನಡೆಯುವವರಿಗೆ ದೇವರು ಎಂದಿಗೂ ಕೈ ಬಿಡುವುದಿಲ್ಲ, ಅವರಿಗೆ ಭವಿಷ್ಯದಲ್ಲಿ ಫಲ ಪ್ರಾಪ್ತಿಯಾಗುವುದು ನಿಶ್ಚಿತ. ಆದ್ದರಿಂದ ಎಲ್ಲರೂ ಧರ್ಮವಂತರಾಗಿ, ಕಾಯಕ ಮಾಡಿ, ದಾಸೋಹ, ಧರ್ಮ ಕಾರ್ಯ ಮಾಡಿ ಎಂದರು.