ಐತಿಹಾಸಿಕ ಪ್ರಜ್ಞೆಯಿಂದ ಸಂಸ್ಕೃತಿ, ಪರಂಪರೆ ಉಳಿವು: ಡಾ.ವಿಶ್ವನಾಥ

KannadaprabhaNewsNetwork | Published : Jan 26, 2024 1:46 AM

ಸಾರಾಂಶ

ವ್ಯಕ್ತಿ ಐತಿಹಾಸಿಕ ಪ್ರಜ್ಞಾವಂತಿಕೆಯನ್ನು ರೂಢಿಸಿಕೊಂಡಾಗ ಮಾತ್ರವೇ ದೇಶದ ಸಂಸ್ಕೃತಿಯ ಉಳಿವು ಸಾಧ್ಯವಾದೀತು ಎಂದು ಸೊರಬದಲ್ಲಿ ನಡೆದ ಇತಿಹಾಸ ವಿಶೇಷ ಉಪನ್ಯಾಸ ಕಾರ್ಯಾಗಾರದಲ್ಲಿ ಡಾ.ವಿಶ್ವನಾಥ್ ಅಭಿಪ್ರಾಯಪಟ್ಟರು.

ಪಟ್ಟಣದ ಪದವಿ ಕಾಲೇಜಿನಲ್ಲಿ ಇತಿಹಾಸ ವಿಶೇಷ ಉಪನ್ಯಾಸ

ಕನ್ನಡಪ್ರಭ ವಾರ್ತೆ ಸೊರಬ

ವಿದ್ಯಾರ್ಥಿಗಳು ಗತಕಾಲದ ಘಟನಾವಳಿಗಳನ್ನು ಅವಲೋಕನ ಮಾಡುವ ಮೂಲಕ ಐತಿಹಾಸಿಕ ಪ್ರಜ್ಞಾವಂತಿಕೆಯನ್ನು ರೂಢಿಸಿ ಕೊಂಡಾಗ ಮಾತ್ರ ದೇಶದ ಸಂಸ್ಕೃತಿ ಪರಂಪರೆಯ ಉಳಿವು ಸಾಧ್ಯ ವಾಗುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ್ ಹೇಳಿದರು.ಬುಧವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಇತಿಹಾಸ ವಿಶೇಷ ಉಪನ್ಯಾಸ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತಿಹಾಸ ಮತ್ತು ಚರಿತ್ರೆಗಳು ಬೇರೆ ಬೇರೆಯಾಗಿದ್ದು, ಇತಿಹಾಸದಿಂದ ಗತಕಾಲದ ರಾಜವಂಶದ ಆಡಳಿತ ವ್ಯವಸ್ಥೆಯನ್ನು ಅರಿಯಬಹುದು. ಚರಿತ್ರೆಯಿಂದ ವ್ಯಕ್ತಿ ಸಾಧನೆಯ ವೈಖರಿಯನ್ನು ತಿಳಿಯಲು ಸಾಧ್ಯವಾಗುತ್ತದೆ. ಆದ್ದರಿಂದ ಇತಿಹಾಸವನ್ನು ಮರೆಯ ಬಾರದು. ಅದರ ಅಧ್ಯಯನದ ಅಗತ್ಯವಿದೆ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂ ಎಸಿ ಸಂಚಾಲಕ ಡಾ. ಶೋಯಬ್ ಅಹ್ಮದ್ ಮಾತನಾಡಿ, ದೇಶದ ಇತಿಹಾಸದ ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಸಿದ್ದಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಈಶ್ವರ್ ಬಿ.ನಾಯ್ಕ ಉಪನ್ಯಾಸ ನೀಡಿದರು. ಉಪನ್ಯಾಸಕ ರವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕ ಶಂಕರ್ ನಾಯ್ಕ್, ಗ್ರಂಥಪಾಲಕ ಡಾ. ಕಿರಣ್‌ಕುಮಾರ್ ದೊಡ್ಡಮನಿ, ಡಾ. ಮಹೇಶ್ವರಿ, ಡಾ. ಮಧುರ ಯಾದವ್, ಉಪನ್ಯಾಸಕರಾದ ನಾಗರಾಜ್, ಚಂದ್ರಶೇಖರ್ ನಾಯ್ಕ್, ಮಂಜುನಾಥ್, ರಾಜಶೇಖರ ಗೌಡ ಮೊದಲಾದವರು ಉಪಸ್ಥಿತರಿದ್ದರು. ಚಂದನ ಪ್ರಾರ್ಥಿಸಿ, ಮೇಘನಾ ಸ್ವಾಗತಿಸಿ, ರವೀನಾ ವ್ಯಕ್ತಿ ಪರಿಚಯಿಸಿದರು. ಪೂಜಾ ವಂದಿಸಿ, ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು.೨೫ಕೆಪಿಸೊರಬ-೦೨: ಸೊರಬ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಇತಿಹಾಸ ವಿಶೇಷ ಉಪನ್ಯಾಸ ಕಾರ್ಯಾಗಾರಕ್ಕೆ ಪ್ರಾಂಶುಪಾಲ ಡಾ.ವಿಶ್ವನಾಥ್ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.

Share this article