ಧಾರ್ಮಿಕ ಆಚರಣೆಯಿಂದ ಸಂಸ್ಕೃತಿ ಮತ್ತಷ್ಟು ಭದ್ರ

KannadaprabhaNewsNetwork | Published : Jan 3, 2024 1:45 AM

ಸಾರಾಂಶ

ಹೂವಿನಿಂದ ವಿಶೇಷವಾಗಿ ಅಲಂಕೃತಗೊಂಡ ಅಯ್ಯಪ್ಪ ಸ್ವಾಮಿ ಮೂರ್ತಿ ಎದುರು ೬೫೦ ಮಾಲಾಧಾರಿಗಳು ಪೂಜೆ, ಭಜನೆ, ದೀಪಾರಾಧನೆ ನಡೆಸಿದರು

ಹಗರಿಬೊಮ್ಮನಹಳ್ಳಿ: ಧಾರ್ಮಿಕ ಆಚರಣೆಗಳು ದೇಶದ ಸಂಸ್ಕೃತಿಯನ್ನು ಗಟ್ಟಿಗೊಳಿಸಿವೆ ಎಂದು ಕೆಎಂಎಫ್ ಅಧ್ಯಕ್ಷ ಎಸ್. ಭೀಮನಾಯ್ಕ ತಿಳಿಸಿದರು.

ಪಟ್ಟಣದಲ್ಲಿನ ತಮ್ಮ ಕಚೇರಿಯಲ್ಲಿ ನಡೆದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಂದ ನಡೆದ ಮಂಡಲ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾಲೆ ಧರಿಸುವುದರಿಂದ ಶ್ರದ್ಧೆ, ಸಾತ್ವಿಕ ಗುಣಗಳು ಬಲಗೊಳ್ಳುತ್ತವೆ. ಆತ್ಮಶುದ್ಧಿ ಮತ್ತು ನಿರೀಕ್ಷಿತ ಫಲ ಪಡೆಯಲು ಮಾಲಾಧಾರಿಗಳ ವ್ರತಾಚರಣೆ ಶ್ರೇಷ್ಠವಾಗಿದೆ. ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ವ್ರತ ಕಠಿಣವಾಗಿದ್ದರೂ ಪಾಲಿಸುತ್ತಾ, ಏಕಾಗ್ರತೆ ಸಾಧಿಸುತ್ತಾರೆ ಎಂದರು.

ಮಾಲಾಧಾರಿ ಅಶೋಕ ಬೀಮನಾಯ್ಕ ಮಾತನಾಡಿ, ಅಯ್ಯಪ್ಪಸ್ವಾಮಿ ವ್ರತದಿಂದ ಮನಸ್ಸು ಸಂತೃಪ್ತಿಯಿಂದ ಇರುತ್ತದೆ. ಲೋಕಕಲ್ಯಾಣಕ್ಕಾಗಿ ಮನೆಯಲ್ಲಿ ಪೂಜೆಯನ್ನು ವಿಶೇಷವಾಗಿ ಮಾಡಲಾಗಿದೆ. ರೈತರ ಬದುಕು ಹಸನಾಗಲಿ, ಬೆಳೆಗಳು ಸಮೃದ್ಧಿಯಿಂದ ಬರಲಿ ಎಂದು ಆಶಿಸಿದರು.

ಹೂವಿನಿಂದ ವಿಶೇಷವಾಗಿ ಅಲಂಕೃತಗೊಂಡ ಅಯ್ಯಪ್ಪ ಸ್ವಾಮಿ ಮೂರ್ತಿ ಎದುರು ೬೫೦ ಮಾಲಾಧಾರಿಗಳು ಪೂಜೆ, ಭಜನೆ, ದೀಪಾರಾಧನೆ ನಡೆಸಿದರು. ಇದಕ್ಕೂ ಮುನ್ನ ನಂಬೋದರ ಸ್ವಾಮಿ ನೇತೃತ್ವದಲ್ಲಿ ಅಯ್ಯಪ್ಪ ಸ್ವಾಮಿ ಸಾಮೂಹಿಕ ಪೂಜೆ ನೆರವೇರಿತು. ಪೂಜೆ ಹಿನ್ನೆಲೆಯಲ್ಲಿ ಸಿದ್ಧಪಡಿಸಲಾಗಿದ್ದ ಅಯ್ಯಪ್ಪ ಸ್ವಾಮಿ ಮಂಟಪ ಗಮನಸೆಳೆಯಿತು.

ಇದೇ ವೇಳೆ ನಂಬೂದರಿ ಸ್ವಾಮೀಜಿ, ಶಿವಮೂರ್ತಿ ಸ್ವಾಮಿ, ಅಂಜಿನಪ್ಪ ಸ್ವಾಮಿ ಇವರು ಶಬರಿಮಲೆ ಅಯ್ಯಪ್ಪ ಸ್ವಾಮಿಯ ಅಷ್ಟೋತ್ತರ, ಭಜನೆ ಹಾಡುಗಳ ಪುಸ್ತಕ ಬಿಡುಗಡೆಗೊಳಿಸಿದರು. ಅಯ್ಯಪ್ಪ ಸ್ವಾಮಿ ಟ್ರಸ್ಟ್‌ನ ಅಧ್ಯಕ್ಷ ಸತೀಶ್, ಭರಮಪ್ಪ, ಪ್ರಕಾಶ್, ಕೂಡ್ಲಿಗಿ ಭರಮಪ್ಪ, ಶಶಿಧರ ಸೇರಿ ಹೂವಿನಹಡಗಲಿ, ಕೊಟ್ಟೂರು, ಹೊಸಪೇಟೆ, ಮರಿಯಮ್ಮನಹಳ್ಳಿ, ಕೂಡ್ಲಿಗಿ ಸೇರಿ ವಿವಿಧ ತಾಲೂಕುಗಳಿಂದ ಮಾಲಾಧಾರಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಮಹಿಳಾ ಒಕ್ಕೂಟದ ಅಧ್ಯಕ್ಷೆ ಗೀತಾಬಾಯಿ ಭೀಮನಾಯ್ಕ, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಸಾಹಿರಾಬಾನು, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ದಾರುಕೇಶ, ನಿರ್ದೇಶಕ ಐಗೋಳ್ ಚಿದಾನಂದ, ಜಿಪಂ ಮಾಜಿ ಸದಸ್ಯರಾದ ಅಕ್ಕಿತೋಟೇಶ್, ಹೆಗ್ಡಾಳ್ ರಾಮಣ್ಣ, ಎಚ್. ಭೀಮಪ್ಪ, ತಾಪಂ ಮಾಜಿ ಸದಸ್ಯ ಚಿಂತ್ರಪಳ್ಳಿ ದೇವೇಂದ್ರಪ್ಪ, ರೈತರ ಬ್ಯಾಂಕ್ ಮಾಜಿ ಅಧ್ಯಕ್ಷ ಹುಡೇದ್ ಗುರುಬಸವರಾಜ, ಪುರಸಭೆ ಸದಸ್ಯ ಮೇಗಳಮನಿ ಮರಿರಾಮಪ್ಪ, ನೆಲ್ಕುದ್ರಿ ಚಂದ್ರಪ್ಪ, ಪವಾಡಿ ಹನುಮಂತಪ್ಪ, ಹೆಗ್ಡಾಳ್ ಪರಶುರಾಮ, ತುರಾಯಿನಾಯ್ಕ ಇತರರಿದ್ದರು.

Share this article