ಕನ್ನಡಪ್ರಭ ವಾರ್ತೆ, ಯಳಂದೂರು
ಯಳಂದೂರು-ಗುಂಡ್ಲುಪೇಟೆ ರಾಜ್ಯ ಹೆದ್ದಾರಿ ೮೧ ರಲ್ಲಿ ಆಯ್ದ ಭಾಗಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, ಇಲ್ಲಿನ ರಾಘವೇಂದ್ರ ಥಿಯೇಟರ್ ಬಳಿ ನಡೆಯುತ್ತಿರುವ ಬಾಕ್ಸ್ ಕಲ್ವರ್ಟ್ (ಕಿರು ಸೇತುವೆ) ಕಾಮಗಾರಿ ಕ್ರಿಯಾಯೋಜನೆಯಂತೆ ನಡೆದಿದೆ. ಕಾಮಗಾರಿ ಉತ್ತಮ ಗುಣಮಟ್ಟದಿಂದ ಕೂಡಿದೆ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಪುರುಷೋತ್ತಮ್ ಮಾಹಿತಿ ನೀಡಿದರು.ಪಟ್ಟಣದಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಗುರುವಾರ ತಂಡದೊಂದಿಗೆ ಭೇಟಿ ನೀಡಿ ಮಾತನಾಡಿದರು. ಕೆಲವರು ಕಾಮಗಾರಿಯ ಗುಣಮಟ್ಟದ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಅನುಮಾನ ವ್ಯಕ್ತಪಡಿಸಿದ್ದರು. ಹಾಗಾಗಿ ನಾವು ಸ್ಥಳ ಪರಿಶೀಲನೆ ನಡೆಸಿದ್ದೇವೆ. ಸದರಿ ಕಾಮಗಾರಿಯನ್ನು ಕೂಲಂಕುಶವಾಗಿ ತಪಾಸಣೆ ನಡೆಸಲಾಗಿದೆ. ಗುಣಮಟ್ಟವನ್ನು ಕಾಪಾಡಲು ಸರ್ಕಾರದಿಂದ ನಿಯೋಜನೆಗೊಂಡಿರುವ ಕಾಡ್ ಸ್ಟೇಷನ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್‌ನ ತಜ್ಞರ ತಂಡ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಗುಣಮಟ್ಟ ಪರಿಶೀಲನೆ ನಡೆಸಿದೆ.
ಗುಣಮಟ್ಟದ ಖಾತರಿಯನ್ನು ತಿಳಿಸಿದ ನಂತರ ಗುತ್ತಿಗೆದಾರರು ಕಾಮಗಾರಿಯನ್ನು ನಿರ್ವಹಿಸಿದ್ದಾರೆ. ಇಲ್ಲಿಗೆ ಬಳಸಲಾಗಿರುವ ಕಬ್ಬಿಣವೂ ಕೂಡ ಕ್ರಿಯಾ ಯೋಜನೆಯಂತೆ ಹಾಕಲಾಗಿದೆ. ಹೀಗಾಗಿ ಈ ಕಲ್ವರ್ಟ್ ಕಾಮಗಾರಿ ಉತ್ತಮವಾಗಿದ್ದು ಇಲ್ಲಿ ಯಾವುದೇ ಲೋಪವಾಗಿಲ್ಲ. ಕಾಮಗಾರಿ ಉತ್ತಮವಾಗಿ ನಡೆಯುತ್ತಿದೆ. ಹಲವು ವರ್ಷಗಳಿಂದ ಈ ರಸ್ತೆ ನೆನೆಗುದಿಗೆ ಬಿದ್ದಿತ್ತು. ೨ ಕಿ.ಮಿ. ವರೆಗಿನ ರಸ್ತೆ ಕಾಮಗಾರಿಯು ೭ ಕೋಟಿ ರು. ವೆಚ್ಚದಲ್ಲಿ ನಡೆಯುತ್ತಿದೆ. ಈಗಾಗಲೇ ವೈ.ಕೆ.ಮೋಳೆ ಗ್ರಾಮದಲ್ಲಿ ಚರಂಡಿ ರಸ್ತೆ ನಿರ್ಮಾಣವಾಗಿ, ಡಾಂಬಾರು ಕೂಡ ಹಾಕಲಾಗಿದೆ.ಈಗ ಇಲ್ಲಿ ಕಬಿನಿ ಕಾಲುವೆ ನೀರು ಹರಿದು ಹೋಗುವ ಕಿರು ಸೇತುವೆ ಕಾಮಗಾರಿ ನಡೆಯುತ್ತಿದ್ದು. ಇದು ಪೂರ್ಣಗೊಂಡ ನಂತರ ಈ ರಸ್ತೆಯನ್ನು ಪಟ್ಟಣದ ಬಳೇಪೇಟೆ ತನಕ ನಡೆಸಲಾಗುವುದು. ಸಂಬಂಧಪಟ್ಟ ಗುತ್ತಿಗೆದಾರ ಇದನ್ನು ಉತ್ತಮ ಗುಣಮಟ್ಟದಿಂದ ಕೆಲಸವನ್ನು ಮಾಡುತ್ತಿದ್ದಾರೆ. ಶೀಘ್ರದಲ್ಲೇ ಈ ಕಾಮಗಾರಿ ಪೂರ್ಣಗೊಳ್ಳಲಿದ್ದು ಸಾರ್ವಜನಿಕರಿಗೆ ಈ ರಸ್ತೆ ಮುಕ್ತವಾಗಲಿದೆ ಎಂದು ಮಾಹಿತಿ ನೀಡಿದರು.ಜೆಇ ಸುರೇಂದ್ರ, ಜಯಶ್ರೀ, ಕಾಡ್ ಸ್ಟೇಷನ್ ಟೆಕ್ನಾಲಜಿಸ್‌ನ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ನಂದನ್, ವಿಕ್ರಮ್ ಮುಖಂಡರಾದ ವೈ.ಕೆ.ಮೋಳೆ ನಾಗರಾಜು, ನಂಜುಂಡಸ್ವಾಮಿ, ಪ್ರಸಾದ್, ವಿಜಯ್ ಸೇರಿದಂತೆ ಅನೇಕರು ಇದ್ದರು.