ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರಸ್ತುತ ಜನಪದ ಕಲೆಗಳು ಮಾಯವಾಗುತ್ತಿವೆ. ಇಂತಹ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಲ್ಲಿ ಜನಪದ ಕಲೆಗಳನ್ನು ಬೆಳೆಸುವ ಕೆಲಸವಾಗಬೇಕು ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಕಾವ್ಯಶ್ರೀ ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪೊಲೀಸ್ ಕಾಲೋನಿಯಲ್ಲಿರುವ ಮೆಟ್ರಿಕ್ ಪದವಿ ಪೂರ್ವ ಬಾಲಕರ ವಸತಿ ನಿಲಯದ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪಯೋಜನೆಯ ಕಲಾ ತರಬೇತಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಹಾಸ್ಟೆಲ್‌ಗಳು ಎಂದರೆ ಊಟ, ವಸತಿ ಎರಡೇ ನಮಗೆ ನೆನಪಾಗುವುದು. ಅದನ್ನು ಮೀರಿ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆ ಶ್ರಮಿಸುತ್ತಿದೆ. ಕಲಿಯುವ ಹಂತದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೆ ಲವಲವಿಕೆಯಿಂದ ಕಲಿಯಿರಿ. ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂದೀಶ್ ಮಾತನಾಡಿ, ವಿದ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕ ಕಲೆಗಳ ಅಭ್ಯಾಸವೂ ಮುಖ್ಯ. ಯಾವುದೇ ಕಲೆಯನ್ನು ಬಲವಂತದಿಂದ ಅಭ್ಯಸಿಸಲು ಸಾಧ್ಯವಿಲ್ಲ, ಆದ್ದರಿಂದ ಕಲೆಯನ್ನು ಪ್ರೀತಿಸಿ ಎಂದು ಹೇಳಿದರು.
ಪರಿಶಿಷ್ಟ ಪಂಗಡ ಉಪಯೋಜನೆಯಡಿ ವಾರದಲ್ಲಿ ಮೂರು ದಿನಗಳ ಕಾಲ ದಿನಕ್ಕೆ ೨ ಗಂಟೆಗಳಂತೆ ಕಲೆಗಳನ್ನು ಗುರುಗಳ ಮೂಲಕ ೬ ತಿಂಗಳ ಕಾಲ ಹೇಳಿಕೊಡಲಾಗುವುದು ಎಂದರು.ಕಲಾವಿದ ಎಂ.ಎನ್.ಶ್ರೀಧರ್ ಮಾತನಾಡಿ, ನನ್ನ ಅನೇಕ ಸ್ನೇಹಿತರು ಸಮಾಜದ ಮುಖ್ಯವಾಹಿನಿಗಳಲ್ಲಿ ಕಲಾವಿದರಾಗಿದ್ದಾರೆ. ಆಸಕ್ತಿ ವಹಿಸಿ ಕಲಿತಾಗ ಮಾತ್ರ ಕಲೆ ನಮಗೆ ಒಲಿಯುತ್ತದೆ. ಕೇವಲ ಒಂದೇ ವಿಧದ ಸಂಗೀತಕ್ಕೆ ನಿಮ್ಮ ಧ್ವನಿಯನ್ನು ಒಗ್ಗಿಸಿಕೊಳ್ಳಬೇಡಿ, ವಿವಿಧ ವಿಧದ ಸಂಗೀತವನ್ನು ಅಭ್ಯಾಸ ಮಾಡಿಕೊಳ್ಳಿ ಎಂದು ತಿಳಿಸಿದರು.
ಎಲ್ಲ ಬಗೆಯ ಸಂಗೀತಗಳಿಗೆ ಮೂಲ ಜನಪದ ಸಂಗೀತ, ಇದರಿಂದ ಇಂದು ಅನೇಕ ಸಂಗೀತ ಸ್ವರಗಳು ಉದ್ಭವಿಸಿವೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಸತಿ ನಿಲಯದ ಮೇಲ್ವಿಚಾರಕಿಯರಾದ ಟಿ.ಜಿ ಜ್ಯೋತಿ, ವೈ.ಡಿ.ನಿರ್ಮಲಾ, ಲತಾ, ಸುಗಮ ಸಂಗೀತ ಗಾಯಕಿ ಸರ್ವಮಂಗಳ, ತಮಟೆ ವಾದಕರಾದ ಟಿ.ಕೆ.ರಾಜಶೇಖರ್, ಸೋಮು ಆನಂದ್, ದೇವರಾಜ್ ಇತರರಿದ್ದರು.