ಇ-ಕೆವೈಸಿ ನೋಂದಣಿಗೆ ತುಂಗಭದ್ರಾ ಗ್ಯಾಸ್ ಏಜೆನ್ಸಿಗೆ ಗ್ರಾಹಕರ ಲಗ್ಗೆ

KannadaprabhaNewsNetwork | Published : Dec 31, 2023 1:30 AM

ಸಾರಾಂಶ

ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದ ವದಂತಿಯಿಂದಾಗಿ ರಾಜ್ಯದ ವಿವಿಧೆಡೆ ಅಡುಗೆ ಅನಿಲ ಸಂಪರ್ಕ ಗ್ರಾಹಕರಿಗೆ ಇ-ಕೆವೈಸಿ ಎಂಬುದು ತಲೆನೋವಾಗಿ ಪರಿಣಮಿಸಿದೆ. ಕೋಲಾರ, ಬೆಂಗಳೂರು, ಶಿವಮೊಗ್ಗ, ಮಂಗಳೂರು ಬಳಿಕ ಹೊಳೆಹೊನ್ನೂರಲ್ಲೂ ಈಗ ಇ-ಕೆವೈಸಿಗಾಗಿ ಜನರು ಮುಂಜಾನೆಯ ಸವಿನಿದ್ದೆ ಬಿಟ್ಟು ಗ್ಯಾಸ್‌ ಏಜೆನ್ಸಿಗಳತ್ತ ದೌಡಾಯಿಸುವಂತಾಗಿದೆ.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಪಟ್ಟಣದ ತುಂಗಭದ್ರಾ ಗ್ಯಾಸ್ ಏಜೆನ್ಸಿ ಎದುರು ಅಡುಗೆ ಅನಿಲ ಗ್ರಾಹಕರು ಕಳೆದ ಮೂರು ದಿನಗಳಿಂದ ಸಾಲುಗಟ್ಟಿ ನಿಂತು ಇ-ಕೆವೈಸಿ ಮಾಡಿಸುತ್ತಿದ್ದಾರೆ. ವದಂತಿಗಳಿಂದಾಗಿ ಜನರಲ್ಲಿ ಈ ನಡೆ ಕಂಡುಬಂದಿದ್ದು, ಏಜೆನ್ಸಿ ಸಿಬ್ಬಂದಿ ಕಂಗಾಲಾಗಿದ್ದಾರೆ.

ಗೃಹ ಬಳಕೆ ಅನಿಲ ಸಂಪರ್ಕ ಹೊಂದಿರುವವರು ತಮ್ಮ ಆಧಾರ್ ಬಯೋಮೆಟ್ರಿಕ್ ನೀಡಿ, ಕೆವೈಸಿ ಮಾಡಿಸಿಕೊಳ್ಳಲು ಸರಕಾರ ತಿಳಿಸಿಲ್ಲ, ಯಾವುದೇ ಕೊನೆಯ ದಿನಾಂಕ ನಿಗದಿಪಡಿಸಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಕೆಲವರು ಇ-ಕೆವೈಸಿ ಮಾಡಿಲು ಡಿ.31 ಕೊನೆ ದಿನ ಎಂದು ತಪ್ಪು ಮಾಹಿತಿ ಅಥವಾ ಸುಳ್ಳು ಸಂದೇಶ ಹರಿಬಿಟ್ಟಿದ್ದಾರೆ. ಇದು ಎಲ್ಲೆಡೆ ವೈರಲ್ ಆಗಿದ್ದು, ಈಗ ಗ್ರಾಹಕರು ಗ್ಯಾಸ್ ಏಜೆನ್ಸಿಗಳ ಮುಂದೆ ಮುಗಿಬಿದ್ದಿದ್ದಾರೆ. ಮುಂಜಾನೆ 5 ಗಂಟೆಯಿಂದ ಚಳಿಯನ್ನೂ ಲೆಕ್ಕಿಸದೇ ತಿಂಡಿ, ಊಟ, ಕೆಲಸ ಬಿಟ್ಟು ಸರತಿ ಸಾಲುಗಟ್ಟಿ ನಿಂತು ಕೆವೈಸಿ ನೋಂದಣಿ ಮಾಡಿಸುತ್ತಿದ್ದಾರೆ.

ಜನರ ಈ ನಡೆ ಕಂಡ ಸ್ಥಳೀಯ ಮುಖಂಡರಾದ ಎಂ.ಹರೀಶಕುಮಾರ್ ಮತ್ತು ಆರ್.ಉಮೇಶ್ ಅವರು ಜಿಲ್ಲಾಧಿಕಾರಿ, ಆಹಾರ ನಿರೀಕ್ಷಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಗ್ರಾಹಕರು ಅವಸರಪಡುವ ಅಗತ್ಯ ಇಲ್ಲ. ತಡವಾಗಿ ಕೆವೈಸಿ ಮಾಡಿಸಬಹುದು ಎಂದು ಮೈಕ್ ಮೂಲಕ ಸಾರಿ ಹೇಳಿದ್ದಾರೆ. ಆದರೂ ಸಾಲುಗಟ್ಟಿ ನಿಂತವರು ಇದಾವುದನ್ನೂ ಲೆಕ್ಕಿಸದೇ ಸಂಜೆವರೆಗೂ ಸಾಲಿನಲ್ಲಿ ತೆರಳಿ ಕೆವೈಸಿ ಮಾಡಿಸಿಕೊಂಡರು.

ಗಡುವು ನಿಗದಿ ಮಾಡಿಲ್ಲ:

ಗೃಹಬಳಕೆ ಅನಿಲ ಸಂಪರ್ಕ ಹೊಂದಿದ ಗ್ರಾಹಕರು ಇ-ಕೆವೈಸಿ ಮಾಡಿಸಲು ಯಾವುದೇ ಗಡುವು ನೀಡಿ, ಸರ್ಕಾರ ಯಾವುದೇ ಅದೇಶ ನೀಡಿಲ್ಲ. ಆದರೆ, ಜನರು ಗಾಳಿ ಸುದ್ದಿಯಿಂದ ಗ್ಯಾಸ್ ಏಜೆನ್ಸಿ ಮುಂದೆ ನಿಂತಿರುವುದು ಸರಿಯಲ್ಲ ಎಂದು ಭದ್ರಾವತಿಯ ಗ್ರಾಮಾಂತರ ಆಹಾರ ನಿರೀಕ್ಷಕರಾದ ಜಾನಕಿ ತಿಳಿಸಿದ್ದಾರೆ.

ಕಠಿಣ ಕ್ರಮಕ್ಕೆ ಆಗ್ರಹ: ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವೈರಲ್ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ಥಳೀಯ ಜೆಡಿಎಸ್ ಮುಖಂಡ ಎಂ.ಹರೀಶ್‍ಕುಮಾರ್ ಆಗ್ರಹಿಸಿದರು.

- - -

ಕೋಟ್‌ ಉಜ್ವಲ ಯೋಜನೆಯಡಿ ಗೃಹಬಳಕೆ ಅನಿಲ ಸಂಪರ್ಕ ಪಡೆದ ಗ್ರಾಹಕರು ಮಾತ್ರ ಡಿ.31ರೊಳಗೆ ಇ-ಕೆವೈಸಿ ಮಾಡಿಸಬೇಕು. ಉಳಿದವರು ತಡವಾಗಿ ಮಾಡಿಕೊಳ್ಳಬಹುದು. ಸಾರ್ವಜನಿಕರು ಇಂತಹ ವದಂತಿ ನಂಬಿ ಅನಗತ್ಯ ಗೊಂದಲಕ್ಕೆ ಒಳಗಾಗಬಾರದು. ಗ್ರಾಹಕರು ತಮ್ಮ ಬಿಡುವಿನ ವೇಳೆಯಲ್ಲಿ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಆಧಾರ್ ಬಯೋಮೆಟ್ರಿಕ್ ನೀಡಿ ಸಹಕರಿಸಬೇಕು

- ಡಿ.ಆಂಜನೇಯ, ಮಾಲೀಕ, ತುಂಗಭದ್ರಾ ಗ್ಯಾಸ್ ಏಜೆನ್ಸಿ

- - -

-29ಎಚ್‍ಎಚ್‍ಆರ್4:

ಹೊಳೆಹೊನ್ನೂರಿನ ತುಂಗಭದ್ರಾ ಗ್ಯಾಸ್ ಏಜೆನ್ಸಿ ಎದುರು ಇ-ಕೆವೈಸಿ ಮಾಡಿಸಲು ಗ್ರಾಹಕರು ಸರತಿ ಸಾಲಿನಲ್ಲಿ ನಿಂತಿರುವುದು.

Share this article