ಕನ್ನಡಪ್ರಭ ವಾರ್ತೆ ಬ್ಯಾಡಗಿ
ಸರ್ಕಾರದ ಎಲ್ಲ ಯೋಜನೆಗಳು ಸಾರ್ವಜನಿಕರ ಮನೆಬಾಗಿಲಿಗೆ ಸೇರಿದಂತೆ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸಬೇಕು. ಕಚೇರಿ ಅಲೆದಾಟ ತಪ್ಪಿಸುವ ಮಹತ್ವಾಕಾಂಕ್ಷೆ ಉದ್ದೇಶದಿಂದ ಜನತಾದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನಮೂರ್ತಿ ತಿಳಿಸಿದರು.ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬ್ಯಾಂಕ್ ಮತ್ತು ಮೈಕ್ರೋ ಫೈನಾನ್ಸ್‌ಗಳಿಗೆ ಕಡಿವಾಣ ಹಾಕಿ:ಬರಗಾಲವೆಂದು ಘೋಷಣೆ ಆದಾಗ್ಯೂ ಕೂಡ ಕೆಲ ಬ್ಯಾಂಕ್ ಹಾಗೂ ಖಾಸಗಿ ಫೈನಾನ್ಸ್‌ಗಳ ವ್ಯವಸ್ಥಾಪಕರು ರೈತರಿಗೆ ನೋಟಿಸ್ ಜಾರಿ ಮಾಡುವುದು, ಸಿಬ್ಬಂದಿಯನ್ನು ಕಳುಹಿಸುವ ಮೂಲಕ ಹಣ ವಸೂಲಿಗಿಳಿದಿದ್ದಾರೆ ಕೂಡಲೇ ಇದನ್ನು ತಪ್ಪಿಸುವಂತೆ ಆಗ್ರಹಿಸಿದರು. ಕೈ ಮುಗಿತೀವಿ ಕರೆಂಟ್ ಕೊಡ್ರಿ:ರೈತರು ಬರಗಾಲದಲ್ಲಿ ಸಿಲುಕಿ ಸಂಕಷ್ಟದಲ್ಲಿ ಮುಳುಗಿದ್ದಾರೆ. ಆದರೆ ಕೊಳವೆ ಬಾವಿ ನಂಬಿ ಬೀಜ ಬಿತ್ತಿದ ರೈತರ ಬೆಳೆ ಸಂಪೂರ್ಣವಾಗಿ ಕೈಗೆ ಸಿಕ್ಕಿಲ್ಲ, ಹೆಸ್ಕಾಂ ಅಧಿಕಾರಿಗಳು ಎರಡ್ಮೂರು ತಾಸು ವಿದ್ಯುತ್ ಪೂರೈಸುವ ಮೂಲಕ ರೈತರ ಬೆಳೆಹಾನಿಗೆ ಕಾರಣರಾಗಿದ್ದಾರೆ. ಕೈ ಮುಗಿತೀವಿ ಹಗಲು ರಾತ್ರಿ 7 ತಾಸು ತ್ರಿಫೇಸ್ ಕರೆಂಟ್ ಕೊಡ್ರಿ ಎಂದು ಮನವಿ ಮಾಡಿದರು.ಸರ್ಕಾರ ₹369 ಕೋಟಿ ಖರ್ಚು ಮಾಡಿ ಆಣೂರು, ಬುಡಪನಹಳ್ಳಿ ಕೆರೆ ನೀರು ತುಂಬಿಸುವ ಯೋಜನೆ ಆರಂಭಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಕೆರೆ ತುಂಬಿಸಲು ಯೋಜನೆ ಕಾರ್ಯಗತಗೊಳಿಸುವಂತೆ ಆಗ್ರಹಿಸಿದರು.ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸಭೆಯಲ್ಲಿದ್ದ ಹೆಸ್ಕಾಂ, ನೀರಾವರಿ, ಬೆಳೆವಿಮೆ ಅಧಿಕಾರಿಗಳನ್ನು ಕರೆಸಿ ಚರ್ಚಿಸಿದರು. ಅಲ್ಲದೇ ತಮ್ಮ ಸಮಸ್ಯೆಗಳಿಗೆ ಪರಿಹರಿಸಲು ಸ್ವಲ್ಪ ಸಮಯಬೇಕಿದೆ. ಮಧ್ಯಂತರ ಪರಿಹಾರವನ್ನು ರಾಜ್ಯದಲ್ಲಿಯೇ ಹಾವೇರಿ ಜಿಲ್ಲೆಯಲ್ಲಿ ಮೊದಲ ಬಾರಿ ನೀಡಲಾಗುತ್ತಿದೆ. ಇದಕ್ಕೆ ಸಾಕಷ್ಟು ತಾಂತ್ರಿಕ ದೋಷಗಳಿದ್ದು ಇದಕ್ಕೆಲ್ಲಾ ಸಮಯದ ಅವಶ್ಯಕತೆಯಿದ್ದು, ಎಲ್ಲವನ್ನೂ ಪರಿಹರಿಸೋಣ ಎಂದರು.
ಜಿಲ್ಲೆಯಲ್ಲಿ ಬರಗಾಲ ತಾಂಡವವಾಡುತ್ತಿದೆ, ಸಾರ್ವಜನಿಕರು ತೊಂದರೆಯಲ್ಲಿದ್ದಾರೆ. ಜಿಲ್ಲಾಮಟ್ಟದ ಅಧಿಕಾರಿಗಳು ಕಚೇರಿ ಬಿಟ್ಟು ಹೊರ ಬಂದು ಶಾಲೆ, ಆಸ್ಪತ್ರೆ, ವಸತಿ ಶಾಲೆಗಳಗೆ ಖುದ್ದಾಗಿ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ, ಪ್ರಾಮಾಣಿಕ ವರದಿ ಸಲ್ಲಿಸಬೇಕು, ಇಲ್ಲದಿದ್ದಲ್ಲಿ ಕಠಿಣ ಕ್ರಮ ಎದುರಿಸಲು ಸಜ್ಜಾಗಬೇಕು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದರು.ಒಟ್ಟು 179 ಅರ್ಜಿ ಸಲ್ಲಿಕೆ:
ಜನತಾ ದರ್ಶನದಲ್ಲಿ ಒಟ್ಟು 179 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 125 ಅರ್ಜಿಗಳು ಬೆಳೆಹಾನಿಗೆ ಸಂಬಂಧಿಸಿವೆ. ಇನ್ನುಳಿದಂತೆ ಸರ್ವೇ, ದಾರಿ ಸಮಸ್ಯೆ, ಆಧಾರ್ ಸಮಸ್ಯೆ, ಪಡಿತರ, ಗೃಹಲಕ್ಷ್ಮಿ ಯೋಜನೆ ವಿವಿಧ ಬೇಡಿಕೆಗಳ ಅರ್ಜಿಗಳಿವೆ. ಇವುಗಳಲ್ಲಿ 18 ವಿವಿಧ ಅರ್ಜಿಗಳು ಸ್ಥಳದಲ್ಲಿ ಇತ್ಯರ್ಥಗೊಂಡಿವೆ.ಈ ವೇಳೆ ಜಿಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಅಕ್ಷಯ ಶ್ರೀಧರ, ವರಿಷ್ಠಾಧಿಕಾರಿ ಡಾ. ಶಿವಕುಮಾರ ಗುರಾಣೆ, ಉಪ ವಿಭಾಗಾಧಿಕಾರಿ ವೀರಮಲ್ಲಪ್ಪ ಪೂಜಾರ, ಡಾ. ಚನ್ನಪ್ಪ ಪೂಜಾರ, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಡಾ. ನಾಗರಾಜ, ಉಪಕಾರ್ಯದರ್ಶಿ ಎಸ್.ಬಿ. ಮಳ್ಳಳ್ಳಿ, ತಹಸೀಲ್ದಾರ ಎಸ್.ಎ. ಪ್ರಸಾದ, ತಾಪಂ ಇಒ ಕೆ.ಎಂ. ಮಲ್ಲಿಕಾರ್ಜುನ, ಮುಖ್ಯಾಧಿಕಾರಿ ವಿನಯಕುಮಾರ ಇದ್ದರು.
18 ಅರ್ಜಿಗೆ ಸ್ಥಳದಲ್ಲೇ ಪರಿಹಾರ:ಗೃಹಲಕ್ಷ್ಮಿ ಯೋಜನೆಯಡಿ ಹಣ ಜಮಾ ಆಗಿಲ್ಲ, ವೃದ್ಧಾಪ್ಯ ವೇತನ ಜಾರಿ, ಬ್ಯಾಂಕ್‌ಗಳಲ್ಲಿ ಸಾಲ ನೀಡುತ್ತಿಲ್ಲ, ಬಿದ್ದ ಮನೆಗಳಿಗೆ ಬಾಕಿ ಹಣ ನೀಡಿಲ್ಲ ಎಂದು ನೂರಾರು ಜನರು ಜನತಾದರ್ಶನದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ನೋವನ್ನು ತೋಡಿಕೊಂಡರು. 18 ಅರ್ಜಿಗಳನ್ನು ಸ್ಥಳದಲ್ಲಿಯೇ ಜಿಲ್ಲಾಧಿಕಾರಿಗಳು ಇತ್ಯರ್ಥಪಡಿಸಿದರೇ ಇನ್ನೂ ಕೆಲ ಸಮಸ್ಯೆಗಳನ್ನು ಶೀಘ್ರದಲ್ಲಿಯೇ ಪರಿಹರಿಸುವುದಾಗಿ ಭರವಸೆ ನೀಡಿದರು.