ಅಕ್ರಮ ಪಂಪ್‌ಸೆಟ್‌ಗಳ ವಿದ್ಯುತ್ ಕಡಿತಗೊಳಿಸಿ: ಜಿಲ್ಲಾಧಿಕಾರಿ ಡಾ.ವೆಂಕಟೇಶ

KannadaprabhaNewsNetwork | Published : Feb 18, 2024 1:37 AM

ಸಾರಾಂಶ

ತೀವ್ರ ಬರ ಹಿನ್ನೆಲೆಯಲ್ಲಿ ಭದ್ರಾ ಜಲಾಶಯದಲ್ಲಿ ನೀರು ಸಂಗ್ರಹ ಕಡಿಮೆಯಾಗಿದ್ದು, ಬೇಸಿಗೆ ಹಂಗಾಮಿನಲ್ಲಿ ಅರೆ ನೀರಾವರಿ ಬೆಳೆಗಳಿಗೆ ಫೆ.28ರವರೆಗೆ ನೀರು ಹರಿಸಲು ತೀರ್ಮಾನಿಸಿದ್ದು, ಬಲ ದಂಡೆ ಕಾಲುವೆ ಮೂಲಕ ಹರಿಯುವ ನೀರು ಅಚ್ಚುಕಟ್ಟಿನ ಕೊನೆಯ ಭಾಗಕ್ಕೂ ನೀರು ತಲುಪಿಸಲು ಉಸ್ತುವಾರಿ ತಂಡಗಳ ರಚಿಸಿ, ಬಿಗಿ ಕ್ರಮ ಕೈಗೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ಅಣೆಕಟ್ಟೆಯಿಂದ ಭದ್ರಾ ಬಲದಂಡೆ ನಾಲೆಗೆ ಫೆ.16ರಿಂದ ಫೆ.28ರವರೆಗೆ ಒಟ್ಟು 13 ದಿನ ನೀರು ಹರಿಸುತ್ತಿದ್ದು, ನಾಲೆಯಲ್ಲಿ 13 ಅಡಿ ಬರುವಲ್ಲಿ ಕೇವಲ 10 ಅಡಿ ನೀರು ಹರಿಯುತ್ತಿದ್ದು, ಅಚ್ಚುಕಟ್ಟು ಕೊನೆಯ ಭಾಗಕ್ಕೆ ನೀರು ತಲುಪಿಸಲು ಅಕ್ರಮ ಪಂಪ್‌ಸೆಟ್‌ ತೆರವು ಜೊತೆಗೆ ನಾಲೆಯುದ್ದಕ್ಕೂ ಅಗತ್ಯವಿದ್ದರೆ 144ನೇ ಸೆಕ್ಷನ್‌ನಡಿ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನ ಸಭಾಂಗಣದಲ್ಲಿ ಶನಿವಾರ ಕಂದಾಯ ಇಲಾಖೆ, ನೀರಾವರಿ, ಪೊಲೀಸ್ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ನಾಲೆಯಲ್ಲಿ 13 ಅಡಿವರೆಗೆ ನೀರು ಹರಿಯುವಿಕೆ ಹೆಚ್ಚಾದರೆ ಮಾತ್ರವೇ ಕೊನೆಯ ಭಾಗಕ್ಕೂ ನೀರು ತಲುಪಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ಅಕ್ರಮ ಪಂಪ್‌ಸೆಟ್ ತೆರವು ಜೊತೆಗೆ ಬೆಸ್ಕಾಂ ವಿಚಕ್ಷಣಾ ತಂಡದವರು ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದನ್ನು ಕಡಿತಗೊಳಿಸಬೇಕು ಎಂದರು.

ತೀವ್ರ ಬರ ಹಿನ್ನೆಲೆಯಲ್ಲಿ ಭದ್ರಾ ಜಲಾಶಯದಲ್ಲಿ ನೀರು ಸಂಗ್ರಹ ಕಡಿಮೆಯಾಗಿದ್ದು, ಬೇಸಿಗೆ ಹಂಗಾಮಿನಲ್ಲಿ ಅರೆ ನೀರಾವರಿ ಬೆಳೆಗಳಿಗೆ ಫೆ.28ರವರೆಗೆ ನೀರು ಹರಿಸಲು ತೀರ್ಮಾನಿಸಿದ್ದು, ಬಲ ದಂಡೆ ಕಾಲುವೆ ಮೂಲಕ ಹರಿಯುವ ನೀರು ಅಚ್ಚುಕಟ್ಟಿನ ಕೊನೆಯ ಭಾಗಕ್ಕೂ ನೀರು ತಲುಪಿಸಲು ಉಸ್ತುವಾರಿ ತಂಡಗಳ ರಚಿಸಿ, ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕಟ್ಟುನಿಟ್ಟಿನ ಕ್ರಮ:

ನೀರಿನ ಸಂಗ್ರಹ ಕಡಿಮೆ ಇರುವ ಕಾರಣ ಅರೆ ನೀರಾವರಿ ಬೆಳೆ ಬೆಳೆಯಲು ಸಲಹೆ ನೀಡಲಾಗಿದೆ. ಈಗಿರುವ ತೋಟಗಳ ಉಳಿಸಿಕೊಳ್ಳಲು ಹಾಗೂ ಕುಡಿಯುವ ನೀರಿನ ಕೊಳವೆ ಬಾವಿಗಳ ಅಂತರ್ಜಲ ಕಡಿಮೆಯಾಗದಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆ ಎಂದು ಸ್ಪಷ್ಟಪಡಿಸಿದರು.

ಕೆಲವು ರೈತರು ಬಲದಂಡೆ ಕಾಲುವೆಗಳಿಗೆ ಅನಧಿಕೃತವಾಗಿ ಪಂಪ್ ಸೆಟ್ ಅಳವಡಿಸಿ, ನೀರೆತ್ತುತ್ತಿದ್ದಾರೆ. ಇದರಿಂದ ಕಡೇ ಭಾಗಕ್ಕೆ ನೀರು ತಲುಪುತ್ತಿಲ್ಲ. ನೀರಾವರಿ ಇಲಾಖೆಗೆ ಸೇರಿದ ಜಾಗದಲ್ಲಿ ಅಂದರೆ ಭೂ ಸ್ವಾಧೀನವಾದ ಜಾಗದಲ್ಲೇ ಕೊಳವೆ ಬಾವಿ ಕೊರೆಸಿ, ಟಿಸಿ ಅಳವಡಿಸಿ, ನೀರೆತ್ತಲಾಗುತ್ತಿದೆ. ನಿಯಮಾನುಸಾರ ಕ್ರಮ ಕೈಗೊಂಡು, ಅಂತಹದ್ದು ಅನಧಿಕೃತವಾಗಿದ್ದರೆ ಆ ಕೊಳವೆಬಾವಿಗಳ ತೆರವಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಜಿಪಂ ಸಿಇಒ ಡಾ.ಸುರೇಶ ಬಿ.ಇಟ್ನಾಳ್ ಮಾತನಾಡಿ, ಸೂಳೆಕೆರೆಯಲ್ಲಿ ಜಿಲ್ಲೆಯ ಚನ್ನಗಿರಿ, ಬಹುಗ್ರಾಮಗಳು ಸೇರಿ ಚಿತ್ರದುರ್ಗ ಜಿಲ್ಲೆಗೆ ನೀರು ಪೂರೈಸಲಾಗುತ್ತದೆ. ಆದರೆ, ಸೂಳೆಕೆರೆಯಲ್ಲಿ ನೀರು ಸಂಗ್ರಹ ಕಡಿಮೆ ಇದೆ. ನಾಲೆಯಿಂದ ನೀರು ಬಿಡುಗಡೆ ಮಾಡಿದಲ್ಲಿ ಬೇಸಿಗೆಗೆ ನೀರು ಪೂರೈಸಲು ಸಾಧ್ಯವಾಗಲಿದೆ. ಹರಿಹರ ತಾಲೂಕು ರಾಜನಹಳ್ಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನಿರಂತರ ವಿದ್ಯುತ್ ಪೂರೈಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಪರ ಜಿಲ್ಲಾಧಿಕಾರಿ ಸೈಯ್ಯದಾ ಅಫ್ರಿನ್‌ ಭಾನು ಎಸ್‌.ಬಳ್ಳಾರಿ, ಬಿ.ಆರ್‌.ಪ್ರಾಜೆಕ್ಟ್‌ನ ಅಧೀಕ್ಷಕ ಅಭಿಯಂತರಾದ ಸುಜಾತ, ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ಭದ್ರಾ ನಾಲೆ ನಂ.5 ವಿಭಾಗದ ಕಾರ್ಯ ಪಾಲಕ ಅಭಿಯಂತರ ಆರ್.ಬಿ.ಮಂಜುನಾಥ ಸೇರಿ ಕಂದಾಯ, ಪೊಲೀಸ್, ನೀರಾವರಿ, ಬೆಸ್ಕಾಂ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.

ಅಕ್ರಮ ಪಂಪ್‌ಸೆಟ್‌ ರೈತರೇ ಸ್ವಯಂ ತೆರವುಗೊಳಿಸಿ

ಕಂದಾಯ, ಪೊಲೀಸ್, ನೀರಾವರಿ ಇಲಾಖೆ ಅಧಿಕಾರಿಗಳ ಒಳಗೊಂಡ ತಂಡಗಳು ದಾವಣಗೆರೆ, ಹರಿಹರ, ಚನ್ನಗಿರಿ ತಾಲೂಕಿನಲ್ಲಿ ಎಲ್ಲೆಲ್ಲಿ ಭದ್ರಾ ನಾಲೆಗಳಿಗೆ ಅನಧಿಕೃಕವಾಗಿ ಪಂಪ್ ಸೆಟ್ ಅಳವಡಿಸಲಾಗಿದೆಯೋ ಅಲ್ಲೆಲ್ಲಾ ತೆರಳಿ, ಅಕ್ರಮ ಪಂಪ್‌ಸೆಟ್ ತೆರವುಗೊಳಿಸಬೇಕು. ಒಂದು ವೇಳೆ ರೈತರೇ ಸ್ವಯಂ ಪ್ರೇರಿತರಾಗಿ ಅಕ್ರಮ ಪಂಪ್‌ಸೆಟ್‌ ತೆರವುಗೊಳಿಸದಿದ್ದರೆ, ಅಂತಹ ಪರಿಕರಗಳ ಸರ್ಕಾರದ ವಶಕ್ಕೆ ಪಡೆದು, ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ತಕ್ಷಣವೇ ನಾಲೆಯಲ್ಲಿ ಅಳವಡಿಸಿರುವ, ನಾಲೆಗೆ ಹೊಂದಿಕೊಂಡಿರುವ ಅಕ್ರಮ ಪಂಪ್‌ಸೆಟ್, ಮೋಟಾರು ತೆರವುಗೊಳಿಸಿ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ ಆದೇಶಿಸಿದರು.

Share this article