ಶುಂಠಿ ಬೆಳೆಗೆ ಸಾವಿರಾರು ಮರಗಳ ಹನನ

KannadaprabhaNewsNetwork | Published : Dec 22, 2023 1:30 AM

ಸಾರಾಂಶ

ಆನೆಕಾಡು ಮೀಸಲು ಅರಣ್ಯಕ್ಕೆ ಸಮೀಪದಲ್ಲಿರುವ ಕೊಡಗರಹಳ್ಳಿ ಬಳಿಯ ಎಸ್ಟೇಟ್ ಒಳಭಾಗದಲ್ಲಿ ಸುಮಾರು 35 ಎಕರೆಗೂ ಮೀರಿ ವ್ಯಾಪ್ತಿಯ ಕಾಫಿ ತೋಟವನ್ನು ನೆಲಸಮ ಮಾಡಿ ಈ ಪ್ರದೇಶದಲ್ಲಿರುವ ಸಾವಿರಾರು ಮರಗಳಿಗೆ ಹಾನಿ ಮಾಡುವವರೊಂದಿಗೆ ಹಲವು ಬೆಲೆ ಬಾಳುವ ಮರಗಳನ್ನು ಅಕ್ರಮವಾಗಿ ಬೀಳಿಸಿದ್ದು ಗೋಚರಿಸಿದೆ.

ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ತಾಲೂಕಿನ ಕೊಡಗರಹಳ್ಳಿ ಬಳಿ ಕಾಫಿ ಎಸ್ಟೇಟ್ ಒಂದರಲ್ಲಿ ಶುಂಠಿ ಬೆಳೆಗೆ ಜಾಗ ಸಮತಟ್ಟು ಮಾಡುವ ನೆಪದಲ್ಲಿ ಸಾವಿರಾರು ಮರಗಳ ಹನನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಆನೆಕಾಡು ಮೀಸಲು ಅರಣ್ಯಕ್ಕೆ ಸಮೀಪದಲ್ಲಿರುವ ಕೊಡಗರಹಳ್ಳಿ ಬಳಿಯ ಎಸ್ಟೇಟ್ ಒಳಭಾಗದಲ್ಲಿ ಸುಮಾರು 35 ಎಕರೆಗೂ ಮೀರಿ ವ್ಯಾಪ್ತಿಯ ಕಾಫಿ ತೋಟವನ್ನು ನೆಲಸಮ ಮಾಡಿ ಈ ಪ್ರದೇಶದಲ್ಲಿರುವ ಸಾವಿರಾರು ಮರಗಳಿಗೆ ಹಾನಿ ಮಾಡುವವರೊಂದಿಗೆ ಹಲವು ಬೆಲೆ ಬಾಳುವ ಮರಗಳನ್ನು ಅಕ್ರಮವಾಗಿ ಬೀಳಿಸಿದ್ದು ಗೋಚರಿಸಿದೆ.

ಶುಂಠಿ ಬೆಳೆಯುವ ಉದ್ದೇಶದಲ್ಲಿ ಕಳೆದ ಕೆಲವು ಸಮಯದಿಂದ ತೋಟದಲ್ಲಿರುವ ಕಾಫಿ ಗಿಡಗಳನ್ನು ಸೇರಿದಂತೆ ಬೃಹತ್‌ ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿರುವುದಾಗಿ ತಿಳಿದು ಬಂದಿದೆ.ಹಲವು ಬೆಲೆ ಬಾಳುವ ಮೌಲ್ಯದ ಮರಗಳನ್ನು ಕಡಿದಿರುವ ಶಂಕೆ ವ್ಯಕ್ತಗೊಂಡಿದ್ದು, ಹೊರ ಜಿಲ್ಲೆಗಳಿಗೆ ಸಾಗಾಟವಾಗಿರುವ ಬಗ್ಗೆ ಕೂಡ ಗುಸು ಗುಸು ಕೇಳಿ ಬರುತ್ತಿದೆ. ನೂರಾರು ಲೋಡ್‌ಗಳಷ್ಟು ಟಿಂಬರ್ ಕೂಡ ಸಾಗಾಟವಾಗಿರುವ ಶಂಕೆ ಸ್ಥಳೀಯರಿಂದ ವ್ಯಕ್ತವಾಗಿದೆ. ಎದುರು ಭಾಗದಲ್ಲಿರುವ ಕಾಫಿ ತೋಟದಲ್ಲಿ ಹಲವು ಲೋಡುಗಳಷ್ಟು ಮರದ ದಿಮ್ಮಿ ಮತ್ತು ಸಣ್ಣ ಪುಟ್ಟ ಕೊಂಬೆಗಳನ್ನು ಸಾಗಿಸಲಾಗಿದೆ.ಹಲಸು, ಮತ್ತಿ ಮತ್ತಿತರ ಜಾತಿಗಳ ಮರಗಳನ್ನು ಕಡಿದಿರುವ ಸುಳಿವು ಗೋಚರಿಸಿದೆ. ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದಲ್ಲಿ ಬೀಟೆ ಮತ್ತಿತರ ಮರಗಳ ತೆರವು ಮಾಡಿರುವ ಬಗ್ಗೆ ಕೂಡ ಸುಳಿವು ಲಭಿಸಬಹುದು ಎನ್ನುತ್ತಾರೆ ಸ್ಥಳೀಯರು.

ಇಷ್ಟೆಲ್ಲ ನಡೆದರೂ ಅರಣ್ಯ ಇಲಾಖೆಗೆ ಮಾತ್ರ ಮರ ಹನನ ಬಗ್ಗೆ ಸುಳಿವು ದೊರೆಯದೇ ಇರುವುದು ಸಂಶಯಕ್ಕೆ ಎಡೆ ಮಾಡಿದೆ. ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ನಿರ್ಲಕ್ಷ್ಯ ಇಲ್ಲಿ ಎದ್ದು ಕಾಣುತ್ತಿದೆ.

ಈ ಕಾಫಿ ತೋಟದ ಒಳಗೆ ಕಳೆದ ಹಲವಾರು ವರ್ಷಗಳಿಂದ ಕಾಡಾನೆಗಳು ಓಡಾಡುವ ದೃಶ್ಯ ಸಾಮಾನ್ಯವಾಗಿದ್ದು, ಇದು ಆನೆ ಕಾರಿಡಾರ್ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಆನೆಗಳು ಓಡಾಡುವ ಪ್ರದೇಶದಲ್ಲಿ ಶುಂಠಿ ಬೆಳೆ ಬೆಳೆಸಲು ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಭಾರಿ ಪ್ರಮಾಣದ ಮರಗಳನ್ನು ಹಾನಿ ಮಾಡಿರುವ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕಾಗಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ತಮ್ಮ ಇಲಾಖೆಯಿಂದ ಯಾವುದೇ ರೀತಿಯ ಅನುಮತಿ ಪಡೆಯದೆ ಅಕ್ರಮವಾಗಿ ಮರ ಹನನ ನಡೆದಿದೆ. ಈ ಬಗ್ಗೆ ತೋಟದ ಮಾಲೀಕರು ಮತ್ತು ಒಪ್ಪಂದ ಪತ್ರದಂತೆ ಶುಂಠಿ ಬೆಳೆಗಾರರಾದ ಅಬ್ಬಾಸ್, ಬೇಬಿ ಜಾರ್ಜ್, ರಫೀಕ್ ಸೇರಿದಂತೆ ನಾಲ್ವರ ಮೇಲೆ ಕೇಸು ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಜೆಸಿಬಿ, ಟ್ರ್ಯಾಕ್ಟರ್ ಮತ್ತು ಮರ ತೆರವುಗೊಳಿಸಲು ಬಳಸಿದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮವಾಗಿ ಬೀಳಿಸಿರುವ ಮರಗಳನ್ನು ಸ್ಥಳಾಂತರಿಸಲಾಗುವುದು.

। ರತನ್ ಕುಮಾರ್, ಕುಶಾಲನಗರ ವಲಯ ಅರಣ್ಯಾಧಿಕಾರಿ

-----------------------

ಸೋಮವಾರಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಅವರ ನೇತೃತ್ವದಲ್ಲಿ ತನಿಖೆ ಕೈಗೊಂಡು ಮೂರು ದಿನದ ಒಳಗೆ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ.। ಭಾಸ್ಕರ್, ಮಡಿಕೇರಿ ಉಪ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ

Share this article