ಕನ್ನಡಪ್ರಭ ವಾರ್ತೆ ಕುಂದಾಪುರ
ಸಮಾಜದ ನೆಮ್ಮದಿಯನ್ನು ಕೆಡಿಸುತ್ತಿರುವ ಸೈಬರ್ ಅಪರಾಧ ಪ್ರಕರಣಗಳಲ್ಲಿ ನಷ್ಟಕ್ಕೆ ಒಳಗಾಗಿ ಸಂಕಷ್ಟಕ್ಕೆ ಒಳಗಾಗುವ ಮೊದಲು ಸ್ವಯಂ ಜಾಗೃತಿ ಅತ್ಯಂತ ಅವಶ್ಯಕ ಎಂದು ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಪವನ್ ನಾಯಕ್ ಹೇಳಿದರು.ನಾಡಾ ಐಟಿಐ ಕಾಲೇಜಿನಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆ ಸಹಯೋಗದಲ್ಲಿ ಬುಧವಾರ ನಡೆದ ಸೈಬರ್ ಸುರಕ್ಷತಾ ಜಾಗೃತಿ ಅಭಿಯಾನ ಹಾಗೂ ಮಾದಕ ಅಪರಾಧ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಸೈಬರ್ ಅಪರಾಧ ಪ್ರಕರಣಗಳಲ್ಲಿ ವಂಚನೆಗೆ ಒಳಗಾಗುವವರಲ್ಲಿ ವಿದ್ಯಾವಂತರೇ ಅಧಿಕವಾಗಿದ್ದಾರೆ. ವಂಚನೆ ಘಟಿಸಿದ ತಕ್ಷಣವೇ ರಾಷ್ಟ್ರೀಯ ಸೈಬರ್ ಸಹಾಯವಾಣಿ ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಯಾವುದೇ ಅನಪೇಕ್ಷಿತ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೊದಲು ಆಲೋಚಿಸಬೇಕು. ಅಪರಾಧ ಪ್ರಕರಣಗಳಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗುವ ಯಾರನ್ನೂ ಕೂಡ ಕಾನೂನು ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲು ಇಲಾಖೆ ಕಟಿಬದ್ಧವಾಗಿದೆ. ಅಪರಾಧ ಚಟುವಟಿಕೆಗಳ ವಿರುದ್ಧ ಕಾನೂನು ಬಾಹುಗಳು ಬಲಿಷ್ಠವಾಗಿದೆ ಎಂದರು.
ಪ್ರಾಂಶುಪಾಲ ಮನೋಹರ್ ಆರ್. ಕಾಮತ್ ಅಧ್ಯಕ್ಷತೆ ವಹಿಸಿ, ನಮಗೆ ಅರಿವಿಲ್ಲದಂತೆ ಅಪರಾಧ ಲೋಕದೊಳಗೆ ಸೇರಿಕೊಳ್ಳುವ ಮೊದಲು ಜಾಗೃತರಾಗಿರಬೇಕು. ಮಾದಕ ವ್ಯಸನಗಳು ವೈಯಕ್ತಿಕ ಜೀವನವನ್ನು ಹಾಳುಮಾಡುವ ಜೊತೆ ಕುಟುಂಬದ ನೆಮ್ಮದಿಯನ್ನೂ ಕೆಡಿಸುತ್ತದೆ ಎಂದರು.ಗ್ರಹ ರಕ್ಷಕ ದಳ ಜಿಲ್ಲಾ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಐಟಿಐ ಆಡಳಿತ ಮಂಡಳಿ ಕಾರ್ಯದರ್ಶಿ ನವೀನ್ ಲೋಬೊ, ಗಂಗೊಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಮಾಹಲಿಂಗ ರಾಯ್, ಮಾರುತಿ ಇದ್ದರು.
ಎಸ್‌ಐ ಪವನ್ ನಾಯಕ್, ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಿರಿಯ ತರಬೇತಿ ಅಧಿಕಾರಿಗಳಾದ ದಿನೇಶ್ ಕೆ. ಬೈಂದೂರು ಸ್ವಾಗತಿಸಿದರು. ರಾಘವೇಂದ್ರ ಆಚಾರ್ ಕಟ್‌ಬೇಲ್ತೂರ್ ವಂದಿಸಿದರು. ಕಿಶೋರ್ ಪೂಜಾರಿ ಸಸಿಹಿತ್ಲು ಬೈಂದೂರು ನಿರೂಪಿಸಿದರು.