ಜಿಟಿಜಿಟಿ ಮಳೆಯಿಂದ ಜನರ ನಿತ್ಯ ಕಾರ್ಯಗಳಿಗೆ ತೊಂದರೆ । ಇಂದು ಸಹ ಶಾಲಾ ಕಾಲೇಜು ರಜೆ ಘೋಷಣೆ । ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ
ಕನ್ನಡಪ್ರಭ ವಾರ್ತೆ ಚಾಮರಾಜನಗರಫೆಂಗಲ್ ಚಂಡಮಾರುತದಿಂದ ತಮಿಳುನಾಡಿನಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ಗಡಿ ಜಿಲ್ಲೆಯಾದ್ಯಂತ ವಿವಿಧೆಡೆ ಜಿಟಿ ಜಿಟಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಜಿಲ್ಲೆಯ ಹಲವೆಡೆ ಭಾನುವಾರ ರಾತ್ರಿಯಿಂದಲೇ ನಿರಂತರ ಮಳೆಯಾಗುತ್ತಿರುವುದರಿಂದ ಸೋಮವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು, ರಜೆ ಮಂಗಳವಾರವೂ ಮುಂದುವರಿದಿದೆ.ಹನೂರು ತಾಲೂಕಿನ ಮಲೆ ಮಾದೇಶ್ವರ ಬೆಟ್ಟ ಪಾಲಾರ್ ಗೋಪಿನಾಥಂ ಸೇರಿದಂತೆ ಹನೂರು ತಾಲೂಕು ಕೇಂದ್ರ ಸೇರಿದಂತೆ ವಿವಿಧೆಡೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ರಜೆ ಇರುವುದು ವಿಳಂಬವಾಗಿ ತಿಳಿದ ನಂತರ ವಿವಿಧ ಗ್ರಾಮಗಳಿಗೆ ವಾಪಸ್ ತೆರಳಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಜಿಟಿಜಿಟಿ ಮಳೆಯಿಂದ ನಾಗರಿಕರು ವಿವಿಧೆಡೆ ತೆರಳಲು ಪರದಾಡಿದ ಘಟನೆಯು ಸಹ ಜರುಗಿದೆ. ಸತತ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ರಸ್ತೆಗಳು ಹಾಳಾಗಿರುವುದರಿಂದ ಮಳೆಯ ನೀರು ನಿಂತು ವಾಹನ ಸವಾರರು ಗುಂಡಿಗಳಲ್ಲಿ ನೀರು ಇರುವುದನ್ನು ತಿಳಿಯದೆ ಸಂಚಾರಕ್ಕೂ ಸಹ ತೊಡಕು ಉಂಟಾಗಿ ಪರದಾಡಿದರು.
ಆರೆಂಜ್ ಅಲರ್ಟ್:ಕಳೆದ ಎರಡು ದಿನಗಳಿಂದ ಫೆಂಗಲ್ ಚಂಡಮಾರುತ ಪರಿಣಾಮ ಚಾಮರಾಜನಗರ ಜಿಲ್ಲೆಯಲ್ಲಿ ಆರೆಂಜ್ ಘೋಷಣೆ ಮಾಡಿರುವುದರಿಂದ ಜಿಟಿಜಿಟಿ ಮಳೆಯ ನಡುವೆ ಸೋಮವಾರ ಜನರು ತಮ್ಮ ನಿತ್ಯದ ಕಾರ್ಯಗಳಿಗೆ ತೆರಳಿದರು. ಜಿಲ್ಲಾಡಳಿತ ಈ ಚಂಡಮಾರುತದ ಮಳೆಯ ವೇಳೆಯಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಸಹ ಸಾರ್ವಜನಿಕರಿಗೆ ಘೋಷಣೆ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡಿದೆ.
ಇಂದು ಸಹ ಶಾಲಾ ಕಾಲೇಜುಗಳಿಗೆ ರಜೆ: ಶಿಲ್ಪಾನಾಗ್ಫೆಂಗಲ್ ಚಂಡಮಾರುತದ ಪರಿಣಾಮ ಚಾಮರಾಜನಗರ ಜಿಲ್ಲೆಯಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಮಳೆ ಮುಂದುವರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ಡಿ.೩ರ ಮಂಗಳವಾರ ಸಹ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದ್ದಾರೆ.
ಪರೀಕ್ಷೆ ನಡೆಯುತ್ತಿರುವ ಪದವಿ ಕಾಲೇಜುಗಳಿಗೆ ಹೊರತುಪಡಿಸಿ ರಜೆ ಘೋಷಣೆ ಮಾಡಲಾಗಿದೆ. ಫೆಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಡಿ.೩ರಂದು ಯೆಲ್ಲೋ ಅಲರ್ಟ್ ಹಾಗೂ ಡಿ.೪ ರಂದು ಹೆಚ್ಚು ಮಳೆಯಾಗುವ ಬಗ್ಗೆ ಭಾರತೀಯ ಹವಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಸಾರ್ವಜನಿಕರು ಮುಂದಿನ ಎರಡು ದಿನ ಅಥವಾ ಮಳೆ ಕಡಿಮೆಯಾಗುವವರೆಗೆ ಹಲವು ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.ಸಾರ್ವಜನಿಕರು ನದಿಗಳಿಗೆ ಅಥವಾ ತಗ್ಗು ಪ್ರದೇಶಗಳಿಗೆ ತೆರಳದಂತೆ ಕಟ್ಟೆಚ್ಚರವಹಿಸಬೇಕು. ಜಾನುವಾರನ್ನು ಶುಚಿಗೊಳಿಸಲು ಅಥವಾ ಬಟ್ಟೆಗಳನ್ನು ತೊಳೆಯಲು ಹಳ್ಳ, ಕೆರೆ-ಕಟ್ಟೆಗಳಿಗೆ ತೆರಳಬಾರದು. ಗಣಿಗಾರಿಕೆ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಗಣಿಗಾರಿಕೆ ಸ್ಥಳಗಳಲ್ಲಿ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ವಹಿಸಬೇಕು. ಮಳೆಯಿಂದಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಗುಡ್ಡ ಕುಸಿತು ಉಂಟಾಗುವ ಸಂಭವವಿರುವುದರಿಂದ ಸಾರ್ವಜನಿಕರು ಎಚ್ಚರವಹಿಸಬೇಕು. ಶಿಥಿಲವಾಗಿರುವ ಮನೆಗಳಲ್ಲಿ ವಾಸವಾಗಿರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ವಿದ್ಯುತ್ ಕಂಬಗಳು, ಟ್ರಾನ್ಸ್ ಫಾರ್ಮರ್‌ಗಳ ಬಳಿ ತೆರಳದಂತೆ ಎಚ್ಚರವಹಿಸಬೇಕು. ಯಾವುದೇ ಮಾಹಿತಿಗಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ ೦೮೨೨೬-೨೨೩೧೬೦/೬೧/೬೩ ವಾಟ್ಸಾಪ್ ಸಂಖ್ಯೆ ೯೧ ೯೭೪೦೯೪೨೯೦೧ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.