ಅಂಕೋಲಾದ ಕೇಣಿಯಲ್ಲಿ ಸಿಲಿಂಡರ್ ಸ್ಫೋಟ

KannadaprabhaNewsNetwork |  
Published : Jan 05, 2026, 02:30 AM IST
 | Kannada Prabha

ಸಾರಾಂಶ

ತಾಲೂಕಿನ ಕೇಣಿಯ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದ್ದು, ಒಟ್ಟು 6 ಜನರಿಗೆ ಗಾಯಗಳಾಗಿದ್ದು, ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ.

ಇಬ್ಬರಿಗೆ ಗಂಭೀರ ಗಾಯ, ಒಟ್ಟು 6 ಗಾಯಾಳುಗಳು ಆಸ್ಪತ್ರೆಗೆ ದಾಖಲು

ಕನ್ನಡಪ್ರಭ ವಾರ್ತೆ ಅಂಕೋಲಾ

ತಾಲೂಕಿನ ಕೇಣಿಯ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದ್ದು, ಒಟ್ಟು 6 ಜನರಿಗೆ ಗಾಯಗಳಾಗಿದ್ದು, ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ.

ಬಾಡಿಗೆ ಮನೆಯವರ ಸಿಲಿಂಡರ್‌ ಸೋರಿಕೆ ಇದ್ದು, ಈ ಸಿಲಿಂಡರನ್ನು ಸರಿಪಡಿಸಿ ಕೊಡಿ ಎಂದು ಶ್ರವಣ ಬಂಟ (55) ಎನ್ನುವವರಿಗೆ ಕರೆದಿದ್ದು, ಶ್ರವಣ ದುರಸ್ತಿ ಪಡಿಸಿ, ಸರಿ ಇದೆ ಎಂದು ಖಚಿತಪಡಿಸಿ ಹೊರಡುವಷ್ಟರಲ್ಲಿ ಬಾಡಿಗೆ ಮನೆಯಲ್ಲಿರುವ ಸುದರ್ಶನ ಲೋಕಪ್ಪ ನಾಯ್ಕ (48) ಎನ್ನುವವರು ಬೆಂಕಿ ಕಡ್ಡಿಯನ್ನು ಅಡುಗೆ ಮಾಡುವ ಗ್ಯಾಸ್‌ ಒಲೆಯ ಹತ್ತಿರ ಗೀರಿದ್ದು ಏಕಾಏಕಿ ಬೆಂಕಿ ಹೊತ್ತಿಕೊಂಡಿತು ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.

ಈ ಸಂದರ್ಭದಲ್ಲಿ ಮನೆಯೊಳಗಿದ್ದ ಸುದರ್ಶನ ಲೋಕಪ್ಪ ನಾಯ್ಕ ಶೇ. 75ರಷ್ಟು ಸುಟ್ಟಿದ್ದು, ಅವರ ಪತ್ನಿ ರೂಪಾ ಅವರಿಗೂ ಚಿಕ್ಕಪುಟ್ಟ ಸುಟ್ಟ ಗಾಯಗಳಾಗಿವೆ. ಜತೆಯಲ್ಲಿ ಸಿಲಿಂಡರ್‌ ದುರಸ್ತಿ ಮಾಡಲು ಬಂದ ಶ್ರವಣ ಬಂಟ ಎನ್ನುವವರಿಗೂ ತೀವ್ರ ತರಹದ ಗಾಯಗಳಾಗಿವೆ. ಸುದರ್ಶನ ಅವರ ಪುತ್ರ ಶಿವಪ್ರಸಾದ ನಾಯ್ಕ (12) ಗೂ ಅಲ್ಪಸ್ವಲ್ಪ ಸುಟ್ಟ ಗಾಯಗಳಾಗಿದೆ. ಮನೆಯ ಮಾಲೀಕ ಗೌರೀಶ ನಾಯಕ ಅವರ ಮೊಮ್ಮಗ ಕೃಷ್ಣ ದಿಲೀಪ್‌ ನಾಯಕ (4) ಗೂ ಸುಟ್ಟಗಾಯಗಳಾಗಿವೆ. ಜತೆಯಲ್ಲಿ ತನ್ನ ಮೊಮ್ಮಗನನ್ನು ಕರೆತರಲು ಸಿಲಿಂಡರ್‌ ರಿಪೇರಿ ಮಾಡುವಲ್ಲಿ ತೆರಳಿದ್ದ ಗಿರಿಜಾ ಗೌರೀಶ ನಾಯಕ ಎನ್ನುವವರಿಗೂ ಗಾಯಗಳಾಗಿದ್ದು, ಸುದರ್ಶನ ಅವರನ್ನು ಮಣಿಪಾಲ್ ಆಸ್ಪತ್ರೆಗೂ, ಕೃಷ್ಣ, ಶ್ರವಣ, ರೂಪಾ ನಾಯ್ಕ, ಗಿರಿಜಾ ನಾಯಕ ಮತ್ತು ಶಿವಪ್ರಸಾದ ಅವರನ್ನು ಕಾರವಾರ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಸಾಗಿಸಲಾಗಿದೆ.

ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ, ಪೊಲೀಸ್ ಉಪ ನಿರೀಕ್ಷಕರು ಮತ್ತು ಸಿಬ್ಬಂದಿ ಮತ್ತು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಕಂದಾಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಂಕೋಲಾದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಬೇರೆಡೆ ಕಳುಹಿಸಲಾಗಿದೆ. ಅಂಕೋಲಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ