ಹುಬ್ಬಳ್ಳಿ: ಇಲ್ಲಿನ ಸಾಯಿನಗರದಲ್ಲಿ ಸಿಲಿಂಡರ್ ಸೋರಿಕೆಯಿಂದ ನಡೆದ ಅಗ್ನಿ ಅವಘಡದಲ್ಲಿ ತೀವ್ರ ಗಾಯಗೊಂಡು ಇಲ್ಲಿನ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಯ್ಯಪ್ಪ ಮಾಲಾಧಾರಿಗಳಲ್ಲಿ ಭಾನುವಾರ ಮತ್ತಿಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ಮೃತರ ಸಂಖ್ಯೆ ಆರಕ್ಕೇರಿದ್ದು, ಇನ್ನೂ ಮೂವರಿಗೆ ಚಿಕಿತ್ಸೆ ಮುಂದುವರಿದಿದೆ. ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕೆಎಂಸಿಆರ್‌ಐನಲ್ಲಿ ಕೆಲಸ ಮಾಡುತ್ತಿದ್ದ ಶಂಕರ ಚವ್ಹಾಣ (30) ಹಾಗೂ ಮಂಜುನಾಥ ವಾಘ್ಮೋಡೆ (17) ಭಾನುವಾರ ಚಿಕಿತ್ಸೆ ಫಲಿಸದೆ ಮೃತರಾಗಿದ್ದಾರೆ. ಡಿ. 26ರಂದು ನಿಜಲಿಂಗಪ್ಪ ಬೇಪುರಿ, ಸಂಜಯ ಸವದತ್ತಿ, ಡಿ. 27ರಂದು ರಾಜು ಮೂಗೇರಿ, ಲಿಂಗರಾಜ ಬೀರನೂರು ಮೃತರಾಗಿದ್ದರು. ಇನ್ನುಳಿದ ಪ್ರಕಾಶ ಬಾರಕೇರ್, ವಿನಾಯಕ ಬಾರಕೇರ್, ತೇಜಸ್ ಸಾತರೆ ಅವರನ್ನು ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಓರ್ವನನ್ನು ಹೊರತುಪಡಿಸಿ, ಉಳಿದವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಡಿ. 22ರಂದು ಸಾಯಿನಗರದ ಅಚ್ಚವನ ಕಾಲನಿಯ ಮನೆವೊಂದರಲ್ಲಿ ಅಯ್ಯಪ್ಪ ಸ್ವಾಮಿ ಸನ್ನಿಧಾನ ಮಾಡಿಕೊಂಡು ಮಲಗಿದ್ದ ವೇಳೆ ಈ ಘಟನೆ ನಡೆದಿತ್ತು.
ಬೇಡ ಅಂದರೂ ಮಾಲೆ ಹಾಕಿದ್ದ:
ನನ್ನ ಮಗ ಶಂಕರ್ ಕೆಎಂಸಿಆರ್‌ಐನಲ್ಲಿ ವಾರ್ಡ್‌ಬಾಯ್ ಆಗಿ ಕೆಲಸ ಮಾಡುತ್ತಿದ್ದನು. ಅಲ್ಲಿಯೇ ಅವನ ಸಾವಾಗಿದೆ. ಈ ತರಹ ಆಗತ್ತೆ ಎಂದು ನಾನು ಭಾವಿಸರಲಿಲ್ಲ. ಮದುವೆ ಮಾಡಲು ಅವನಿಗೆ ಹುಡುಗಿ ಹುಡುಕುತ್ತಿದ್ದೆವು. ಆದರೆ, ಇಂದು ಅವನೇ ಇಲ್ಲ. ಅವನನ್ನು ನನ್ನ ಹೆತ್ತಮಗನಿಗಿಂತಲೂ ಮುದ್ದಾಗಿ ಸಾಕಿದ್ದೆ. ಮೊದಲ ಬಾರಿಗೆ ಅಯ್ಯಪ್ಪ ಮಾಲೆ ಹಾಕುವುದಾಗಿ ನನ್ನ ಬಳಿ ಹೇಳಿಕೊಂಡಿದ್ದ. ನಾನು ಬೇಡ ಎಂದು ಹೇಳಿದ್ದೆ. ಆದರೂ ಮಾಲೆ ಹಾಕಿದ್ದ. ನನ್ನ ಮಾತು ಕೇಳಿ ಮಾಲೆ ಹಾಕದೇ ಇದ್ದಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂದು ಶಂಕರನ ದೊಡ್ಡಮ್ಮ ಮಂಜುಳಾ ಕಣ್ಣೀರು ಹಾಕಿದರು.
ಅಯ್ಯಪ್ಪ ಕೃಪೆ ತೋರಲಿಲ್ಲ:
ಕೊರೋನಾ ಸಂದರ್ಭದಲ್ಲಿ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದನು. ಆದರೆ, ಅವನ ಮೇಲೆ ಅಯ್ಯಪ್ಪ ಕೃಪೆ ತೋರಲಿಲ್ಲ. ಶಿಕ್ಷೆ ಕೊಡಲಿ ಆದರೆ, ಇಂತಹ ಕೆಟ್ಟ ಶಿಕ್ಷೆ ಕೊಡಬಾರದಿತ್ತು. ಶಂಕರನ ಕಳೆದುಕೊಂಡ ದುಃಖ ನಮಗೆ ಭರಿಸಲು ಆಗುವುದಿಲ್ಲ. ಮಾಲೆ ಹಾಕಬೇಡ ಅಂತ ನಾವೆಲ್ಲ ಹೇಳಿದ್ವಿ ಎಂದು ಶಂಕರ್ ಸಹೋದರಿ ಕೆಎಂಸಿಆರ್‌ಐನ ಶವಾಗಾರದ ಬಳಿ ಗೋಳಾಡುತ್ತಿದ್ದರು.