ಸಿಲಿಂಡರ್ ಅಭಾವ: ವೇಸ್ಟ್ ಆಯಿಲ್, ಕಟ್ಟಿಗೆ ಒಲೆ ಮೊರೆ

KannadaprabhaNewsNetwork |  
Published : Jun 04, 2026, 02:15 AM IST
ಫೊಟೊ 03 ಎಚ್,ಎನ್,ಎಮ್ 02 ಏ : ಹನುಮಸಾಗರದ ಮಂಜುನಾಥ ಟಿಫಿನ್ ಸೆಂಟರ್ ನಲ್ಲಿ ವೆಸ್ಟ ಆಯಿಲ್ ಒಲೆಯಿಂದ ಇಡ್ಲಿ ತಯ್ಯಾರು ಮಾಡುತ್ತಿರುವದು.  ಫೊಟೊ 03 ಎಚ್,ಎನ್,ಎಮ್ 02 ಬಿ : ಹನುಮಸಾಗರ ವೆಸ್ಟ ಆಯಿಲ್ ನಿಂದ ಒಲೆ ಹತ್ತಿರುವದು.  ಫೊಟೊ 03 ಎಚ್,ಎನ್,ಎಮ್ 02 ಸಿ : ಹನುಮಸಾಗರದ ಹೊಟಲ್ ಒಂದರಲ್ಲಿ ಕೃಷಿ ತ್ಯಾಜ್ಯ ಹಾಗೂ ಜೋಳದ ಲಡ್ಡುಗಳನ್ನು ಇಂಧನವಾಗಿ ಬಳಸಿ ಪುರಿ ತಯ್ಯಾರಿಸುತ್ತಿರುವದು.  | Kannada Prabha

ಸಾರಾಂಶ

ವೆಲ್ಡಿಂಗ್‌ ಅಂಗಡಿಗಳಲ್ಲಿ ತಯಾರಾಗುವ ವೇಸ್ಟ್‌ ಆಯಿಲ್‌ ಒಲೆಗಳಿಗೆ ಈಗ ಹೆಚ್ಚಿನ ಬೇಡಿಕೆ ಬಂದಿದೆ.

ಏಕನಾಥ ಮೆದಿಕೇರಿ ಹನುಮಸಾಗರ

ವಾಣಿಜ್ಯ ಸಿಲಿಂಡರ್‌ಗಳ ನಿರಂತರ ಬೆಲೆ ಏರಿಕೆ ಹಾಗೂ ಪೂರೈಕೆಯಲ್ಲಿ ಅಭಾವದ ಹಿನ್ನೆಲೆ ಪಟ್ಟಣ ಹಾಗೂ ಗ್ರಾಮೀಣ ಭಾಗಗಳ ಹೋಟೆಲ್‌, ಖಾನಾವಳಿ, ಚಹಾ ಅಂಗಡಿ ಮತ್ತು ಡಾಬಾ ಮಾಲೀಕರು ಈಗ ಕಟ್ಟಿಗೆ ಆಧಾರಿತ ಒಲೆಗಳ ಮೊರೆ ಹೋಗಿದ್ದಾರೆ. ಸಿಲಿಂಡರ್‌ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಂಡು ಕಡಿಮೆ ವೆಚ್ಚದಲ್ಲಿ ಅಡುಗೆ ಮಾಡಿಸಲು ಪರ್ಯಾಯ ವ್ಯವಸ್ಥೆ ಅಳವಡಿಸಿಕೊಳ್ಳುತ್ತಿದ್ದಾರೆ.

ವಾಣಿಜ್ಯ ಸಿಲಿಂಡರ್ ಬೆಲೆ ಇತ್ತೀಚೆಗೆ ₹3,160ರಿಂದ ₹3,240ಕ್ಕೆ ಏರಿಕೆಯಾಗಿದ್ದು, ತಿಂಗಳಿಗೆ ಅಗತ್ಯವಿದ್ದಷ್ಟು ಸಿಲಿಂಡರ್‌ ಸಿಗದೆ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿಂದೆ ತಿಂಗಳಿಗೆ 10 ಸಿಲಿಂಡರ್ ಬಳಸುತ್ತಿದ್ದ ಹೋಟೆಲ್‌ಗಳಿಗೆ ಈಗ ಕೇವಲ 3 ಸಿಲಿಂಡರ್‌ ಪೂರೈಕೆಯಾಗುತ್ತಿದೆ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಒಲೆಗಳಿಗೆ ಹೆಚ್ಚಿದ ಬೇಡಿಕೆ: ವೆಲ್ಡಿಂಗ್‌ ಅಂಗಡಿಗಳಲ್ಲಿ ತಯಾರಾಗುವ ವೇಸ್ಟ್‌ ಆಯಿಲ್‌ ಒಲೆಗಳಿಗೆ ಈಗ ಹೆಚ್ಚಿನ ಬೇಡಿಕೆ ಬಂದಿದೆ. 10 ಸಾವಿರದಿಂದ 15 ಸಾವಿರ ವೆಚ್ಚದಲ್ಲಿ ಈ ಒಲೆಗಳು ಸಿದ್ಧವಾಗುತ್ತಿದ್ದು, ದೊಡ್ಡ ಹೋಟೆಲ್‌ ತಮ್ಮ ಅಗತ್ಯಕ್ಕೆ ತಕ್ಕಂತೆ ದೊಡ್ಡ ಮಾದರಿಯ ಒಲೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಈ ಒಲೆಯಲ್ಲಿ ಸಣ್ಣ ಟ್ಯಾಂಕ್‌ಗೆ ವೇಸ್ಟ್‌ ಆಯಿಲ್‌ ತುಂಬಿ ಪೈಪ್‌ ಮೂಲಕ ಹನಿಹನಿಯಾಗಿ ಆಯಿಲ್‌ ಒಲೆಗೆ ಹರಿಸಲಾಗುತ್ತದೆ. ಆರಂಭದಲ್ಲಿ ನಿಧಾನವಾಗಿ ಬೆಂಕಿ ಹತ್ತಿ ನಂತರ ಅಡ್ಜಸ್ಟಬಲ್ ಬ್ಲೋವರ್ ಯಂತ್ರದಿಂದ ಗಾಳಿ ಒದಗಿಸಿದಾಗ ಜ್ವಾಲೆ ತೀವ್ರಗೊಳ್ಳುತ್ತದೆ. ಇದರಿಂದ ಅಡುಗೆ ಬೇಗ ಸಿದ್ಧವಾಗುತ್ತದೆ.

ಹೋಟೆಲ್ ಮಾಲೀಕರ ಪ್ರಕಾರ, ಒಂದು ಲೀಟರ್ ವೇಸ್ಟ್ ಆಯಿಲ್ ಸುಮಾರು ಒಂದು ಗಂಟೆ ಸುಡುತ್ತದೆ. ಎರಡು ಗಂಟೆಗಳ ಕಾಲ ನಿರಂತರ ಬಳಕೆಗೆ ಎರಡು ಲೀಟರ್ ಆಯಿಲ್ ಸಾಕಾಗುತ್ತದೆ. ಒಂದು ಲೀಟರ್ ವೇಸ್ಟ್ ಆಯಿಲ್ ಸುಮಾರು ₹30ಕ್ಕೆ ಲಭ್ಯವಾಗುವುದರಿಂದ ಎರಡು ಗಂಟೆಗಳ ಅಡುಗೆಗೆ ಕೇವಲ ₹60 ವೆಚ್ಚವಾಗುತ್ತದೆ ಎನ್ನುತ್ತಾರೆ.

ವಾಣಿಜ್ಯ ಸಿಲಿಂಡರ್‌ ಬೆಲೆ ಈಗಾಗಲೇ ತುಂಬಾ ಹೆಚ್ಚಳವಾಗಿದ್ದು, ಮತ್ತೇ ಏರಿಕೆಯಾಗಿದೆ. ಒಂದು ಸಿಲಿಂಡರ್‌ ಬೆಲೆ ₹3240 ಆಗಿದೆ. ಅಗತ್ಯವಿರುವಷ್ಟು ಸಿಲಿಂಡರ್‌ ಸಿಗುತ್ತಿಲ್ಲ. ಆದರಿಂದ ವೇಸ್ಟ್‌ ಆಯಿಲ್‌ ಒಲೆ ಅಳವಡಿಸಿಕೊಂಡು ಹೋಟೆಲ್‌ ನಡೆಸುತ್ತಿದ್ದೇವೆ. ಇದರಿಂದ ವೆಚ್ಚ ಸ್ವಲ್ವ ಮಟ್ಟಿಗೆ ಕಡಿಮೆಯಾಗಿದೆ ಎಂದು ಹನುಮಸಾಗರ ಹೋಟೆಲ್ ಮಾಲೀಕ ಭೀಮಸಾ ಬಸ್ವಾ ತಿಳಿಸಿದ್ದಾರೆ.

ಕಟ್ಟಿಗೆ ಬೆಲೆಯೂ ಹೆಚ್ಚಾಗಿದೆ. ಹೀಗಾಗಿ ಕಟ್ಟಿಗೆ ಪುಡಿ ಹಾಗೂ ರೈತರಿಂದ ದೊರೆಯುವ ಜೋಳದ ಲಡ್ಡು ಬಳಸಿಕೊಂಡು ಒಲೆ ಹಚ್ಚುತ್ತಿದ್ದೇವೆ. ವಾಣಿಜ್ಯ ಸಿಲಿಂಡರ್‌ ತುರ್ತು ಸಂದರ್ಭಗಳಿಗೆ ಮಾತ್ರ ಉಳಿಸಿಕೊಂಡಿದ್ದೇವೆ ಎಂದು ಹನುಮಸಾಗರ ಹೋಟೆಲ್ ಮಾಲೀಕ ರಮೇಶ್ ಬಿಂಗಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆ ನಿರೀಕ್ಷೆಯಲ್ಲಿ ರೈತ: ಬೀಜ, ಗೊಬ್ಬರ ವಿತರಣೆಗೆ ಸಿದ್ಧತೆ
ಜೆ.ಎನ್.ಗಣೇಶ್‌ಗೆ ಸಚಿವ ಸ್ಥಾನ ನೀಡಲು ಒತ್ತಾಯ