ಡಿ. ದೇವರಾಜ ಅರಸು ಪರಿವರ್ತನೆಯ ಹರಿಕಾರರು-ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ

KannadaprabhaNewsNetwork | Published : Aug 21, 2024 12:32 AM

ಸಾರಾಂಶ

ಡಿ. ದೇವರಾಜ ಅರಸುರವರು ಪರಿವರ್ತನೆಯ ಹರಿಕಾರ. ಧ್ವನಿ ಇಲ್ಲದವರಿಗೆ ಧ್ವನಿ ನೀಡಿದವರು, ಸಾಮಾಜಿಕ ಮತ್ತು ಆರ್ಥಿಕವಾಗಿ ಕ್ರಾಂತಿಮಾಡಿದವರು ಹಾಗೂ ರಾಜಕಾರಣದಲ್ಲಿ ಧ್ರುವತಾರೆಯಾಗಿ ಮಿಂಚಿದವರು ಎಂದು ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಹೇಳಿದರು.

ಹಾವೇರಿ: ಡಿ. ದೇವರಾಜ ಅರಸುರವರು ಪರಿವರ್ತನೆಯ ಹರಿಕಾರ. ಧ್ವನಿ ಇಲ್ಲದವರಿಗೆ ಧ್ವನಿ ನೀಡಿದವರು, ಸಾಮಾಜಿಕ ಮತ್ತು ಆರ್ಥಿಕವಾಗಿ ಕ್ರಾಂತಿಮಾಡಿದವರು ಹಾಗೂ ರಾಜಕಾರಣದಲ್ಲಿ ಧ್ರುವತಾರೆಯಾಗಿ ಮಿಂಚಿದವರು ಎಂದು ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಹೇಳಿದರು.ನಗರದ ಗುರುಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸುರವರ ೧೦೯ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿನಿಲಯಗಳ ಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತಂದವರು. ಶೋಷಿತರನ್ನು ಸಮಾಜದ ಮುಖ್ಯಹಾನಿಗೆ ತಂದರು ಹಾಗೂ ಎಲ್ಲ ವರ್ಗಗಳಿಗೆ ಅಧಿಕಾರ ನೀಡಿದ ಧೀಮಂತ ನಾಯಕ ಎಂದು ಬಣ್ಣಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಹಿಂದುಳಿದ ವರ್ಗಗಳ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಉನ್ನತ ವಿದ್ಯಾಭ್ಯಾಸ ಪಡೆಯುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಬೇಕು. ಮಹಾನ್ ವ್ಯಕ್ತಿಗಳ ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜೀಗೌಡ್ರ ಮಾತನಾಡಿ, ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದ ದಕ್ಷ ಆಡಳಿತಗಾರ ಎಂದು ಹೇಳಿದರು.ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಡಿ. ದೇವರಾಜ ಅರಸು ಅವರು ಕರ್ನಾಟಕ ಕಂಡ ದಾರ್ಶನಿಕ ರಾಜಕಾರಣಿ, ಗಾಂಧೀಜಿ ಹಾಗೂ ಲೋಹಿಯಾ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡವರು. ಸಮ ಸಮಾಜ ನಿರ್ಮಾಣದ ಕನಸು ಕಂಡವರು ಹಾಗೂ ಹಿಂದುಳಿದ ವರ್ಗಗಳ ಏಳ್ಗೆಗೆ ಶ್ರಮಿಸಿದವರು ಎಂದು ಹೇಳಿದರು.ಭೂ ಸುಧಾರಣೆ ಕಾಯ್ದೆ, ಉಳುವವನೆ ಹೊಲದೊಡೆಯ ಕಾಯ್ದೆ, ಜೀತಮುಕ್ತ ಪದ್ಧತಿ ಹಾಗೂ ತಲೆ ಮೇಲೆ ಮಲಹೊರುವ ಪದ್ಧತಿ ನಿಷೇಧ ಕಾಯ್ದೆ ಜಾರಿಗೆ ತರುವ ಮೂಲಕ ಶೋಷಿತರ ಧ್ವನಿಯಾಗಿದ್ದರು. ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ನಾಮಕಾರಣ ಮಾಡಿದವರು, ಕನ್ನಡ ಆಡಳಿತ ಭಾಷೆಯನ್ನಾಗಿಸಿದವರು. ಅವರ ಆಡಳಿತ ಪ್ರಗತಿಪರ ಆಡಳಿತವಾಗಿತ್ತು ಎಂದು ಹೇಳಿದರು. ಕಲಾವಿದರ ಮಾಸಾಶನ, ವೃದ್ಧಾಪ್ಯ ವೇತನ, ಸ್ಟೈಫಂಡ್‌, ಭಾಗ್ಯಜ್ಯೋತಿ, ಉದ್ಯೋಗ ಖಾತ್ರಿ ಯೋಜನೆ ಹೀಗೆ ಹಲವಾರು ಜನಪರ ಯೋಜನೆಗಳನ್ನು ಅಸ್ತಿತ್ವಕ್ಕೆ ತಂದ ಅರಸು ಅವರು, ಹಿಂದುಳಿದ ವರ್ಗದ ಜನರು ಹೊಸ ಬದುಕು ಕಟ್ಟಿಕೊಂಡು ಹೊಸ ಚೈತನ್ಯದಿಂದ ಬದುಕಲು ರೂವಾರಿಗಳಾದರು ಎಂದು ಹೇಳಿದರು.ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಮಾತನಾಡಿ, ಡಿ. ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದ ಮಹಾನ್ ನಾಯಕ. ಅವರ ಜೀವನ ಕುರಿತು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದರು. ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಶೇಖರ ಭಜಂತ್ರಿ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳು ಹಾಗೂ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಅಬಕಾರಿ ಇಲಾಖೆ ಉಪ ಆಯುಕ್ತೆ ಶೈಲಜಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಎಂ.ಎಸ್. ಕೋರಿಶಟ್ಟರ, ಎಂ.ಎಂ. ಮೈದೂರ, ರಮೇಶ ಆನವಟ್ಟಿ, ಹುಲ್ಲಪ್ಪ ಜಾಡರ, ಬಸವರಾಜ ದೊಡ್ಡಮನಿ, ಮೋಹಸಿಂಗ್ ರಜಪೂತ ಇತರರು ಉಪಸ್ಥಿತರಿದ್ದರು.ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರವೀಣ ಕೆ.ಎನ್. ಸ್ವಾಗತಿಸಿದರು. ನಾಗರಾಜ ನಡುವಿನಮಠ ಕಾರ್ಯಕ್ರಮ ನಿರೂಪಿಸಿದರು. ಎಂ.ಎನ್. ಸಿದ್ದಪ್ಪನವರ ವಂದಿಸಿದರು.ಮೆರವಣಿಗೆ:ಕಾರ್ಯಕ್ರಮಕ್ಕೂ ಮೊದಲು ನಗರದ ಪುರಸಿದ್ದೇಶ್ವರ ದೇವಸ್ಥಾನ ಆವರಣದಿಂದ ಡಿ. ದೇವರಾಜ ಅರಸುರವರ ಭಾವಚಿತ್ರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅವರು ಚಾಲನೆ ನೀಡಿದರು.

Share this article