ಕನ್ನಡಪ್ರಭ ವಾರ್ತೆ ಹುಣಸೂರು
ಡಿ. 13 ರಿಂದ 15ರವರೆಗೆ ಹುಣಸೂರಿನಲ್ಲಿ ಆಯೋಜನೆಗೊಂಡಿರುವ ಹನುಮ ಜಯಂತಿ ಆಚರಣೆ ಹಿನ್ನೆಲೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ಆಯೋಜಿಸಿದ್ದ ನಾಗರಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲ ಸಮಾಜಗಳಲ್ಲೂ ಯುವ ಸಮೂಹ ಕೆಲವೊಂದು ಅತಿರೇಕಗಳನ್ನು ಮಾಡುವುದು ಸಹಜ. ಅದನ್ನು ನಿಯಂತ್ರಿಸುವ ಜವಾಬ್ದಾರಿ ಆಯಾ ಸಮುದಾಯಗಳ ಹಿರಿಯರ ಮೇಲಿದೆ. ಪೊಲೀಸ್ ಇಲಾಖೆ ನೀಡಿರುವ ಸೂಚನೆಗಳನ್ನು ಯುವಕರಿಗೆ ತಲುಪಿಸಿ ಅದನ್ನು ಪಾಲಿಸುವಂತೆ ತಾಕೀತು ಮಾಡುವ ಕಾರ್ಯವನ್ನು ನಡೆಸಿರಿ. ಇದನ್ನು ಎರಡೂ ಕಡೆಯ ಹಿರಿಯರು ಮಾಡಬೇಕು ಎಂದರು.ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವ ಫೇಕ್ ಪೋಸ್ಟ್ಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಸಮುದಾನಗಳ ನಡುವಿನ ಸಾಮರಸ್ಯ ಕಾಪಾಡುವತ್ತ ಹೆಚ್ಚಿನ ಗಮನನೀಡಬೇಕು. ಸಾಮಾಜಿಕ ಜಾಲತಾಣಗಳು ಇಂದು ಸಮಾಜದ ಸ್ವಾಸ್ಥ್ಯ ಕೆಡಿಸುವಲ್ಲಿ ಸಾಕಷ್ಟು ಪ್ರಭಾವ ಬೀರುತ್ತಿದೆ. ಜಾಲತಾಣಗಲ್ಲಿ ಹರಿಯಬಿಡುವ ಪೋಸ್ಟ್ ಗಳ ಸತ್ಯಾಸತ್ಯತೆಯನ್ನು ಸಮೀಪದ ಪೊಲೀಸ್ ಠಾಣೆ ಅಥವಾ ಬೀಟ್ ಪೊಲೀಸರ ಬಳಿ ವಿಚಾರಿಸಿ ಮುಂದುವರೆಯಿರಿ. ಯಾವುದೇ ಕಾರಣಕ್ಕೂ ಕಾನೂನನ್ನು ಉಲ್ಲಂಘಿಸುವ ಕಾರ್ಯಕ್ಕೆ ಹೋಗಬೇಡಿ. ಇಂತಹ ಜಯಂತಿಗಳ ಆಚರಣೆ ವೇಳೆ ಸಾಮಾಜಿಕ ಸೌಹಾರ್ದತೆ ಹಾಳು ಮಾಡಲು ಕಿಡಿಗೇಡಿಗಳು ಮಾಡುವ ತಪ್ಪು ಕೆಲಸಕ್ಕೆ ಮಾನ್ಯತೆ ನೀಡಬೇಡಿರಿ. ಹುಣಸೂರಿನಲ್ಲಿ ಈ ಹಿಂದೆ ಹನುಮ ಜಯಂತಿ ಸಂದರ್ಭದಲ್ಲಿ ಆದ ಕಹಿ ಘಟನೆ ಮತ್ತೆ ಮರುಕಳಿಸಬಾರದೆಂಬ ಸದುದ್ದೇಶದಿಂದ ಮಾತ್ರ ಪೊಲೀಸ್ ಬಿಗಿ ಬಂದೋಬಸ್ತ್ ಆಯೋಜಿಸಲಾಗುತ್ತಿದೆ ಎಂದರು.
ತಹಸೀಲ್ದಾರ್ ಜೆ. ಮಂಜುನಾಥ್ ಮಾತನಾಡಿ, ಪ್ರತಿಯೊಬ್ಬರೂ ಸಂವಿಧಾನವನ್ನು ಅರ್ಥೈಸಿಕೊಂಡು ನಡೆದುಕೊಂಡಲ್ಲಿ ವ್ಯತ್ಯಾಸಗಳಿಗೆ ಅವಕಾಶವೇ ಇರುವುದಿಲ್ಲ. ಸಂವಿಧಾನ ಎಲ್ಲರಿಗೂ ಸಮಾನ ಹಕ್ಕನ್ನು ನೀಡಿದ್ದು, ನಾವೆಲ್ಲರೂ ಅದನ್ನು ಗೌರವಿಸಿ ನಡೆದುಕೊಳ್ಳೋಣವೆಂದರು.
ಮುಖಂಡ ಮಯೂರ ಮಾತನಾಡಿ, ಪಟ್ಟಣ ವ್ಯಾಪ್ತಿಯ ಆಯಾ ವಾರ್ಡ್ಗಳ ನಗರಸಭಾ ಸದಸ್ಯರು ತಮ್ಮ ವಾರ್ಡ್ಗಳಲ್ಲಿ ಮೇಲುಸ್ತುವಾರಿ ನೋಡಿಕೊಂಡರೆ ಕಾರ್ಯಕ್ರಮ ಶಾಂತಿಯುತವಾಗಿ ಸಂಪನ್ನಗೊಳ್ಳಲು ಸಾಧ್ಯವಿದ್ದು, ಎಲ್ಲರೂ ಸಹಕರಿಸಲು ಕೋರಿದರು.
ಸಭೆಯಲ್ಲಿ ಡಿವೈಎಸ್ಪಿ ಗೋಪಾಲಕೃಷ್ಣ, ಅಬಕಾರಿ ಡಿವೈಎಸ್ಪಿ ಮೋಹನ್ ಕುಮಾರ್, ನಗರಸಭೆ ಪೌರಾಯುಕ್ತೆ ಕೆ. ಮಾನಸ, ನಗರಠಾಣೆ ಸಿಐ ಸಂತೋಷ್ ಕಶ್ಯಪ್, ನಗರಸಭಾ ಸದಸ್ಯರಾದ ದೇವರಾಜ್, ಶ್ರೀನಾಥ್, ರಮೇಶ್, ಯೂನೂಸ್ ಖಾನ್, ಮುಖಂಡರಾದ ವರದರಾಜು ಪಿಳ್ಳೆ, ಸಚ್ಚಿನ್ ಬಾಗಲ್, ಅನಿಲ್ ಕುಮಾರ್, ಸುನಿಲ್, ಚಂದ್ರಶೇಖರ್, ಚಿಕ್ಕಹುಣಸೂರು ಗೋವಿಂದೇಗೌಡ, ಫಿರ್ದೋಸ್, ಅಯೂಬ್ ಖಾನ್, ಇಮ್ರಾನ್, ಸಿರಾಜ್, ರಿಜ್ವಾನ್ ಇದ್ದರು.