ಅಭಿವೃದ್ಧಿಯಲ್ಲಿ ಹಿಂದುಳಿದ ಡಿ.ಹೊಸಳ್ಳಿ ಗ್ರಾಮ

KannadaprabhaNewsNetwork | Published : Oct 23, 2024 12:34 AM

ಸಾರಾಂಶ

ಇಲ್ಲಿರುವ ಬಹುಪಾಲು ಮಂದಿ ಕೂಲಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡಿಕೊಂಡಿರುವವರೇ ಆಗಿದ್ದಾರೆ. ಇಲ್ಲಿಯ ಜನರು ತಮಗೆ ಅಗತ್ಯಕ್ಕೆ ತಕ್ಕಂತೆ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ ಇಲ್ಲಿಯ ಅಮ್ಮಸಂದ್ರ ಗ್ರಾಮ ಪಂಚಾಯ್ತಿ ಯಾವುದೇ ಮೂಲಭೂತ ಸೌಲಭ್ಯಗಳನ್ನು ನೀಡದೇ ವಂಚಿಸಿದೆ.

ಎಸ್.ನಾಗಭೂಷಣ

ಕನ್ನಡಪ್ರಭ ವಾರ್ತೆ ತುರುವೇಕೆರೆ

ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳು ಕಳೆದರೂ ಸಹ ನಮ್ಮೂರಿಗೆ ಇನ್ನೂ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿವೆ. ನಮ್ಮೂರಲ್ಲಿ ಚರಂಡಿ ಇಲ್ಲ, ರಸ್ತೆ ಇಲ್ಲ, ಸರಿಯಾಗಿ ವಿದ್ಯುತ್ ಪೂರೈಕೆ ಇಲ್ಲ, ಮನೆಗಳಿಗೆ ನೀರಿನ ಸೌಕರ್ಯವಿಲ್ಲ. ಹಾಗಾಗಿ ನಾವು ಗ್ರಾಮ ಪಂಚಾಯ್ತಿಗೆ ಮುಂಬರುವ ದಿನಗಳಲ್ಲಿ ತೆರಿಗೆ (ಕರ) ಕಟ್ಟುವುದಿಲ್ಲ ಎಂದು ತಾಲೂಕಿನ ದಂಡಿನಶಿವರ ಬಳಿ ಇರುವ ಡಿ.ಹೊಸಳ್ಳಿ ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಡಿ.ಹೊಸಳ್ಳಿ ಗ್ರಾಮದಲ್ಲಿ ಸುಮಾರು ನೂರೈವತ್ತಕ್ಕೂ ಹೆಚ್ಚು ಮನೆಗಳಿವೆ. ಕಳೆದ ಹತ್ತಾರು ವರ್ಷಗಳ ಹಿಂದೆಯೇ ತಾಲೂಕು ಆಡಳಿತದ ವತಿಯಿಂದ ಇಲ್ಲಿಯ ನಿವಾಸಿಗಳಿಗೆ ಮನೆ ಕಟ್ಟಿಕೊಳ್ಳಲು ನಿವೇಶನ ನೀಡಲಾಗಿದೆ. ಅಲ್ಲದೇ ಮನೆ ನಿರ್ಮಾಣಕ್ಕೆಂದು ಸಹಾಯ ಧನವನ್ನೂ ಸಹ ನೀಡಲಾಗಿದೆ.

ಇಲ್ಲಿರುವ ಬಹುಪಾಲು ಮಂದಿ ಕೂಲಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡಿಕೊಂಡಿರುವವರೇ ಆಗಿದ್ದಾರೆ. ಇಲ್ಲಿಯ ಜನರು ತಮಗೆ ಅಗತ್ಯಕ್ಕೆ ತಕ್ಕಂತೆ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ ಇಲ್ಲಿಯ ಅಮ್ಮಸಂದ್ರ ಗ್ರಾಮ ಪಂಚಾಯ್ತಿ ಯಾವುದೇ ಮೂಲಭೂತ ಸೌಲಭ್ಯಗಳನ್ನು ನೀಡದೇ ವಂಚಿಸಿದೆ.

ಗ್ರಾಮದ ತುಂಬೆಲ್ಲಾ ಗದ್ದೆಯಂತಿರುವ ರಸ್ತೆಗಳು, ಚರಂಡಿ ಎಂಬುದು ಇಲ್ಲವೇ ಇಲ್ಲ. ಸರ್ಕಾರಿ ಶಾಲೆ ಇದೆ. ಆದರೆ ಅದರ ಮುಂಭಾಗ ಸಂಪೂರ್ಣ ಕೊಚ್ಚೆಯಿಂದ ಕೂಡಿದ ಜಾಗವಿದೆ. ಮಕ್ಕಳು ಶಾಲೆಗೆ ಬರಲೂ ಆಗದ ಸ್ಥಿತಿ ಇದೆ. ಜನರು ಕಷ್ಟವೋ, ಸುಖವೋ ಮನೆಯನ್ನು ಕಟ್ಟಿಕೊಂಡಿದ್ದಾರೆ. ಆದರೆ ಈ ಮನೆಗಳಿಗೆ ಇ- ಸ್ವತ್ತು ಮಾಡಲು ಸಾಧ್ಯವಿಲ್ಲ ಎಂದು ಗ್ರಾಪಂ ಅಧಿಕಾರಿಗಳು ತಿಳಿಸಿದ್ದಾರೆ. ಕಾರಣ ಇಲ್ಲಿ ವಾಸಿಸುತ್ತಿರುವ ಮನೆಗಳು ಗೋಮಾಳದಲ್ಲಿದೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ಈ ಜಾಗಗಳನ್ನು ಕೊಟ್ಟಿರುವವರು ಅದೇ ಗ್ರಾಮ ಪಂಚಾಯ್ತಿಯವರು. ಮನೆ ಕಟ್ಟಲು ಸಹಾಯ ಧನ ನೀಡಿರುವವರೂ ಸಹ ಗ್ರಾಮ ಪಂಚಾಯ್ತಿಯವರೇ. ಈಗ ಮನೆಗಳಿಗೆ ಇ- ಸ್ವತ್ತು ಅಥವಾ ಹಕ್ಕು ಪತ್ರ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಿರುವುದು ಎಷ್ಟು ಸರಿ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ಇಲ್ಲಿಯ ನಿವಾಸಿಗಳ ಮನೆಗಳಿಗೆ ತೆರಳಲು ರಸ್ತೆಯೇ ಇಲ್ಲ. ಇವರು ಕೊಚ್ಚೆಯಲ್ಲೇ ನಡೆದುಕೊಂಡು ಹೋಗಬೇಕಿದೆ. ಸರಿಯಾದ ವಿದ್ಯುತ್ ಸೌಕರ್ಯವಿಲ್ಲ. ಗ್ರಾಮದ ತುಂಬಾ ಗಿಡ- ಗಂಟೆಗಳು ಆಳೆತ್ತರಕ್ಕೆ ಬೆಳೆದು ನಿಂತಿವೆ. ವಿಷಜಂತುಗಳ ಕಾಟದಲ್ಲಿ ದಿನವಿಡೀ ಕಾಲ ಕಳೆಯುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ದೀಪದ ಕೆಳಗೆ ಕತ್ತಲು: ತಾಲೂಕಿನಲ್ಲಿ ಇರುವ ಏಕೈಕ ಕೈಗಾರಿಕೆ ಎಂದರೆ ಅದು ಸಿಮೆಂಟ್ ಕಾರ್ಖಾನೆ. ಈ ಕಾರ್ಖಾನೆಗೆ ಸಮೀಪದಲ್ಲೇ ಈ ಗ್ರಾಮವೂ ಇದೆ. ಸಹಸ್ರಾರು ಕೋಟಿ ವ್ಯವಹರಿಸುವ ಈ ಕಾರ್ಖಾನೆಗೆ ಹಾಗೂ ಅಲ್ಲಿಯ ಕಾರ್ಮಿಕರಿಗೆ ಈ ಗ್ರಾಮದಿಂದಲೇ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಕಾರ್ಖಾನೆಯ ಸಿ ಎಸ್ ಆರ್ ಹಣದಲ್ಲಿ ಗ್ರಾಮವನ್ನು ಅಭಿವೃದ್ಧಿ ಮಾಡಬಹುದು. ಆದರೆ ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ಮತ್ತು ಸದಸ್ಯರಿಗೆ ಇಚ್ಛಾಶಕ್ತಿಯ ಕೊರತೆ ಇರುವುದರಿಂದ ಇದು ಸಾಧ್ಯವಾಗಿಲ್ಲ.

ಗ್ರಾಮಸ್ಥರ ಆಕ್ರೋಶ:

ಡಿ.ಹೊಸಳ್ಳಿ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳನ್ನು ಪೂರೈಸಬೇಕೆಂದು ಆಗ್ರಹಿಸಿ ಅಮ್ಮಸಂದ್ರ ಗ್ರಾಮ ಪಂಚಾಯ್ತಿಯ ಮುಂಭಾಗ ಪಂಚಾಯ್ತಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು. ಇದಕ್ಕೂ ಬಗ್ಗದಿದ್ದಲ್ಲಿ ರಸ್ತೆ ತಡೆ ಮಾಡುವ ಮೂಲಕ ತಾಲೂಕು ಆಡಳಿತದ ಗಮನಕ್ಕೆ ತರಲಾಗುವುದು ಎಂದು ಡಿ.ಹೊಸಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೂಪರ್ ಸೀಡ್ ಗೆ ಒತ್ತಾಯ:

ಈ ಅಮ್ಮಸಂದ್ರ ಗ್ರಾಮ ಪಂಚಾಯ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿಲ್ಲ. ಇದೊಂದು ನಿಷ್ಪ್ರಯೋಜಕ ಪಂಚಾಯ್ತಿ ಆಗಿರುವುದರಿಂದ ಕೂಡಲೇ ಈ ಪಂಚಾಯ್ತಿಯನ್ನು ಸೂಪರ್ ಸೀಡ್ ಮಾಡಿ ಎಂದು ತಾವು ಜಿಲ್ಲಾ ಪಂಚಾಯ್ತಿಯ ಸಿಇಒ ರವರಿಗೆ ಮನವಿ ಮಾಡಿಕೊಂಡಿರುವುದಾಗಿ ಪಂಚಾಯ್ತಿಯ ಸದಸ್ಯ ಸಿದ್ದಗಂಗಯ್ಯ ತಿಳಿಸಿದ್ದಾರೆ.

ಗ್ರಾಮದ ಮುಖಂಡರಾದ ಯೋಗೀಶ್, ಕರಿಯಪ್ಪ, ಶಕೀಲಾಬಾನು, ಮಂಗಳಮ್ಮ, ಮಮತಾ, ವಿಶ್ವನಾಥ್, ಜೀನತ್ ಉನ್ನಿಸ್ಸಾ, ಮುನಿರಾಬಾನು ಸೇರಿದಂತೆ ಹಲವಾರು ಮಂದಿ ತಮಗಾಗುತ್ತಿರುವ ಸಮಸ್ಯೆಗಳನ್ನು ಮಾಧ್ಯಮದ ಮುಂದೆ ತೆರೆದಿಟ್ಟರು.

Share this article