ದ.ಕ. ಜಿಲ್ಲಾದ್ಯಂತ ಈದ್‌ ಮಿಲಾದ್‌ ಸಡಗರ

KannadaprabhaNewsNetwork | Published : Sep 17, 2024 12:49 AM

ಸಾರಾಂಶ

ವಿವಿಧೆಡೆ ಸಾರ್ವಜನಿಕವಾಗಿ ದಫ್‌, ಹಾಡುಗಳೊಂದಿಗೆ ಕಾಲ್ನಡಿಗೆ ಮತ್ತು ವಾಹನಗಳ ಮಿಲಾದ್‌ ರ್‍ಯಾಲಿ ಮೂಲಕ ಪ್ರವಾದಿ ಸಂದೇಶ ಜಾಥಾ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಪ್ರವಾದಿ ಮುಹಮ್ಮದ್‌ ಪೈಗಂಬರ್‌ (ಸ) ಅವರ ಜನ್ಮದಿನವನ್ನು (ಮಿಲಾದುನ್ನಬಿ) ಸೋಮವಾರ ದ.ಕ. ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಸಡಗರ, ಸಂಭ್ರಮದಿಂದ ಆಚರಿಸಿದರು.

ಮದ್ರಸ, ಮಸೀದಿಗಳಲ್ಲಿ ಮುಂಜಾನೆ ವಿಶೇಷ ಮಜ್ಲಿಸ್‌, ಧ್ವಜಾರೋಹಣ, ಬೆಳಗ್ಗೆ ಮತ್ತು ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮಗಳನ್ನು ನಡೆಸಿ ಪ್ರವಾದಿ ಜೀವನದ ಸಂದೇಶ ಸಾರಲಾಯಿತು. ವಿವಿಧೆಡೆ ಸಾರ್ವಜನಿಕವಾಗಿ ದಫ್‌, ಹಾಡುಗಳೊಂದಿಗೆ ಕಾಲ್ನಡಿಗೆ ಮತ್ತು ವಾಹನಗಳ ಮಿಲಾದ್‌ ರ್‍ಯಾಲಿ ಮೂಲಕ ಪ್ರವಾದಿ ಸಂದೇಶ ಜಾಥಾ ನಡೆಯಿತು. ರ್‍ಯಾಲಿಯಲ್ಲಿ ಪಾಲ್ಗೊಂಡ ಮದ್ರಸ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ಹಂಚಿ, ಪಾನೀಯ ವಿತರಿಸಲಾಯಿತು.ಮಧ್ಯಾಹ್ನ ಮಸೀದಿ ಮತ್ತು ಮದ್ರಸಗಳಲ್ಲಿ ಬಿರಿಯಾನಿ, ತುಪ್ಪದೂಟ, ರೊಟ್ಟಿಯೊಂದಿಗೆ ಮಾಂಸದ ಪದಾರ್ಥ ತಯಾರಿಸಿ ಹಂಚಲಾಯಿತು. ಮನೆ ಮನೆಗಳಲ್ಲೂ ವಿಶೇಷ ಅಡುಗೆ ಮಾಡಲಾಗಿತ್ತು. ಮಕ್ಕಳಲ್ಲದೆ ಯುವಕರು, ಹಿರಿಯರು ಕೂಡ ಮಿಲಾದುನ್ನಬಿ ರ್‍ಯಾಲಿಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಇಸ್ಲಾಮಿಕ್‌ ಕ್ಯಾಲೆಂಡರ್‌ನ ರಬೀಉಲ್‌ ಅವ್ವಲ್‌ ತಿಂಗಳಲ್ಲಿ ಸುನ್ನಿ ಮುಸ್ಲಿಮರು ಮಸೀದಿ ಮತ್ತು ಮನೆಗಳಲ್ಲಿ ಪ್ರವಾದಿ ಗುಣಗಾನದ ಮೌಲಿದ್‌ ಪಾರಾಯಣ ಮಾಡುತ್ತಾರೆ. ಮದ್ರಸಗಳ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಾರೆ. ವಿಶೇಷವಾಗಿ ಪ್ರವಾದಿ ಪ್ರೇಮ ಬಿಂಬಿಸುವ ಹಾಡು, ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಗುತ್ತಿದೆ. ತಿಂಗಳಿಡೀ ಈ ಕಾರ್ಯಕ್ರಮ ನಡೆದರೂ ರಬೀಉಲ್‌ ಅವ್ವಲ್‌ ತಿಂಗಳ 12ರಂದು ವಿಶೇಷ ಕಾರ್ಯಕ್ರಮ ನಡೆಯಲಿದೆ.

--------ವಿವಾದದ ನಡುವೆ ಭಾವೈಕ್ಯತೆ ಸಾರಿದ ಹಿಂದೂಗಳು

ಜಿಲ್ಲೆಯ ಕೆಲವೆಡೆ ಕೋಮು ಸಾಮರಸ್ಯ ಕೆಡಿಸುವ ಕಹಿ ವಾತಾವರಣದ ಮಧ್ಯೆಯೂ ಹಬ್ಬದಾಚರಣೆ ಸಂಭ್ರಮದಿಂದ ನಡೆಯಿತು. ಹಿಂದೂ, ಮುಸ್ಲಿಂ, ಕ್ರೈಸ್ತರ ಮಧ್ಯೆ ಸೌಹಾರ್ದತೆಯ ಘಟನೆಗಳಿಗೆ ಈ ಬಾರಿಯೂ ಈದ್‌ ಮಿಲಾದ್‌ ಸಾಕ್ಷಿಯಾಯಿತು. ಬಿ.ಸಿ. ರೋಡ್‌ನಲ್ಲಿ ವಿವಾದದ ನಡುವೆಯೂ ಮಿಲಾದುನ್ನಬಿಯಲ್ಲಿ ಸಾಗಿಬಂದ ಮುಸ್ಲಿಮರಿಗೆ ಈ ಬಾರಿಯೂ ಹಿಂದೂಗಳು ಸಿಹಿ ಹಂಚಿ ಸೌಹಾರ್ದತೆ ಮೆರೆದರು. ಈ ವಿಡಿಯೊ ಜಾಲತಾಣದಲ್ಲಿ ವೈರಲ್‌ ಆಗಿದೆ.

Share this article