ಡಿ.ಕೆ.ಶಿವಕುಮಾರ್ ಹಠದಿಂದ ರಾಮನಗರಕ್ಕೆ ಬೆಂಗಳೂರು ದಕ್ಷಿಣ ಪಟ್ಟ

KannadaprabhaNewsNetwork | Updated : May 23 2025, 12:07 PM IST
ರಾಮನಗರ ಜಿಲ್ಲೆಗೆ ಬೆಂಗಳೂರು ಬ್ರ್ಯಾಂಡ್ ವ್ಯಾಲ್ಯೂ ತಂದುಕೊಡುವ ನಿಟ್ಟಿನಲ್ಲಿ ‘ಬೆಂಗಳೂರು ದಕ್ಷಿಣ ಜಿಲ್ಲೆ’ ಎಂದು ಮರುನಾಮಕರಣ ಮಾಡಲು ಡಿ.ಕೆ.ಶಿವಕುಮಾರ್ ಸಾಕಷ್ಟು ಪ್ರಯತ್ನ ನಡೆಸಿದ್ದರು.
Follow Us

ಎಂ.ಅಫ್ರೋಜ್ ಖಾನ್

 ರಾಮನಗರ : ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣಕ್ಕೆ ರಾಜ್ಯ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳುವಂತೆ ಮಾಡುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಠ ಸಾಧಿಸಿ ಗೆದ್ದಿದ್ದಾರೆ.

ರಾಮನಗರ ಜಿಲ್ಲೆಗೆ ಬೆಂಗಳೂರು ಬ್ರ್ಯಾಂಡ್ ವ್ಯಾಲ್ಯೂ ತಂದುಕೊಡುವ ನಿಟ್ಟಿನಲ್ಲಿ ‘ಬೆಂಗಳೂರು ದಕ್ಷಿಣ ಜಿಲ್ಲೆ’ ಎಂದು ಮರುನಾಮಕರಣ ಮಾಡಲು ಡಿ.ಕೆ.ಶಿವಕುಮಾರ್ ಸಾಕಷ್ಟು ಪ್ರಯತ್ನ ನಡೆಸಿದ್ದರು. ಜೆಡಿಎಸ್ - ಬಿಜೆಪಿ ಮಿತ್ರಪಕ್ಷಗಳ ನಾಯಕರ ತೀವ್ರ ವಿರೋಧ ಹಾಗೂ ಕಾನೂನು ತೊಡಕುಗಳೆಲ್ಲವನ್ನೂ ನಿವಾರಿಸಿ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ರಾಮನಗರ ಜಿಲ್ಲೆಯ ಹೆಸರು ಬದಲಾಯಿಸುವ ಬಗ್ಗೆ ನಿರ್ಧಾರ ಮಾಡಲಾಗಿದೆ. ರಾಮನಗರ ಜಿಲ್ಲಾ ಕೇಂದ್ರವಾಗಿಯೇ ಇರಲಿದೆ. ಜಿಲ್ಲೆ ಹೆಸರು ‘ರಾಮನಗರ’ ಬದಲಿಗೆ ’ಬೆಂಗಳೂರು ದಕ್ಷಿಣ ಜಿಲ್ಲೆ’ ಎಂದು ಬದಲಾವಣೆಗೊಳ್ಳಲಿದ್ದು, ಅಧಿಕೃತವಾಗಿ ಅಧಿಸೂಚನೆ ಹೊರ ಬೀಳುವುದಷ್ಟೇ ಬಾಕಿಯಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ವಿಭಜನೆಯಾಗಿ ರಾಮನಗರ ಜಿಲ್ಲೆ 2007ರಲ್ಲಿ ಅಸ್ತಿತ್ವಕ್ಕೆ ಬಂದಿತು. ಆಗಿನಿಂದಲೂ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದ್ದರು. ಸಭೆ ಸಮಾರಂಭಗಳಲ್ಲಿ ರಾಮನಗರ ಜಿಲ್ಲೆ ಅಂತ ಹೆಸರು ಹೇಳಲು ಹಿಂದೇಟು ಹಾಕುತ್ತಿದ್ದರು. ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಇಡಬೇಕಿತ್ತು ಎಂದು ಇಂಗಿತ ವ್ಯಕ್ತಪಡಿಸುತ್ತಿದ್ದರು.

ಕಳೆದ 2024ರ ಜುಲೈ ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಹಾರೋಹಳ್ಳಿ ತಾಲೂಕುಗಳ ಭವಿಷ್ಯ ಹಾಗೂ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ರಾಮನಗರ ಜಿಲ್ಲೆಯನ್ನು ‘ಬೆಂಗಳೂರು ದಕ್ಷಿಣ ಜಿಲ್ಲೆ’ ಎಂದು ಮರು ನಾಮಕರಣ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಆಗ ರಾಜ್ಯ ಸಂಪುಟ ಸಭೆ ಪ್ರಸ್ತಾವನೆಗೆ ಅನುಮೋದನೆ ನೀಡಿ ಕೇಂದ್ರ ಗೃಹ ಇಲಾಖೆಗೆ ಕಳುಹಿಸಿತ್ತು. ಕೇಂದ್ರ ಗೃಹ ಇಲಾಖೆ ಕರ್ನಾಟಕ ಸಚಿವ ಸಂಪುಟದ ಪ್ರಸ್ತಾವನೆಗೆ ಪ್ರತಿಕ್ರಿಯೆ ನೀಡಿ, ರಾಮನಗರ ಜಿಲ್ಲೆಯ ಮರುನಾಮಕರಣ ಸಾಧ್ಯವಿಲ್ಲ ಎಂದು ಹೇಳಿ ತಿರಸ್ಕರಿಸಿ ಡಿ.ಕೆ.ಶಿವಕುಮಾರ್ ಕನಸನ್ನು ಭಗ್ನಗೊಳಿಸಿತ್ತು.

ಇಷ್ಟಕ್ಕೆ ಸುಮ್ಮನಾಗದ ಡಿ.ಕೆ.ಶಿವಕುಮಾರ್ ಕಾನೂನು ಚೌಕಟ್ಟನ್ನು ಗಮನದಲ್ಲಿಟ್ಟುಕೊಂಡು, ಹೆಸರು ಬದಲಾವಣೆಗೆ ಪ್ರಯತ್ನ ಮುಂದುವರೆಸಿದ್ದರು. ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ಕೇಂದ್ರಕ್ಕೆ ಯಾವುದೇ ಅಧಿಕಾರ‌ ಇಲ್ಲ. ಕೇಂದ್ರದ‌ ಗಮನಕ್ಕೆ ತರಬೇಕಿತ್ತು, ಹಾಗಾಗಿ ಹೆಸರನ್ನು ಕಳುಹಿಸಿಕೊಟ್ಟಿದ್ದೆವು ಅಷ್ಟೇ. ವಿಶ್ವದಲ್ಲೇ ಬೆಂಗಳೂರು ದಕ್ಷಿಣ ದೊಡ್ಡದಾಗಿ ಬೆಳೆಯುತ್ತಿದೆ. ಕಾನೂನು ಚೌಕಟ್ಟನ್ನು ಗಮನದಲ್ಲಿಟ್ಟುಕೊಂಡು ಹೆಸರು ಬದಲಾವಣೆ ಮಾಡಿದ್ದೇವೆ. ಜಿಲ್ಲಾ ಕೇಂದ್ರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈಗ ಹೇಗಿದೆಯೋ ಹಾಗೆಯೇ ಇರಲಿದೆ ಎಂದು ಎಂದು ಹೇಳುತ್ತಲೇ ಬಂದಿದ್ದರು.

ಈಗ ಡಿ.ಕೆ.ಶಿವಕುಮಾರ್ ಸರ್ಕಾರದ ಮೇಲೆ ಒತ್ತಡ ಹೇರಿ ಸಚಿವ ಸಂಪುಟದಲ್ಲಿ 2ನೇ ಬಾರಿ ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಮರುನಾಮಕರಣ ತೀರ್ಮಾನ ಕೈಗೊಳ್ಳುವಂತೆ ಮಾಡಿದ್ದಾರೆ. ಅಧಿಕೃತವಾಗಿ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಅಧಿಸೂಚನೆ ಹೊರ ಬೀಳುವುದನ್ನೇ ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಅಲಹಾಬಾದ್‌ ಪ್ರಕರಣ ಉಲ್ಲೇಖಿಸುವ ಸಾಧ್ಯತೆ?

1953ರಲ್ಲಿ ಗೃಹ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ಗ್ರಾಮಗಳು, ಪಟ್ಟಣಗಳು ​​ಅಥವಾ ನಗರಗಳು ಮತ್ತು ರೈಲ್ವೆ ನಿಲ್ದಾಣಗಳ ಹೆಸರುಗಳನ್ನು ಬದಲಾಯಿಸಲು, ರಾಜ್ಯ ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಬೇಕಿದೆ. ಬಳಿಕ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಲು ರಾಜ್ಯ ಸರ್ಕಾರಕ್ಕೆ ನಿರಕ್ಷೇಪಣಾ ಪ್ರಮಾಣ ಪತ್ರ ನೀಡಬಹುದು. ಆದಾಗ್ಯೂ, ನಗರಗಳು, ಗ್ರಾಮಗಳು ಮತ್ತು ಜಿಲ್ಲೆಗಳ ಹೆಸರುಗಳನ್ನು ಬದಲಾಯಿಸುವುದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ಅಧಿಕೃತ ಮೂಲಗಳು ತಿಳಿಸಿವೆ.

2018ರಲ್ಲಿ ಉತ್ತರ ಪ್ರದೇಶ ಸರ್ಕಾರ ಅಲಹಾಬಾದ್ ಅನ್ನು ಪ್ರಯಾಗ್‌ರಾಜ್ ಎಂದು ಮರು ನಾಮಕರಣ ಮಾಡಿತು. ನಂತರ ನ್ಯಾಯಾಲಯ ಕೂಡ ಸರ್ಕಾರವನ್ನು ಬೆಂಬಲಿಸಿತ್ತು. ಈ ವೇಳೆ ಇದು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಷಯ ಎಂದು ಉಲ್ಲೇಖಿಸಿತ್ತು.

ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ ನಂತರ, ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಅಧಿಸೂಚನೆ ಹೊರಡಿಸಲಿದೆ. ರಾಮನಗರ ತಾಲೂಕನ್ನು ಜಿಲ್ಲಾ ಕೇಂದ್ರವಾಗಿ ಮರುನಾಮಕರಣ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯೆ ನೀಡಿದರು.

ಎಚ್ಡಿಕೆ ನಡೆಯತ್ತ ಎಲ್ಲರ ಚಿತ್ತ:

ರಾಮನಗರ ಜಿಲ್ಲೆಯನ್ನು ಎಚ್‌.ಡಿ.ಕುಮಾರಸ್ವಾಮಿ ಘೋಷಿಸಿದ್ದರು. ಈಗ ಬೆಂಗಳೂರು ದಕ್ಷಿಣ ಹೆಸರು ಮುಂದಿಟ್ಟಿರುವುದು ಡಿ.ಕೆ.ಶಿವಕುಮಾರ್‌. ಹೆಸರು ಬದಲಾವಣೆ ವಿಚಾರ ಮುನ್ನೆಲೆಗೆ ಬಂದಾಗ ಎಚ್‌.ಡಿ.ಕುಮಾರಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿಂದೆ ಕೇಂದ್ರದಲ್ಲಿ ಕುಮಾರಸ್ವಾಮಿ ತಮ್ಮ ಪ್ರಭಾವ ಬಳಿಸಿ ಕೇಂದ್ರದ ಗೃಹ ಇಲಾಖೆ ಮರು ನಾಮಕರಣಕ್ಕೆ ಬ್ರೇಕ್‌ ಹಾಕಿತ್ತು ಎಂದು ರಾಜ್ಯ ಕಾಂಗ್ರೆಸ್‌ ಆರೋಪಿಸಿತ್ತು. ಹೀಗಿದ್ದರೂ, 2ನೇ ಬಾರಿ ರಾಜ್ಯ ಸಚಿವ ಸಂಪುಟದಲ್ಲಿ ಮರು ನಾಮಕರಣದ ನಿರ್ಧಾರ ಕೈಗೊಳ್ಳಲಾಗಿದೆ. ಇದೀಗ ಕುಮಾರಸ್ವಾಮಿ ನಡೆ ಏನಾಗಿರಬಹುದು ಎಂಬುದು ಕುತೂಹಲ ಮೂಡಿಸಿದೆ.

Read more Articles on