ಹೈನುಗಾರಿಕೆ ಮಾಡಲು ಬದ್ಧತೆ ಬೇಕು, ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭಿವೃದ್ಧಿಗೆ ಸಿಬ್ಬಂದಿ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು.
ಹೋಬಳಿಯ ಚಿಕ್ಕನಹಳ್ಳಿ ಬಳಿಯಿರುವ ವಿಜಯಪುರ ಹಾಲು ಶೀಥಲೀಕರಣ ಕೇಂದ್ರಕ್ಕೆ ಭೇಟಿ ನೀಡಿ ಡೈರಿ ಅಧ್ಯಕ್ಷರೊಂದಿಗೆ ಮಾಹಿತಿ ಪಡೆದು ಮಾತನಾಡಿದ ಅವರು, ಹೈನೋದ್ಯಮ ಉಳಿಸುವುದು, ಉತ್ತುಂಗಕ್ಕೆ ತರುವುದು, ನಿಮ್ಮೆಲ್ಲರ ಕೈಯಲ್ಲಿದೆ. ಗುಣಮಟ್ಟದ ಉತ್ಪನ್ನಗಳು ಸಿಗಬೇಕಾದರೆ, ಹಾಲು ಉತ್ಪಾದಕರು, ಗುಣಮಟ್ಟದ ಹಾಲು ಉತ್ಪಾದನೆ ಮಾಡಬೇಕಿದೆ. ಹಳ್ಳಿಯ ಮಟ್ಟದಲ್ಲಿ ಗುಣಮಟ್ಟದ ಹಾಲು ಉತ್ಪಾದನೆಯಾದರೆ ಮಾತ್ರವೇ ಒಕ್ಕೂಟ ಉಳಿವಿಗೆ ಸಾಧ್ಯ. ಪ್ರತಿಯೊಂದು ಮನೆಯಲ್ಲಿ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನ ಬಳಸುವಂತಾಗಬೇಕು ಎಂದರು.ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಭೂಮಿ ಬೆಲೆ ಜಾಸ್ತಿಯಾಗುತ್ತಿರುವುದರಿಂದ ಹೈನುಗಾರಿಕೆ ಕುಂಠಿತವಾಗುತ್ತಿದೆ. ೨೫ ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡಿದರೆ ಮಾರುಕಟ್ಟೆ ಸೌಲಭ್ಯ ಒದಗಿಸಿಕೊಡಲಾಗುತ್ತದೆ. ನೆರೆ ರಾಜ್ಯಗಳಿಂದ ಬರುವ ಹಾಲಿಗೆ ಹೆಚ್ಚು ಬೇಡಿಕೆ ಕಾಣಿಸುತ್ತಿದ್ದು, ನಮ್ಮ ರಾಜ್ಯದ ಹಾಲನ್ನೇ ಹೆಚ್ಚು ಮಾರಾಟ ಮಾಡಬೇಕು. ಡಿ.ಕೆ.ಸುರೇಶ್ ಅಧ್ಯಕ್ಷರಾಗುತ್ತಾರೆಂಬ ಉದ್ದೇಶದಿಂದಲೇ ಬಮೂಲ್‌ನಲ್ಲಿ ಹೆಚ್ಚು ಕಾಂಗ್ರೆಸ್ ನಿರ್ದೇಶಕರು ಆಯ್ಕೆಯಾಗಲು ಸಾಧ್ಯವಾಗಿದೆ. ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹಧನ ದೊರೆಯುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಾತನಾಡಿ, ಕ್ಷೀರ ಕ್ಷೇತ್ರದಲ್ಲಿ ಒಂದು ಬದಲಾವಣೆ ತರಲು ನಾವೆಲ್ಲರೂ ತವಕಿಸುತ್ತಿದ್ದೇವೆ. ಕನಕಪುರದಲ್ಲಿ ೧೫೦೦ ಕೋಟಿ ವೆಚ್ಚದಲ್ಲಿ ಮೆಗಾ ಡೈರಿಯನ್ನು ನಿರ್ಮಾಣ ಮಾಡಲಾಗಿದೆ. ಈ ಮೂಲಕ ಹೈನೋದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ ಎಂದು ಹೇಳಿದರು.ಈ ವೇಳೆ ಬಮೂಲ್ ನಿರ್ದೇಶಕ ಎಸ್.ಪಿ.ಮುನಿರಾಜು, ಬಯಪಾ ಅಧ್ಯಕ್ಷ ಶಾಂತಕುಮಾರ್, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ.ಮಂಜುನಾಥ್, ಪ್ರಸನ್ನಕುಮಾರ್, ಎಸ್.ಆರ್.ರವಿಕುಮಾರ್, ನಾಗೇಗೌಡ, ಜಗನ್ನಾಥ್, ಸತೀಶ್ ಗೌಡ, ಕೊಮ್ಮಸಂದ್ರ ಸುರೇಶ್, ಪುರ ಕೃಷ್ಣಪ್ಪ, ಚಿಕ್ಕನಹಳ್ಳಿ ವೆಂಕಟೇಶಪ್ಪ ಮುಂತಾದವರು ಹಾಜರಿದ್ದರು.