ಘಾಟಿ ರಸ್ತೆಯಲ್ಲಿ ಪ್ರಯಾಣಿಕರಿಗೆ ನಿತ್ಯ ಸುಂಕ ಕಿರಿಕಿರಿ

KannadaprabhaNewsNetwork |  
Published : May 21, 2026, 01:30 AM IST
ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ರಸ್ತೆಯಲ್ಲಿ ಸುಂಕ ವಸೂಲಿ ಮಾಡುತ್ತಿರುವುದು. | Kannada Prabha

ಸಾರಾಂಶ

ಘಾಟಿ ರಸ್ತೆ ಸಾರ್ವಜನಿಕರ ಸಂಚಾರಕ್ಕೆ ಇರುವ ಪ್ರಮುಖ ಮಾರ್ಗ. ದೇವಸ್ಥಾನಕ್ಕೆ ಭೇಟಿ ನೀಡದ ಸಾಮಾನ್ಯ ವಾಹನ ಸವಾರರಿಗೂ ರಸ್ತೆ ಮಧ್ಯದಲ್ಲೇ ಸುಂಕ ವಸೂಲಿ ಮಾಡುವುದು ಸರಿಯಲ್ಲ. ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ರೀತಿಯ ಅನಧಿಕೃತ ವಸೂಲಿ ತಕ್ಷಣ ನಿಲ್ಲಬೇಕು. ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ಪಾರದರ್ಶಕ ವ್ಯವಸ್ಥೆ ಜಾರಿಗೆ ತರಬೇಕು .

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ತಾಲೂಕಿನ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಸಂಪರ್ಕ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ನಿತ್ಯ ಸುಂಕದ ಕಿರಿಕಿರಿ ಎದುರಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ದೇವಸ್ಥಾನಕ್ಕೆ ಭೇಟಿ ನೀಡದ ಸಾಮಾನ್ಯ ಪ್ರಯಾಣಿಕರ ವಾಹನಗಳಿಗೂ ಪಾರ್ಕಿಂಗ್ ಶುಲ್ಕದ ಹೆಸರಿನಲ್ಲಿ ರಸ್ತೆ ಮಧ್ಯದಲ್ಲೇ ಹಣ ವಸೂಲಿ ಮಾಡಲಾಗುತ್ತಿದೆ ಎಂದು ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಘಾಟಿ ಮಾರ್ಗವು ಸುತ್ತಮುತ್ತಲಿನ ಗ್ರಾಮಗಳು, ಕೃಷಿ ಜಮೀನುಗಳು ಹಾಗೂ ಗೌರಿಬಿದನೂರು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಸಂಪರ್ಕ ರಸ್ತೆ ಆಗಿದ್ದು, ಪ್ರತಿದಿನ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಆದರೆ ದೇವಸ್ಥಾನ ಪಾರ್ಕಿಂಗ್ ಶುಲ್ಕದ ಹೆಸರಿನಲ್ಲಿ ದೇವಾಲಯದಿಂದ 1 ಕಿಮೀ ದೂರದಲ್ಲೇ ವಾಹನಗಳನ್ನು ತಡೆದು ಹಣ ವಸೂಲಿ ಮಾಡುತ್ತಿರುವ ಕ್ರಮ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎನ್ನಲಾಗಿದೆ.

ಈ ಕುರಿತು ಘಾಟಿ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರಿಗೆ ದೂರು ಸಲ್ಲಿಸಿರುವ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ನರೇಂದ್ರಕುಮಾರ್, ರಸ್ತೆ ಮಧ್ಯದಲ್ಲೇ ವಾಹನಗಳನ್ನು ತಡೆದು ಯಾವುದೇ ಗುರುತಿನ ಚೀಟಿ ಧರಿಸದ ಕೆಲವರು ಸುಂಕ ವಸೂಲಿಗೆ ಮುಂದಾಗುತ್ತಿದ್ದಾರೆ. ದೇವಸ್ಥಾನಕ್ಕೆ ತೆರಳುವ ಪ್ರಯಾಣಿಕರಲ್ಲದಿದ್ದರೂ, ಸ್ಥಳೀಯ ಗ್ರಾಮಗಳ ನಿವಾಸಿಗಳು ಎಂದು ತಿಳಿಸಿದರೂ ಗೂಂಡಾವರ್ತನೆಯಿಂದ ವಸೂಲಿಗೆ ಮುಂದಾಗಿದ್ದಾರೆ ಎಂದು ದೂರಿದ್ದಾರೆ.

ಯುವ ಮುಖಂಡ ಉದಯ ಆರಾಧ್ಯ ಮಾತನಾಡಿ, ಘಾಟಿ ರಸ್ತೆ ಸಾರ್ವಜನಿಕರ ಸಂಚಾರಕ್ಕೆ ಇರುವ ಪ್ರಮುಖ ಮಾರ್ಗ. ದೇವಸ್ಥಾನಕ್ಕೆ ಭೇಟಿ ನೀಡದ ಸಾಮಾನ್ಯ ವಾಹನ ಸವಾರರಿಗೂ ರಸ್ತೆ ಮಧ್ಯದಲ್ಲೇ ಸುಂಕ ವಸೂಲಿ ಮಾಡುವುದು ಸರಿಯಲ್ಲ. ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ರೀತಿಯ ಅನಧಿಕೃತ ವಸೂಲಿ ತಕ್ಷಣ ನಿಲ್ಲಬೇಕು. ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ಪಾರದರ್ಶಕ ವ್ಯವಸ್ಥೆ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.

ದೇವಸ್ಥಾನಕ್ಕೆ ತೆರಳುವ ಭಕ್ತರಿಂದ ಪಾರ್ಕಿಂಗ್ ಶುಲ್ಕ ಪಡೆಯುವುದು ಬೇರೆ ವಿಷಯ. ಆದರೆ ಕೇವಲ ರಸ್ತೆಯಲ್ಲಿ ಹಾದು ಹೋಗುವ ವಾಹನಗಳ ಮೇಲೂ ಶುಲ್ಕ ವಿಧಿಸುವುದು ನ್ಯಾಯಸಮ್ಮತವಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಪಂಚಾಯಿತಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರುದ್ರಭೂಮಿಗಾಗಿ ವೀರಶೈವ ಲಿಂಗಾಯತ ಸಮಾಜದಿಂದ ತಹಸೀಲ್ದಾರರಿಗೆ ಮನವಿ
ಪರೀಕ್ಷಾ ಪ್ರಾಧಿಕಾರಗಳು ಜವಾಬ್ದಾರಿಯಿಂದ ಕೆಲಸ ಮಾಡಲಿ