ಹಾನಗಲ್ಲ ತಾಲೂಕಲ್ಲಿ ಹೈನುಗಾರಿಕೆಗೆ ಸಿಗುತ್ತಿಲ್ಲ ಉತ್ತೇಜನ, ದೇಶೀ ತಳಿ ಸಾಕಣೆ ಇಳಿಮುಖ

KannadaprabhaNewsNetwork |  
Published : Apr 16, 2024, 01:05 AM IST
ಜಾನುವಾರು ಚಿಕಿತ್ಸೆಯಲ್ಲಿ ವೈದ್ಯರು. | Kannada Prabha

ಸಾರಾಂಶ

ಮಲೆನಾಡಿಗೆ ಹೊಂದಿಕೊಂಡ ಹಾನಗಲ್ಲ ತಾಲೂಕಿನಲ್ಲಿ ಪಶುಪಾಲನೆ ಹಾಗೂ ಪಶುವೈದ್ಯ ಸೇವಾ ಇಲಾಖೆಯಿಂದ ಹೈನುಗಾರಿಕೆ ಪ್ರೋತ್ಸಾಹಕ್ಕೆ ವಿಶೇಷ ಯೋಜನೆಗಳಿಲ್ಲ.

ಹಾನಗಲ್ಲ: ಮಲೆನಾಡಿಗೆ ಹೊಂದಿಕೊಂಡ ಹಾನಗಲ್ಲ ತಾಲೂಕಿನಲ್ಲಿ ಪಶುಪಾಲನೆ ಹಾಗೂ ಪಶುವೈದ್ಯ ಸೇವಾ ಇಲಾಖೆಯಿಂದ ಹೈನುಗಾರಿಕೆ ಪ್ರೋತ್ಸಾಹಕ್ಕೆ ವಿಶೇಷ ಯೋಜನೆಗಳಿಲ್ಲ.

ಇಡೀ ರಾಜ್ಯದ ಅತಿ ದೊಡ್ಡ ತಾಲೂಕೆನಿಸಿರುವ ಹಾನಗಲ್ಲದಲ್ಲಿ ಸುಮಾರು ೭೦ ಸಾವಿರ ಜಾನುವಾರುಗಳಿವೆ. ೨೦೧೮ರ ಜಾನುವಾರು ಗಣತಿ ಅನ್ವಯ ೫೬ ಸಾವಿರಕ್ಕೂ ಅಧಿಕ ದನಗಳು, ೧೧,೭೮೨ ಎಮ್ಮೆಗಳು, ೬ ಸಾವಿರ ಮಿಶ್ರತಳಿಯ ಹಸುಗಳು, ೨೩ ಸಾವಿರ ಕುರಿಗಳು, ೧೭,೫೦೦ ಮೇಕೆಗಳಿದ್ದವು. ಆದರೆ ಪ್ರಸ್ತುತ ಜಾನುವಾರುಗಳ ಸಂಖ್ಯೆ ೧೦ರಷ್ಟು ಇಳಿಮುಖವಾಗಿದೆ. ಕುರಿ ಮೇಕೆಗಳ ಸಂಖ್ಯೆ ಯಥಾಸ್ಥಿತಿ ಇದೆ.

ತಾಲೂಕಿನಲ್ಲಿ ೮೧ ಹಾಲು ಉತ್ಪಾದಕರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂಘಗಳ ಮೂಲಕ ೨೫೦೦ ಹಾಲು ಉತ್ಪಾದಕರಿಂದ ಉತ್ಪಾದನೆಯಾದ ೧೭,೬೦೦ ಲೀಟರ್‌ ಹಾಲು ತಾಲೂಕಿನಿಂದ ಹೊರಗೆ ಸಾಗಿಸಲ್ಪಡುತ್ತದೆ. ಇದನ್ನು ಹೊರತುಪಡಿಸಿ ಖಾಸಗಿ ಹಾಲು ಉತ್ಪಾದಕರಿಂದ ಪ್ರತಿನಿತ್ಯ ೬ ಸಾವಿರ ಲೀಟರ್ ಹಾಲು ಹಳ್ಳಿ ಪಟ್ಟಣಗಳಲ್ಲಿ ವಿತರಿಸಲಾಗುತ್ತಿದೆ. ಇದರೊಂದಿಗೆ ಮನೆ ಬಳಕೆಗೆ ಸಾವಿರಾರು ಲೀಟರ್ ಹಾಲು ಬಳಕೆಯಾಗುವುದಲ್ಲದೆ ಬೆಣ್ಣೆ, ತುಪ್ಪ ಸಿದ್ಧವಾಗುತ್ತದೆ. ತಾಲೂಕಿನಲ್ಲಿ ಅಂದಾಜು ೨೫ ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತದೆ ಎಂಬ ಅಂದಾಜಿದೆ.

ಸರ್ಕಾರದಿಂದ ಹಾಲು ಉತ್ಪಾದಕರಿಗೆ ಹೈನೋದ್ಯಮ ಉತ್ತೇಜನಕ್ಕಾಗಿ ಕ್ಷೀರಧಾರೆ ಯೋಜನೆಯಲ್ಲಿ ಪ್ರತಿ ಲೀಟರ್ ಹಾಲಿಗೆ ₹೫ನಂತೆ ತಿಂಗಳಿಗೆ ₹೮೫ ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ. ಹಸು, ಎಮ್ಮೆ ಸೇರಿದಂತೆ ವಿವಿಧ ೧೨೦೫ ಜಾನುವಾರುಗಳಿಗೆ ಕಳೆದ ವರ್ಷ ವಿಮಾ ಸೌಲಭ್ಯ ನೀಡಲಾಗಿದೆ. ಕಳೆದ ಸಾಲಿನಲ್ಲಿ ೧,೭೭೫ ಮೇವಿನ ಕಿಟ್‌ ನೀಡಲಾಗಿದೆ. ಇಡೀ ತಾಲೂಕಿನಲ್ಲಿ ೩೦ ಜನರು ಮಾತ್ರ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದಾರೆ. ವರ್ಷಕ್ಕೆ ೨೪ ಸಾವಿರ ಜಾನುವಾರುಗಳಿಗೆ ಅದರಲ್ಲೂ ಅಮೃತಮಹಲ್, ಜರ್ಸಿ, ಎಚ್‌ಎಫ್, ಸುರ್ತಿ, ಮರ‍್ರಾ, ಪಂಡ್ರಪುರಿ ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ಮಾಡಲಾಗಿದೆ.

ತಾಲೂಕಿನಲ್ಲಿ ಕಳೆದ ವರ್ಷ ಆಕಸ್ಮಿಕವಾಗಿ ಮೃತಪಟ್ಟ ೬೫ ಜಾನುವಾರುಗಳ ಮಾಲೀಕರಿಗೆ ಒಟ್ಟು ₹೬.೫೦ ಲಕ್ಷ ಪರಿಹಾರ ನೀಡಲಾಗಿದೆ. ಜಾನುವಾರುಗಳಿಗೆ ಕಾಲು ಬಾಯಿ ಬೇನೆ ಲಸಿಕೆ ನೀಡಿ ಜಾಗೃತಿ ಮೂಡಿಸಲಾಗಿದೆ. ಜಾನುವಾರುಗಳಿಗೆ ಬರಬಹುದಾದ ವಿವಿಧ ರೋಗಗಳ ಬಗ್ಗೆ ರೈತರಿಗೆ ಮುಂಜಾಗ್ರತಾ ಕ್ರಮದ ಕುರಿತು ಅರಿವು ಮೂಡಿಸಲಾಗಿದೆ ಎಂಬ ವರದಿ ಪಶುಪಾಲನೆ ಹಾಗೂ ಪಶುವೈದ್ಯ ಸೇವಾ ಇಲಾಖೆಯ ವರದಿಯಾಗಿದೆ.

ಆದರೆ ದೇಶಿ ತಳಿಗಳ ಸಾಕಣೆ ತೀರ ಇಳಿಮುಖವಾಗಿದ್ದು, ಸಾವಯವ ಕೃಷಿಕರು ಮಾತ್ರ ವಿಶೇಷವಾಗಿ ದೇಶಿ ತಳಿಯ ಜಾನುವಾರು ಸಾಕಣೆಗೆ ಮುಂದಾಗಿದ್ದಾರೆ. ಈ ದೇಶಿ ತಳಿಯ ಹಸುಗಳು ಹೆಚ್ಚು ಹಾಲು ಕೊಡಲಾರವು ಎಂಬ ಕಾರಣಕ್ಕೆ ಮಿಶ್ರ ತಳಿಯ ಹೆಚ್ಚು ಹಾಲು ಕೊಡುವ ಜಾನುವಾರುಗಳ ಸಾಕಣೆಗೆ ಕೃಷಿಕರು ಮುಂದಾಗಿದ್ದಾರೆ. ಈ ಕಾರಣಕ್ಕಾಗಿ ಹಾಲು ಉತ್ಪಾದನೆ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ.

ಹಾನಗಲ್ಲ ತಾಲೂಕಿನಲ್ಲಿ ೨೨ ಪಶುವೈದ್ಯಕೀಯ ಆಸ್ಪತ್ರೆಗಳಿದ್ದು, ಕೇವಲ ೪ ವೈದ್ಯರು ಈ ಎಲ್ಲ ಆಸ್ಪತ್ರೆಗಳನ್ನು ನಿರ್ವಹಿಸುವ ಅನಿವಾರ್ಯತೆ ಇದೆ. ಪ್ರತಿ ವರ್ಷ ಈ ಪಶುಸಂಗೋಪನಾ ಹಾಗೂ ಪಶುವೈದ್ಯ ಆಸ್ಪತ್ರೆಯಲ್ಲಿ ೬೦ ಸಾವಿರಕ್ಕೂ ಅಧಿಕ ಅನಾರೋಗ್ಯದ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕೃಷಿಗೂ ಜಾನುವಾರು ಬಳಕೆ ಅತ್ಯಂತ ಕಡಿಮೆಯಾಗಿದ್ದು, ಹಾಲು ಉತ್ಪಾದನೆಗೆ ಜವಾರಿ ಜಾನುವಾರುಗಳ ಸಾಕಣೆಯೂ ಕುಂಠಿತವಾಗಿದೆ.

ಅತಿವೃಷ್ಟಿ, ಅನಾವೃಷ್ಟಿಗಳ ಪೆಟ್ಟಿಗೆ ಸಿಕ್ಕು ನಲುಗಿದ ರೈತರಿಗೆ ಯಾವುದು ಲಾಭಕರ ಎಂಬ ದೊಡ್ಡ ಗೊಂದಲವೇ ಸೃಷ್ಟಿಯಾಗಿದೆ. ಪಶು ಸಂಗೋಪನಾ ಇಲಾಖೆ ಹೈನುಗಾರಿಕೆ ಉತ್ತೇಜನಕ್ಕೆ ವಿಶೇಷ ಯೋಜನೆಗಳನ್ನು ರೂಪಿಸಿ ರೈತರು ಸ್ವಾವಲಂಬಿಗಳಾಗಲು ಸಹಕರಿಸುವ ಅಗತ್ಯವಿದೆ. ಇದು ಕೃಷಿಗೆ ಪೂರಕ ಹಾಗೂ ನಿರಂತರ ಆದಾಯಕ್ಕೆ ಅವಕಾಶ, ಹವಾಮಾನ ವೈಪರಿತ್ಯದಿಂದ ಬೆಳೆ ಹಾನಿಯಾದಾಗಲೂ ಈ ಹೈನುಗಾರಿಕೆ ರೈತರ ಕೈ ಹಿಡಿಯಬಲ್ಲದು. ಹೈನುಗಾರಿಕೆಗೆ ಕೃಷಿಕರೂ ಆಸಕ್ತಿ ಹೊಂದಿ, ಪಶುಸಂಗೋಪನಾ ಇಲಾಖೆಯೂ ಸೌಲಭ್ಯಗಳನ್ನು ನೀಡುವ ಅಗತ್ಯವಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್‌ಪಿಜಿ ಪೂರೈಕೆ ಸುಧಾರಣೆ: ಸಪ್ಲೈ ಶೇ.20ರಷ್ಟು ಏರಿಕೆ
ಬಾಗಲಕೋಟೆ, ದಾವಣಗೆರೆ ಕ್ಷೇತ್ರಕ್ಕೆ ಏ.9ಕ್ಕೆ ಉಪಸಮರ