ಬಿ. ರಾಮಪ್ರಸಾದ್ ಗಾಂಧಿ
ಹರಪನಹಳ್ಳಿ: ಇಲ್ಲಿಯ ಸಾರಿಗೆ ಬಸ್ ಡಿಪೋ ಆರಂಭವಾಗಿ ಹಲವು ವರ್ಷಗಳೇ ಕಳೆದರೂ ಈ ವರೆಗೂ ಗುಣಮಟ್ಟದ ಬಸ್‌ಗಳು ಇಲ್ಲದಿರುವುದರಿಂದ ಸೋರುವುದು, ಅಲ್ಲಲ್ಲಿ ಕೆಟ್ಟು ನಿಲ್ಲುವುದು ಮುಂತಾದ ಸಮಸ್ಯೆಗಳಿಂದ ಪ್ರಯಾಣಿಕರು, ವಿದ್ಯಾರ್ಥಿಗಳು ಬೇಸತ್ತಿದ್ದಾರೆ.ಇಲ್ಲಿಯ ಡಿಪೋದಲ್ಲಿ 73 ಬಸ್‌ಗಳಿವೆ. ಅದರಲ್ಲಿ 20-25 ಬಸ್‌ಗಳ ಗುಣಮಟ್ಟ ತೀರಾ ಹದಗೆಟ್ಟು ಹೋಗಿದೆ. ಇಂತಹ ಅನೇಕ ಬಸ್‌ಗಳನ್ನು ಓಡಿಸಲು ಚಾಲಕರು ಹರಸಾಹಸ ಪಡಬೇಕಿದೆ.
ಇದೀಗ ಮಳೆಗಾಲ ಆರಂಭವಾಗಿದೆ. ಬಸ್‌ಗಳು ಸೋರುತ್ತಿವೆ. ಕೆಲವೊಂದು ಬಸ್‌ಗಳು ಮಾರ್ಗಮಧ್ಯೆ ಕೆಟ್ಟು ನಿಲ್ಲುತ್ತಿವೆ. ಮೂರು ದಿನಗಳ ಹಿಂದೆ ಹರಪನಹಳ್ಳಿಯಿಂದ ನಂದಿಬೇವೂರು ಮಾರ್ಗವಾಗಿ ಸಂಚರಿಸುವ ಬಸ್ ಚಿಗಟೇರಿ ಬಳಿ ಗೇರ್ ಬೀಳದಿದ್ದಾಗ ಚಾಲಕ ಹಾರೆಕೋಲು ಬಳಸಿ ಗೇರ್ ಬದಲಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಇನ್ನೊಂದು ಬಸ್ ಚಿಗಟೇರಿ ಕ್ರಾಸ್ ಬಳಿ ಕೆಟ್ಟು ನಿಂತು ಪ್ರಯಾಣಿಕರು ಪರದಾಡುವಂತಾಗಿತ್ತು. ಇಂತಹ ಡಕೋಟ ಬಸ್‌ಗಳನ್ನು ತಾಲೂಕಿನ ಗ್ರಾಮೀಣ ಭಾಗಕ್ಕೆ ಬಿಟ್ಚಿದ್ದು, ಹಳ್ಳಿಯ ಪ್ರಯಾಣಿಕರು ಬಸ್‌ಗಳ ಕಿರಿಕಿರಿಯಿಂದ ಬೇಸತ್ತು ಹೋಗಿದ್ದಾರೆ.
ಗುಣಮಟ್ಟದ ಬಸ್ಸಿನ ಕೊರತೆ ಒಂದು ಕಡೆಯಾದರೆ ಇನ್ನೊಂದು ಕಡೆ ತಾಲೂಕಿನ ಅನೇಕ ಹಳ್ಳಿಗಳಿಗೆ ಬಸ್ಸೇ ಇಲ್ಲ. ಅಡವಿಹಳ್ಳಿ, ತಿಪ್ಪನಾಯಕನಹಳ್ಳಿ, ಹೊಸ ಓಬಳಾಪುರ, ಹಳೆ ಓಬಳಾಪುರ, ಕೋಡಿಹಳ್ಳಿ, ಒಳತಾಂಡಾ ಮುಂತಾದ ಗ್ರಾಮಗಳಿಗೆ ಈ ವರೆಗೂ ಬಸ್ ಸಂಪರ್ಕವೇ ಇಲ್ಲ.ಸಾರಿಗೆ ಸೌಲಭ್ಯವಿಲ್ಲದೆ, ಪ್ರತಿದಿನ ಬಾಗಳಿ ಗ್ರಾಮದ ಅನುದಾನಿತ ಪ್ರೌಢಶಾಲೆಗೆ ಕೋಡಿಹಳ್ಳಿ, ಶೃಂಗಾರತೋಟದ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಅಂದಾಜು 3-4 ಕಿ.ಮೀ. ಹೋಗಿ ಬರಬೇಕಿದೆ. ಅಡವಿಹಳ್ಳಿ ಗ್ರಾಮದಿಂದಲೂ ವಿದ್ಯಾರ್ಥಿಗಳು ಹರಪನಹಳ್ಳಿಗೆ ಕಾಲ್ನಡಿಗೆಯಲ್ಲಿಯೇ ಶಾಲಾ-ಕಾಲೇಜುಗಳಿಗೆ ಹೋಗಬೇಕಿದೆ. ಈಗ ಮಳೆಗಾಲವಾದ್ದರಿಂದ ವಿದ್ಯಾರ್ಥಿಗಳ ಗೋಳು ಹೇಳತೀರದಾಗಿದೆ.
ಈಚೆಗೆ ಬಾಗಳಿ ಪ್ರೌಢಶಾಲೆಯಿಂದ ಕೋಡಿಹಳ್ಳಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಎ. ಕಾವ್ಯಾ ಹಾಗೂ ಕಲ್ಪನಾ ಎಂಬ ವಿದ್ಯಾರ್ಥಿನಿಯರಿಗೆ ಹಾವು ಕಚ್ಚಿ ಹರಪನಹಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.ಸರ್ಕಾರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ಕೊಡುವ ಸ್ಕೀಂನ್ನು ಕೋವಿಡ್ ಸಂದರ್ಭದಲ್ಲಿ ಬಂದ್ ಮಾಡಿದ್ದು, ಈ ವರೆಗೂ ಪುನಾರಂಭ ಮಾಡಿಲ್ಲ. ವಿದ್ಯಾರ್ಥಿಗಳಿಗೆ ಸೈಕಲ್ ಕೊಡಿ, ಇಲ್ಲವೇ ಶಾಲಾ ಸಮಯಕ್ಕೆ ಬಸ್ ಬಿಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ಮಳೆಗಾಲದಲ್ಲಿ 10-15 ಬಸ್‌ಗಳ ಮೇಲ್ಭಾಗಕ್ಕೆ ತಾಡಪಾಲುಗಳ ಹೊದಿಕೆ ಹಾಕಲಾಗಿದೆ. ಇನ್ನು 5-6 ಬಸ್‌ಗಳಿಗೆ ತಾಡಪಾಲು ಅಳವಡಿಸಬೇಕಾಗಿದೆ. ಗ್ರಾಮಸ್ಥರು ಬೇಡಿಕೆ ಸಲ್ಲಿಸಿದರೆ ಅಂತಹ ಗ್ರಾಮಗಳಿಗೆ ಬಸ್ ಬಿಡುತ್ತೇವೆ ಎನ್ನುತ್ತಾರೆ ಹರಪನಹಳ್ಳಿ ಡಿಪೋ ವ್ಯವಸ್ಥಾಪಕಿ ಎಂ. ಮಂಜುಳಾ.ಹರಪನಹಳ್ಳಿ ಡಿಪೋದಲ್ಲಿ ಡಕೋಟ ಬಸ್ ಇವೆ. ಗ್ರಾಮೀಣ ಭಾಗದಲ್ಲಿ ಎಲ್ಲೆಂದರಲ್ಲಿ ಕೆಟ್ಟು ನಿಂತು ಪ್ರಯಾಣಿಕರಿಗೆ ತೊಂದರೆ ನೀಡುತ್ತಿವೆ. ಅಗತ್ಯ ನೂತನ ಬಸ್‌ಗಳನ್ನು ಸಾರಿಗೆ ಇಲಾಖೆಯವರು ತರಿಸಿಕೊಂಡು ಹಳ್ಳಿ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ ಕೊಂಗನಹೊಸೂರು ನಾಗರಾಜ.