ಭಾರೀ ಮಳೆ, ಪ್ರವಾಹಕ್ಕೆ ತತ್ತರಿಸಿದ ದಕ್ಷಿಣ ಕನ್ನಡ

KannadaprabhaNewsNetwork | Published : Jul 31, 2024 1:02 AM

ಸಾರಾಂಶ

ಭಾರಿ ಮಳೆ ಹಿನ್ನೆಲೆಯಲ್ಲಿ ಜುಲೈ 31ರಂದು ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ಭಾರೀ ಮಳೆಯಬ್ಬರ ಕಂಡುಬಂದಿದ್ದು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಭಾಗದಲ್ಲಿ ಪ್ರವಾಹದಿಂದ ಅಪಾರ ಹಾನಿ ಸಂಭವಿಸಿದೆ. ಜಿಲ್ಲೆಯ ನದಿಗಳು ಅಪಾಯದ ಮಟ್ಟ ಮೀರಿ ಹರಿದು ಜಿಲ್ಲಾದ್ಯಂತ ತಗ್ಗು ಪ್ರದೇಶಗಳು ಜಲಾವೃತಗೊಂಡು, ಮನೆಗಳು, ತೋಟ, ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ತೀವ್ರ ಅಪಾಯದ ಸ್ಥಿತಿ ತಂದೊಡ್ಡಿತ್ತು. ಭಾರೀ ಮಳೆಯಿಂದ ಜಿಲ್ಲೆಯ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿತ್ತು.

10ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಮಂಗಳೂರು- ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಹಾಸನ ವ್ಯಾಪ್ತಿಯಲ್ಲಿ ಬೃಹತ್‌ ಭೂಕುಸಿತ ಸಂಭವಿಸಿದ್ದು, ಹಲವು ಗಂಟೆಗಳ ಕಾಲ ಹೆದ್ದಾರಿ ಸಂಚಾರ ಸ್ಥಗಿತಗೊಂಡಿತ್ತು.

ಪುತ್ತೂರು ಸಮೀಪದ ಶೇಖಮಲೆಯ ಮದ್ಯಂಗಳ ಎಂಬಲ್ಲಿ ಮಾಣಿ- ಮೈಸೂರು ರಸ್ತೆಯಲ್ಲಿ ಭೂಕುಸಿತ ಸಂಭವಿಸಿ, ಪುತ್ತೂರಿನಿಂದ ಸುಳ್ಯ ರಸ್ತೆ ಕೆಲ ಗಂಟೆಗಳ ಕಾಲ ಬಂದ್ ಆಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮಧ್ಯಾಹ್ನ 3 ಗಂಟೆಯ ವೇಳೆಗೆ ಮಣ್ಣು ತೆರವುಗೊಳಿಸಿ ರಸ್ತೆಯ ಒಂದು ಬದಿಯಲ್ಲಿ ವಾಹನ ಸಂಚಾರ ಸುಗಮಗೊಳಿಸಲಾಯಿತು. ಚೆಲ್ಯಡ್ಕ ಸೇತುವೆ ಮುಳುಗಡೆಯಾಗಿದ್ದು, ಅಕ್ಕಪಕ್ಕದ ಭಾರೀ ತೋಟಗಳು ಜಲಾವೃತಗೊಂಡಿದ್ದವು.ಅಪಾಯದಲ್ಲಿ ನದಿ ಮಟ್ಟ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದುದರಿಂದ ಜಿಲ್ಲೆಯ ನದಿಗಳು ಅಪಾಯ ಮಟ್ಟ ಮೀರಿ ಹರಿದವು. ನೇತ್ರಾವತಿ ನದಿ ನೀರಿನ ಅಪಾಯದ ಮಟ್ಟ ಬಂಟ್ವಾಳದಲ್ಲಿ 8.5 ಮೀ. ಇರಬೇಕಾದಲ್ಲಿ ಮಂಗಳವಾರ ಸಂಜೆ ವೇಳೆಗೆ 9.9 ಮೀಟರ್ ತಲುಪಿತ್ತು. ಇದರಿಂದಾಗಿ ಆಲಡ್ಕ, ಬಿ.ಸಿ. ರೋಡಿನ ಬಸ್ತಿಪಡ್ಪು, ಬಂಟ್ವಾಳ- ಜಕ್ರಿಬೆಟ್ಟು ರಸ್ತೆಯ ಕೋಟೆಕಣಿಯಲ್ಲಿ ತಗ್ಗು ಪ್ರದೇಶಗಳು ಜಲಾವೃತವಾಗಿದ್ದವು. ನದಿ ಪ್ರದೇಶಗಳಲ್ಲಿನ ಬಹುತೇಕ ಹೊಲ ಗದ್ದೆಗಳಿಗೆ ಪ್ರವಾಹ ನೀರು ನುಗ್ಗಿತ್ತು. ನಾವೂರ ಗ್ರಾಮದ ಮೈಂದಾಳ ಎಂಬಲ್ಲಿ ಸುಮಾರು 8 ಮನೆಗಳಿಗೆ ನೀರು ನುಗ್ಗಿತ್ತು. ಅಲ್ಲಿಪಾದೆ ಎಂಬಲ್ಲೂ ಮನೆಗಳ ಅಂಗಳಕ್ಕೆ ನೀರು ನುಗ್ಗಿದ್ದು, ಅಡಕೆ ತೋಟಗಳು ಜಲಾವೃತಗೊಂಡಿದ್ದವು. ಅಜಿಲಮೊಗರು ಸಯ್ಯದ್ ಬಾಬಾ ಫಕ್ರುದ್ದೀನ್ ಜುಮಾ ಮಸೀದಿಗೆ ನೀರು ನುಗ್ಗಿದ್ದು, ಅಜಿಲಮೊಗರು ರಸ್ತೆ ಕೂಡ ಜಲಾವೃತಗೊಂಡಿತ್ತು.

ಬಂಟ್ವಾಳದ ಒಳಪೇಟೆಯಲ್ಲಿ ಅನೇಕ ಅಂಗಡಿಗಳಿಗೆ ನೀರು ನುಗ್ಗಿದ್ದರಿಂದ ವ್ಯಾಪಾರಿಗಳು ಪರದಾಡಿದರು. ಬಿಕಸ್ಬಾ ಗ್ರಾಮದ ಮೀನು ಮಾರುಕಟ್ಟೆ, ದಿನಸಿ, ತರಕಾರಿ ಅಂಗಡಿಗಳೆಲ್ಲ ಜಲಾವೃತಗೊಂಡಿದ್ದವು. ಬಿ.ಸಿ.ರೋಡ್- ಪೊಳಲಿ ರಸ್ತೆಯ ಅಮ್ಟಾಡಿ ಎಂಬಲ್ಲಿ ಭೂಕುಸಿತ ಉಂಟಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.

ಹೆದ್ದಾರಿಗೆ ನೀರು!: ಉಪ್ಪಿನಂಗಡಿಯಲ್ಲೂ ನದಿ ಉಕ್ಕೇರಿ ಪಂಜಾಳದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ನೀರು ನುಗ್ಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮುಂಜಾಗರೂಕತೆ ವಹಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಇಲ್ಲಿನ ಸಹಸ್ರಲಿಂಗೇಶ್ವರ ದೇವಾಲಯದ ಅಂಗಳಕ್ಕೆ ನೀರು ಬಂದಿದ್ದು, ಸಂಗಮ ವೀಕ್ಷಿಸಲು ನೂರಾರು ಮಂದಿ ಸೇರಿದ್ದರು.

ಘಾಟಿ ಸಂಚಾರ ಅಸ್ತವ್ಯಸ್ತ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಾಸನ ವ್ಯಾಪ್ತಿಯಲ್ಲಿ ಭೂಕುಸಿತವಾಗಿ ಹೆದ್ದಾರಿ ಸಂಚಾರ ಬಂದ್‌ ಆಗಿದ್ದರಿಂದ ಬದಲಿ ಮಾರ್ಗವಾಗಿ ಸಂಚರಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಚಾರ್ಮಾಡಿ ಘಾಟ್‌ನಲ್ಲಿ ಮರ ಬಿದ್ದು ವಾಹನಗಳ ಸಂಚಾರ ಬೆಳಗ್ಗೆ ಒಂದು ಗಂಟೆ ಅಸ್ತವ್ಯಸ್ತಗೊಂಡಿತ್ತು.

ಕುಮಾರಧಾರಾ ನದಿಯ ಪ್ರವಾಹದಿಂದ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿಯ ದಡದಲ್ಲಿರುವ ಸ್ನಾನಘಟ್ಟ ಜಲಾವೃತವಾಗಿತ್ತು. ಬೆಳ್ತಂಗಡಿಯ ಸರಳಿಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಭೂಕುಸಿತದಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಬಾರ್ಯ ಗ್ರಾಮದಲ್ಲಿ ಗುಡ್ಡ ಕುಸಿದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಮಂಗಳೂರು ನಗರದಲ್ಲಂತೂ ಮಹಾಮಳೆ ಅವಾಂತರವನ್ನೇ ಸೃಷ್ಟಿಸಿತ್ತು. ನಗರದ ಬಹುತೇಕ ರಸ್ತೆಗಳಲ್ಲೇ ನೀರು ಹರಿದು ನದಿಗಳಂತಾಗಿಬಿಟ್ಟಿದ್ದವು. ಕೊಟ್ಟಾರಲ್ಲಿ ಸೋಮವಾರ ರಾತ್ರಿ ಬೀಸಿದ ಗಾಳಿಗೆ ಕಟ್ಟಡವೊಂದರ ಮೇಲ್ಛಾವಣಿ ಶೀಟ್ ಕುಸಿದು ಮೂರು ವಿದ್ಯುತ್ ಕಂಬಗಳು ಧರೆಗುರುಳಿದ್ದವು. ಮಂಗಳವಾರ ಪಡೀಲ್‌ ಅಂಡರ್‌ಪಾಸ್‌ನಲ್ಲಿ ಭಾರೀ ಕೃತಕ ಪ್ರವಾಹ ಉಂಟಾಗಿದ್ದು, ಅಲ್ಲಿ ಸಂಚರಿಸುತ್ತಿದ್ದ ಕೆಸ್ಸಾರ್ಟಿಸಿ ಬಸ್ಸಿನೊಳಗೆ ನೀರು ನುಗ್ಗಿ ಅರ್ಧದಲ್ಲೇ ಬಸ್ಸು ಬಂದ್‌ ಆಗಿ ನಿಂತಿತ್ತು. ಕೆಲಕಾಲ ಪ್ರಯಾಣಿಕರು ಪರದಾಡಿದರು. ಜಲ್ಲಿಗುಡ್ಡೆಗೆ ತೆರಳುವ ರೈಲ್ವೆ ಅಂಡರ್‌ಪಾಸ್‌ನಲ್ಲೂ ಪ್ರವಾಹ ಉಂಟಾಗಿ ಸಂಚಾರಕ್ಕೆ ಅಡಚಣೆಯಾಗಿತ್ತು.

ಕೂಳೂರು ಸೇತುವೆ ಕಾಮಗಾರಿ ಅಪೂರ್ಣ ಆಗಿದ್ದರಿಂದ ಮಳೆ ನೀರು ಸರಾಗವಾಗಿ ಹರಿಯದೆ ತೊಡಕಾಗಿತ್ತು. ಮಂಗಳೂರು ಮಹಾನಗರ ಪಾಲಿಕೆ ಕಮಿಷನರ್‌ ಆನಂದ್‌ ಸಿ.ಎಲ್‌. ಭೇಟಿ ನೀಡಿ ಎನ್‌ಎಚ್‌ಎಐ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಮಣ್ಣು ತೆರೆವು ಮಾಡುವ ಮೂಲಕ ಸರಾಗ ನೀರು ಹರಿಯಲು ವ್ಯವಸ್ಥೆ ಮಾಡಿದರು.

ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗಿನಿಂದ ಮಂಗಳವಾರ ಬೆಳಗ್ಗಿನವರೆಗೆ ಸರಾಸರಿ 111.4 ಮಿ.ಮೀ. ಮಳೆ ದಾಖಲಾಗಿದೆ. ಕಡಬದಲ್ಲಿ 110.4 ಮಿ.ಮೀ. ಮಳೆ ಸುರಿದರೆ, ಮೂಡುಬಿದಿರೆಯಲ್ಲಿ 109.3 ಮಿ.ಮೀ, ಬೆಳ್ತಂಗಡಿ 15.1 ಮಿ.ಮೀ, ಬಂಟ್ವಾಳದಲ್ಲಿ 94.6 ಮಿ.ಮೀ, ಮಂಗಳೂರು 79.8 ಮಿ.ಮೀ, ಪುತ್ತೂರು 88.1 ಮಿ.ಮೀ, ಸುಳ್ಯದಲ್ಲಿ 99.6 ಮಿ.ಮೀ ಮೂಲ್ಕಿಯಲ್ಲಿ 70.9 ಮಿ.ಮೀ ಹಾಗೂ ಉಳ್ಳಾಲ ಭಾಗದಲ್ಲಿ 66.2 ಮಿ.ಮೀ ಮಳೆಯಾಗಿದೆ. ಮಳೆಯಿಂದಾಗಿ 2.260 ಕಿ.ಮೀ. ಜಿಲ್ಲಾ ಸಂಪರ್ಕ ರಸ್ತೆಗಳು ಹಾನಿಯಾಗಿದ್ದರೆ, 2.001 ಕಿ.ಮೀ ರಾಜ್ಯ ಹೆದ್ದಾರಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಮೂರು ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 43 ಮಂದಿಗೆ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ.

ಇನ್ನೆರಡು ದಿನ ರೆಡ್‌ ಅಲರ್ಟ್‌

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ದ.ಕ. ಜಿಲ್ಲೆಯಲ್ಲಿ ಇನ್ನೆರಡು ದಿನಗಳ ಕಾಲ ಮಳೆಯ ಅಬ್ಬರ ಇರಲಿದ್ದು, ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಆ.2ರಂದು ಆರೇಂಜ್‌ ಅಲರ್ಟ್‌ ಇರಲಿದ್ದು, ಆ.3,4ರಂದು ಹಳದಿ ಅಲರ್ಟ್‌ ಘೋಷಿಸಲಾಗಿದೆ.

Share this article