ಪುತ್ತೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಡಿಕೆಎಂಯು)ದ ಹಾಲು ಸಂಸ್ಕರಣಾ ಕಾರ್ಖಾನೆ ನಿರ್ಮಿಸಲು ಪುತ್ತೂರು ನಗರದ ಹೊರವಲಯದ ಕಟಾರ ಎಂಬಲ್ಲಿ 10 ಎಕರೆ ಸರಕಾರಿ ಜಮೀನು ನೀಡಲಾಗಿದ್ದು, ಅಲ್ಲಿ ಕಾರ್ಖಾನೆ ನಿರ್ಮಿಸಲು ಕೆಲ ಸಮಯದಿಂದ ಒಕ್ಕೂಟ ಮೀನಮೇಷ ಎಣಿಸುತ್ತಿತ್ತು. ಈ ವಿಚಾರದಲ್ಲಿ ನಾನು ನನ್ನ ಸ್ಪಷ್ಟ ನಿಲುವು ತಿಳಿಸಿದ್ದೆ. ಇದಾದ ಬಳಿಕ ಒಕ್ಕೂಟದವರು ವಾಸ್ತವ ಸ್ಥಿತಿ ಅರಿತುಕೊಂಡು ಪುತ್ತೂರಿನ ನಿಗದಿತ ಜಾಗದಲ್ಲೇ ಕಾರ್ಖಾನೆ ನಿರ್ಮಿಸಲು ನಿರ್ಧರಿಸಿದ್ದಾರೆ. ಮೇ 20ರಂದು ಕಟಾರದ ಸ್ಥಳ ಪರಿಶೀಲನೆ ನಡೆಯಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.ಅವರು ಸೋಮವಾರ ಶಾಸಕರ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಒಕ್ಕೂಟದ ಸಭೆಯಲ್ಲಿ ಪುತ್ತೂರಿನಲ್ಲೇ ಕಾರ್ಖಾನೆ ನಿರ್ಮಿಸುವ ಸಂಬಂಧ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನನಗೆ ಮಾಹಿತಿ ಬಂದಿದೆ. ಮೇ 20 ರಂದು ಒಕ್ಕೂಟದ ನಿಯೋಗ ಸ್ಥಳ ಪರಿಶೀಲನೆಗೆ ಬರಲಿದೆ. ಈಗಾಗಲೇ ಕಟಾರದಲ್ಲಿ 10 ಎಕರೆ ಜಾಗ ಒಕ್ಕೂಟಕ್ಕೆ ಸರ್ಕಾರ ನೀಡಿದೆ. ಪಕ್ಕದಲ್ಲಿದ್ದ 4 ಎಕರೆ ಖಾಸಗಿ ಜಾಗವನ್ನೂ ಒಕ್ಕೂಟದ ವತಿಯಿಂದ ಖರೀದಿಸುವ ಬಗ್ಗೆ ಈ ಹಿಂದೆ ನಿರ್ಧರಿಸಲಾಗಿತ್ತು. ತಾಂತ್ರಿಕ ಕಾರಣದಿಂದ ಪ್ರಕ್ರಿಯೆ ಇನ್ನೂ ಪೂರ್ತಿಗೊಂಡಿಲ್ಲ. ಅವರು ಇಲ್ಲಿ ಮೆಗಾ ಪ್ಲ್ಯಾಂಟ್ ನಿರ್ಮಿಸುವುದಾದರೆ ಇನ್ನೂ 7 ಎಕರೆ ಸರಕಾರಿ ಜಾಗ ನೀಡಲಾಗುವುದು ಎಂದರು.ಪ್ರಸ್ತುತ ಮಂಗಳೂರಿನ ಕುಲಶೇಖರದಲ್ಲಿ ಡಿಕೆಎಂಯು ಹಾಲು ಸಂಸ್ಕರಣಾ ಘಟಕವಿದೆ. ಅಲ್ಲಿನ 30 ವರ್ಷಗಳ ಲೀಸ್ ಅವಧಿಯೂ ಮುಗಿದಿದೆ. ಸೌಕರ್ಯಗಳ ಕೊರತೆಯೂ ಬಾಧಿಸುತ್ತಿದೆ. ನೀರಿನ ಸಮಸ್ಯೆಯೂ ಇದೆ. ಇದನ್ನೆಲ್ಲ ಮನಗಂಡು ಪುತ್ತೂರಿನಲ್ಲಿ 10 ಎಕರೆ ಜಾಗ ನೀಡಬೇಕೆಂದು ಒಕ್ಕೂಟ ವತಿಯಿಂದ ನನಗೆ ಮನವಿ ಸಲ್ಲಿಸಲಾಗಿತ್ತು. ಅದರಂತೆ 10 ಎಕರೆ ಸರಕಾರಿ ಜಾಗವನ್ನು ಕೇವಲ ರು. 46 ಲಕ್ಷಕ್ಕೆ ಮಂಜೂರು ಮಾಡಲಾಗಿತ್ತು. ಖಾಸಗಿಯವರು 4 ಎಕರೆ ಜಾಗ ನೀಡಲು ಮುಂದೆ ಬಂದಿದ್ದರು. ಈ ಮಧ್ಯೆ, ಪುತ್ತೂರು ಯೋಜನೆ ಕೈಬಿಟ್ಟು ಬಂಟ್ವಾಳದಲ್ಲಿ ರು. 60 ಕೋಟಿಗೆ ಜಾಗ ಖರೀದಿಸಿ ಪ್ಲ್ಯಾಂಟ್ ನಿರ್ಮಿಸಲು ಪ್ರಯತ್ನ ನಡೆದಿರುವುದು ನನ್ನ ಗಮನಕ್ಕೆ ಬಂದ ಕಾರಣ ನಾನು ಪ್ರಬಲ ವಿರೋಧ ವ್ಯಕ್ತಪಡಿಸಿದ್ದೆ. ಪುತ್ತೂರಿನಲ್ಲಿ ರು. 46 ಲಕ್ಷಗಳಿಗೆ ಜಾಗ ಸಿಕ್ಕಿರುವಾಗ ಕೋಟಿಗಟ್ಟಲೆ ನೀಡಿ ಬೇರೆ ಕಡೆ ಜಾಗ ಖರೀದಿಸುವುದು ಸರಿಯಲ್ಲ ಎಂಬುದು ನನ್ನ ನಿಲುವು. ಪ್ರಸ್ತುತ ವಾಸ್ತವ ಸ್ಥಿತಿ ಸಂಬಂಧಪಟ್ಟವರಿಗೆ ಗೊತ್ತಾಗಿದೆ. ಇದರಿಂದಾಗಿ ಪುತ್ತೂರಿನಲ್ಲೇ ಕಾರ್ಖಾನೆ ನಿರ್ಮಿಸಲು ನಿರ್ಧಾರ ಕೈಗೊಂಡಿದ್ದಾರೆ ಎಂದರು.