;Resize=(412,232))
ಬೆಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ಧರ್ಮಾಧಾರಿತ ಸರಣಿ ಹತ್ಯೆ-ಕೋಮು ಸಂಘರ್ಷ ಹೆಚ್ಚಲು ಬಿಜೆಪಿ ಮತ್ತು ಸಂಘ ಪರಿವಾರಗಳು ಧಾರ್ಮಿಕ ಭಾವನೆ ಮೇಲೆ ರಾಜಕೀಯ ಮಾಡುತ್ತಿರುವ ಜತೆಗೆ, ಸಂಘರ್ಷಕ್ಕೆ ಎರಡೂ ಧರ್ಮದವರಿಗೆ ವಿದೇಶಗಳಿಂದ ಹಣಕಾಸು ನೆರವು ಸಿಗುತ್ತಿರುವುದೂ ಕಾರಣ ಎಂದು ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ ಎಂದು ತಿಳಿದುಬಂದಿದೆ.
ಕರಾವಳಿ ಜಿಲ್ಲೆಗಳಲ್ಲಿನ ಕೋಮು ಸಂಘರ್ಷ, ಧರ್ಮಾಧಾರಿತ ಹತ್ಯೆಗೆ ಕಾರಣ ತಿಳಿಯಲು ಕೆಪಿಸಿಸಿಯಿಂದ ರಚಿಸಲಾಗಿದ್ದ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ನೇತೃತ್ವದ ಸತ್ಯಶೋಧನಾ ಸಮಿತಿಯು ಹಲವು ಅಂಶಗಳನ್ನು ಪತ್ತೆ ಹಚ್ಚಿದೆ. ರಾಜಕೀಯ, ಧರ್ಮ ಮಾಫಿಯಾ, ಹಫೀಮು ಸೇರಿ ಪ್ರಮುಖ 7 ಕಾರಣಗಳಿಂದಾಗಿಯೇ ಕೋಮು ಸಂಘರ್ಷ ಉಲ್ಭಣಗೊಳ್ಳುತ್ತಿದೆ ಎಂದು ಸಮಿತಿಯು ತಿಳಿಸಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ನೇರ ಆರೋಪ ಮಾಡಿರುವ ಸಮಿತಿಯು, ಕರಾವಳಿ ಭಾಗದ ಕಾಂಗ್ರೆಸ್ ನಾಯಕರ ಅಸಮರ್ಥತೆ ಬಗ್ಗೆಯೂ ತಿಳಿಸಿದೆ ಎಂದು ಮೂಲಗಳು ಹೇಳಿವೆ.
7 ಕಾರಣಗಳು ಏನು?
1. ಬಿಜೆಪಿ ಮತ್ತು ಸಂಘ ಪರಿವಾರದ ಪ್ರಮುಖರು ಧಾರ್ಮಿಕ ಭಾವನೆಗಳ ಮೇಲೆ ರಾಜಕೀಯ ಮಾಡುತ್ತಿರುವುದು ಪ್ರಮುಖ ಕಾರಣ. ಜತೆಗೆ ಕಾಂಗ್ರೆಸ್ ಸೇರಿ ಇತರ ಜಾತ್ಯತೀತ ರಾಜಕೀಯ ನಾಯಕರಲ್ಲಿ ಕೋಮು ವಿಚಾರ ಕುರಿತು ಸ್ಪಷ್ಟತೆಯಿಲ್ಲ.
2. ಕರಾವಳಿ ಭಾಗದ ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ಧಾರ್ಮಿಕ ಪ್ರತ್ಯೇಕತೆಯ ಪ್ರಭಾವ ಹೆಚ್ಚಾಗಿದೆ. ಹಿಂದು ಮತ್ತು ಮುಸ್ಲಿಂ ಸಮುದಾಯದ ಯುವಕರು ಹಾಗೂ ಧಾರ್ಮಿಕ ಗುರುಗಳು ಕೋಮು ಸಂಘರ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ.
3. ಕೆಲ ಮಾಫಿಯಾಗಳು ಕರಾವಳಿ ಭಾಗವನ್ನು ನಿಯಂತ್ರಿಸುತ್ತಿದ್ದು, ಅವುಗಳು ಕೋಮು ಸಂಘರ್ಷಕ್ಕೆ ಪ್ರೋತ್ಸಾಹಿಸುತ್ತಿವೆ. ಪ್ರಮುಖವಾಗಿ ಡ್ರಗ್ಸ್ ಮಾಫಿಯಾ, ಮರಳು ಮಾಫಿಯಾ, ದನದ ಮಾಫಿಯಾ, ರೌಡಿಗಳಿಂದ ಕರಾವಳಿಯ ಶಾಂತಿಗೆ ಭಂಗ ಉಂಟಾಗುತ್ತಿದೆ.
4. ಎರಡೂ ಧರ್ಮದ ಸಂಘಟನೆಗಳಿಗೆ ಸ್ಥಳೀಯ ಬೆಂಬಲದ ಜತೆಗೆ ಬಾಹ್ಯ ಬೆಂಬಲವೂ ವ್ಯಾಪಕವಾಗಿ ದೊರೆಯುತ್ತಿದೆ. ಧರ್ಮ ಆಧಾರಿತ ಗಲಾಟೆಗಳಿಗೆ ಹೊರಗಿನಿಂದ ಕುಮ್ಮಕ್ಕು ನೀಡಲಾಗುತ್ತಿದೆ. ಅದರಲ್ಲೂ ಕೆಲ ಸಂಘಟನೆಗಳಿಗೆ ಎಲ್ಲ ರೀತಿಯ ಬೆಂಬಲ ಸಿಗುತ್ತಿದ್ದು, ವಿದೇಶಗಳಿಂದ ಹಣಕಾಸಿನ ನೆರವು ದೊರೆಯುತ್ತಿದ.
5. ಕೋಮು ಸಂಘರ್ಷ ಹೆಚ್ಚಳಕ್ಕೆ ಪೊಲೀಸ್ ನಿಷ್ಕ್ರಿಯತೆಯೂ ಮತ್ತೊಂದು ಕಾರಣ. ಕೆಲ ಸಂಘರ್ಷಗಳ ಆರಂಭದಲ್ಲಿ ಪೊಲೀಸರು ನಿರ್ಲಕ್ಷಿಸಿದ್ದರಿಂದ ಅದು ದೊಡ್ಡದಾಗುವಂತಾಗಿದೆ. ಕೆಲ ಪೊಲೀಸರು ಕೆಲ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದಲ್ಲದೆ, ಅವರ ಬಗ್ಗೆ ಮೃಧು ಧೋರಣೆ ತೋರಿದ್ದಾರೆ.
6. ಕರಾವಳಿ ಭಾಗದಲ್ಲಿ ಯಾವುದೇ ಬೆಳವಣಿಗೆಗಳಾದರೂ ಅದಕ್ಕೆ ವ್ಯಾಪಕ ಪ್ರಚಾರ ನೀಡಲಾಗುತ್ತಿದೆ. ದ್ವೇಷ ಭಾಷಣದ ಮೂಲಕ ಧಾರ್ಮಿಕ ಭಾವನೆ ಕೆರಳಿಸಲಾಗುತ್ತಿದೆ. ಆ ರೀತಿಯ ಭಾಷಣಗಳಿಗೆ ಪ್ರಚಾರ ನೀಡುವ ದೊಡ್ಡ ಜಾಲವಿದೆ. ಎರಡೂ ಧರ್ಮದ ಕಡೆಯಲ್ಲೂ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುವ ದೊಡ್ಡ ಗುಂಪು ಸಕ್ರಿಯವಾಗಿವೆ.
7. ಧರ್ಮಾಂಧತೆಯ ಕಾರಣಕ್ಕಾಗಿ ನೈತಿಕ ಪೊಲೀಸ್ ಗಿರಿ ಪದೇಪದೆ ನಡೆಯುತ್ತಿದ್ದು, ಇದು ಕೋಮು ಸಂಘರ್ಷ ಹುಟ್ಟಿಕೊಳ್ಳಲು ಕಾರಣವಾಗುತ್ತಿದೆ.
ಧರ್ಮಾಧಾರಿತ ರಾಜಕಾರಣ:
ಕರಾವಳಿ ಭಾಗದ ಮಾತ್ರವಲ್ಲದೇ ರಾಜ್ಯದ ಪ್ರಮುಖ ರಾಜಕೀಯ ನಾಯಕರು ಧರ್ಮದ ಆಧಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅದರಲ್ಲೂ ಬಿಜೆಪಿ ಮತ್ತು ಸಂಘ ಪರಿವಾರದ ಪ್ರಮುಖರು ಧಾರ್ಮಿಕ ಭಾವನೆಗಳ ಮೇಲೆ ರಾಜಕೀಯ ಮಾಡುತ್ತಿರುವುದು ಪ್ರಮುಖ ಕಾರಣ. ಜತೆಗೆ ಕಾಂಗ್ರೆಸ್ ಸೇರಿ ಇತರ ಜಾತ್ಯತೀತ ರಾಜಕೀಯ ನಾಯಕರಲ್ಲಿ ಕೋಮು ವಿಚಾರ ಕುರಿತು ಸ್ಪಷ್ಟತೆಯಿಲ್ಲ. ಬಿಜೆಪಿ ವಿರೋಧಿ ಬಣದ ರಾಜಕೀಯ ಗೊಂದಲಗಳೂ ಕೋಮು ಸಂಘರ್ಷಕ್ಕೆ ಪ್ರಮುಖ ಕಾರಣವಾಗುವಂತಾಗಿದೆ ಎಂದು ಸಮಿತಿ ತಿಳಿಸಿದೆ.
ಧರ್ಮಾಂಧತೆ-ನೈತಿಕ ಪೊಲೀಸ್‌ಗಿರಿ:
ಕರಾವಳಿ ಭಾಗದ ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ಧಾರ್ಮಿಕ ಪ್ರತ್ಯೇಕತೆಯ ಪ್ರಭಾವ ಹೆಚ್ಚಾಗಿದೆ. ಹಿಂದು ಮತ್ತು ಮುಸ್ಲಿಂ ಸಮುದಾಯದ ಯುವಕರು ಹಾಗೂ ಧಾರ್ಮಿಕ ಗುರುಗಳು ಕೋಮು ಸಂಘರ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ. ಒಂದು ಧರ್ಮದ ಧಾರ್ಮಿಕ ಆಚರಣೆ ಸಂದರ್ಭದಲ್ಲಿ ಮತ್ತೊಂದು ಧರ್ಮದವರನ್ನು ಮೀರಿಸುವ ರೀತಿಯಲ್ಲಿ ಆಚರಣೆ ಮಾಡುವ ಹಪಾಹಪಿಯು ಹೆಚ್ಚಾಗಿದೆ. ಧರ್ಮಾಂಧತೆಯ ಕಾರಣಕ್ಕಾಗಿ ನೈತಿಕ ಪೊಲೀಸ್ ಗಿರಿ ಪದೇಪದೆ ನಡೆಯುತ್ತಿದ್ದು, ಇದು ಕೋಮು ಸಂಘರ್ಷ ಹುಟ್ಟಿಕೊಳ್ಳಲು ಕಾರಣವಾಗುತ್ತಿದೆ ಎಂದು ಪತ್ತೆ ಮಾಡಲಾಗಿದೆ.
ಕೆಲ ಮಾಫಿಯಾಗಳು ಕರಾವಳಿ ಭಾಗವನ್ನು ನಿಯಂತ್ರಿಸುತ್ತಿದ್ದು, ಅವುಗಳು ಕೋಮು ಸಂಘರ್ಷಕ್ಕೆ ಪ್ರೋತ್ಸಾಹಿಸುತ್ತಿವೆ. ಪ್ರಮುಖವಾಗಿ ಡ್ರಗ್ಸ್ ಮಾಫಿಯಾ, ಮರಳು ಮಾಫಿಯಾ, ದನದ ಮಾಫಿಯಾ, ರೌಡಿಗಳು ಕರಾವಳಿಯ ಶಾಂತಿಯನ್ನು ಕದಡುವ ಕೆಲಸ ಮಾಡುತ್ತಿವೆ. ಇಡೀ ಕರಾವಳಿ ಭಾಗದಲ್ಲಿ ಗಾಂಜಾ, ಡ್ರಗ್ಸ್‌ಗಳ ಜತೆಗೆ ಧಾರ್ಮಿಕ ಅಮಲು ಯುವ ಸಮುದಾಯವನ್ನು ಕಾಡುತ್ತಿವೆ. ಇವುಗಳು ವ್ಯವಸ್ಥಿತವಾಗಿ ಯುವ ಜನತೆಯ ದಾರಿ ತಪ್ಪಿಸುತ್ತಿವೆ ಎಂದು ತಿಳಿಸಲಾಗಿದೆ.
ವಿದೇಶದಿಂದ ಆರ್ಥಿಕ ಬೆಂಬಲ:
ಎರಡೂ ಧರ್ಮದ ಸಂಘಟನೆಗಳಿಗೆ ಸ್ಥಳೀಯ ಬೆಂಬಲದ ಜತೆಗೆ ಬಾಹ್ಯ ಬೆಂಬಲವೂ ವ್ಯಾಪಕವಾಗಿ ದೊರೆಯುತ್ತಿದೆ. ಧರ್ಮ ಆಧಾರಿತ ಗಲಾಟೆಗಳಿಗೆ ಹೊರಗಿನಿಂದ ಕುಮ್ಮಕ್ಕು ನೀಡಲಾಗುತ್ತಿದೆ. ಅದರಲ್ಲೂ ಕೆಲ ಸಂಘಟನೆಗಳಿಗೆ ಎಲ್ಲ ರೀತಿಯ ಬೆಂಬಲ ಸಿಗುತ್ತಿದ್ದು, ವಿದೇಶಗಳಿಂದ ಹಣಕಾಸಿನ ನೆರವು ದೊರೆಯುತ್ತಿದೆ ಎಂಬ ಗಂಭೀರ ಅಂಶವನ್ನು ಸಮಿತಿ ಪತ್ತೆ ಮಾಡಿದೆ.
ಪೊಲೀಸರ ನಿಷ್ಕ್ರಿಯತೆ-ವ್ಯಾಪಕ ಪ್ರಚಾರ
ಕೋಮು ಸಂಘರ್ಷ ಹೆಚ್ಚಳಕ್ಕೆ ಪೊಲೀಸ್ ನಿಷ್ಕ್ರಿಯತೆಯೂ ಮತ್ತೊಂದು ಕಾರಣ. ಕೆಲ ಸಂಘರ್ಷಗಳ ಆರಂಭದಲ್ಲಿ ಪೊಲೀಸರು ನಿರ್ಲಕ್ಷಿಸಿದ್ದರಿಂದ ಅದು ದೊಡ್ಡದಾಗುವಂತಾಗಿದೆ. ಕೆಲ ಪೊಲೀಸರು ಕೆಲ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದಲ್ಲದೆ, ಅವರ ಬಗ್ಗೆ ಮೃಧು ಧೋರಣೆ ತೋರಿದ್ದಾರೆ. ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಲ್ಲಿ ವಿಫಲವಾದ ಕಾರಣ ಕೋಮು ಸಂಘರ್ಷ ಆರಂಭದಲ್ಲೇ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ.
ಕರಾವಳಿ ಭಾಗದಲ್ಲಿ ಯಾವುದೇ ಬೆಳವಣಿಗೆಗಳಾದರೂ ಅದಕ್ಕೆ ವ್ಯಾಪಕ ಪ್ರಚಾರ ನೀಡಲಾಗುತ್ತಿದೆ. ದ್ವೇಷ ಭಾಷಣದ ಮೂಲಕ ಧಾರ್ಮಿಕ ಭಾವನೆ ಕೆರಳಿಸಲಾಗುತ್ತಿದೆ. ಆ ರೀತಿಯ ಭಾಷಣಗಳಿಗೆ ಪ್ರಚಾರ ನೀಡುವ ದೊಡ್ಡ ಜಾಲವಿದೆ. ಎರಡೂ ಧರ್ಮದ ಕಡೆಯಲ್ಲೂ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುವ ದೊಡ್ಡ ಗುಂಪು ಸಕ್ರಿಯವಾಗಿವೆ ಎಂದು ತಿಳಿಸಲಾಗಿದೆ.
ಕರಾವಳಿ ಅಭಿವೃದ್ಧಿಗೆ ಭಾರೀ ಹೊಡೆತ
ಕೋಮು ಸಂಘರ್ಷದ ಕಾರಣಗಳನ್ನು ಪತ್ತೆ ಮಾಡುವ ಜತೆಗೆ ಅದರಿಂದ ಕರಾವಳಿ ಭಾಗದ ಮೇಲಾಗಿರುವ ದುಷ್ಪರಿಣಾಮಗಳ ಬಗ್ಗೆಯೂ ಸತ್ಯ ಶೋಧನಾ ಸಮಿತಿ ವರದಿಯಲ್ಲಿ ತಿಳಿಸಿದೆ. ಪದೇ ಪದೆ ಕೋಮು ಸಂಘರ್ಷದಿಂದಾಗಿ ಕರಾವಳಿ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಹೊಡೆತ ಬೀಳುತ್ತಿದೆ. ಪ್ರವಾಸೋದ್ಯಮ ಕುಂಠಿತವಾಗಿದೆ. ರಾಜ್ಯದಲ್ಲಿ ಕರಾವಳಿ ಜಿಲ್ಲೆಗಳನ್ನು ಹೆಚ್ಚು ಆತಂಕದ ಜಿಲ್ಲೆಗಳಾಗಿ ನೋಡುವಂತಾಗಿದೆ ಎಂದು ಸಮಿತಿಯು ವರದಿಯಲ್ಲಿ ಉಲ್ಲೇಖಿಸಿದೆ.