ಸುಹಾಸ್ ಶೆಟ್ಟಿ ಹತ್ಯೆಗೆ ಬಿಜೆಪಿಗರ ಆಕ್ರೋಶ

Published : May 03, 2025, 11:29 AM IST
Suhas Shetty

ಸಾರಾಂಶ

ಮಂಗಳೂರಿನಲ್ಲಿ ಗುರುವಾರ ರಾತ್ರಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.  

 ಮಂಗಳೂರು : ಮಂಗಳೂರಿನಲ್ಲಿ ಗುರುವಾರ ರಾತ್ರಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಪ್ರಕರಣವನ್ನು ಎನ್‌ಐಎ ತನಿಖೆಗೆ ಒಳಪಡಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗ್ರಹಿಸಿದ್ದಾರೆ. 

ಅಲ್ಲದೆ, ದ.ಕ. ಸಂಸದ ಚೌಟ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ಎನ್‌ಐಎ ತನಿಖೆಗೆ ಆಗ್ರಹಿಸಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ಪತ್ರ ಬರೆದಿದ್ದಾರೆ. ಇದೇ ವೇಳೆ, ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್‌ ಸಿಂಹ, ಕಾಂಗ್ರೆಸ್‌ ನಿಂದ ತಾಲಿಬಾನ್‌ ಸರ್ಕಾರ ಬರುತ್ತೆ ಎಂಬ ಮಾತು ಸತ್ಯವಾಗಿದೆ ಎಂದಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದಲೇ ಮಂಗಳೂರನಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ ನಡೆದಿದೆ. ಪೊಲೀಸರು ಸರ್ಕಾರದ ಪ್ರತಿನಿಧಿಯಂತೆ ವರ್ತನೆ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಬಂಟ್ವಾಳದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ, ಈ ಘಟನೆಗೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ನೀತಿಯೇ ಕಾರಣ ಎಂದು ಕಿಡಿ ಕಾರಿದರು. ಘಟನೆಯಲ್ಲಿ ಪೊಲೀಸ್ ವೈಫಲ್ಯ ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ. ಜೀವಕ್ಕೆ ಬೆದರಿಕೆ ಇರುವ ವಿಚಾರ ಪೊಲೀಸ್ ಇಲಾಖೆಗೆ ಸ್ಪಷ್ಟವಾಗಿ ಗೊತ್ತಿದ್ದರೂ ರಕ್ಷಣೆ ನೀಡದ್ದರಿಂದ ಆತನ ಕೊಲೆಯಾಗಿದೆ ಎಂದರು.

ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಮಾತನಾಡಿ, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಹಿಂದೂ ಕಾರ್ಯಕರ್ತರ ಹತ್ಯೆ ಗ್ಯಾರಂಟಿ ಎಂಬಂತಾಗಿದೆ. ಇದು ಪೊಲೀಸ್ ಇಲಾಖೆಯ ಸ್ಪಷ್ಟ ವೈಫಲ್ಯವಾಗಿದ್ದು, ಕರ್ನಾಟಕ ಪೊಲೀಸರಿಂದ ನ್ಯಾಯ ಸಿಗುತ್ತೆ ಎಂಬ ಧೈರ್ಯ ಇಲ್ಲ, ಎನ್‌ಐಎಯಿಂದ ಮೂಲ ಕಾರಣ ಪತ್ತೆ ಹಚ್ಚಬೇಕು ಎಂದರು. ಸಿದ್ದರಾಮಯ್ಯ ಹೇಳಿಕೆಗಳೇ ಈ ಕೊಲೆಗಳಿಗೆ ಕಾರಣವಾಗಿದೆ. ಪ್ರಕರಣಗಳನ್ನು ಕ್ಯಾಬಿನೆಟ್‌ಗೆ ತಂದು ಪಿಎಫ್‌ಐ ಕಾರ್ಯಕರ್ತರ ಬಿಡುಗಡೆ ಮಾಡಿದ್ದಾರೆ. ಇದರಿಂದಾಗಿಯೇ ಭಯೋತ್ಪಾದನೆ ಚಟುವಟಿಕೆ ಜಾಸ್ತಿಯಾಗಿದೆ ಎಂದು ಟೀಕಿಸಿದರು.

ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್‌ ಸಿಂಹ, ಇತ್ತೀಚಿಗೆ ಕೊಡಗಿನ ವಿನಯ್ ಸೋಮಯ್ಯ ಅವರು ಕಾಂಗ್ರೆಸ್ ಶಾಸಕರ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡರು. ಈಗ ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆಯಾಗಿದೆ. ಕಾಂಗ್ರೆಸ್ ಗೆ ಓಟ್ ಹಾಕಿದ್ರೆ ತಾಲಿಬಾನ್ ಸರ್ಕಾರ ಬರುತ್ತೆ ಅಂತಾ ಅಂದೇ ಹೇಳಿದ್ದೆ. ಈಗ ಅದೇ ಆಗಿದೆ ಎಂದು ಆರೋಪಿಸಿದರು.

ಚಿಕ್ಕಮಗಳೂರಲ್ಲಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ, ಮುಖ್ಯಮಂತ್ರಿಗಳೇ…ನೀವು ಎಸ್ಡಿಪಿಐ ಹಾಗೂ ಪಿಎಫ್‌ಐ ಮೇಲಿದ್ದ ಕೇಸ್ ಗಳನ್ನು ವಾಪಸ್ ಪಡೆದದ್ದನ್ನು ಹಿಂತೆಗೆದುಕೊಳ್ಳಿ, ಇಲ್ಲವಾದರೆ ಈ ರೀತಿ ಹತ್ಯೆಗೆ ನೀವೇ ಪರೋಕ್ಷ ಕಾರಣರಾಗ್ತೀರಾ? ಎಂದು ಕಿಡಿ ಕಾರಿದರು.

ಬಳ್ಳಾರಿಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ. ಶ್ರೀರಾಮುಲು, ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಘಟನೆಯ ನೈತಿಕ ಹೊಣೆ ಹೊತ್ತು ಗೃಹ ಸಚಿವ ಪರಮೇಶ್ವರ್‌ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಮಧ್ಯೆ, ಶಿವಮೊಗ್ಗದಲ್ಲಿ ಮಾತನಾಡಿದ ಮಾಜ ಸಚಿವ ಈಶ್ವರಪ್ಪ, ಈ ಘಟನೆ ನೋಡಿದರೆ ರಾಜ್ಯದಲ್ಲಿ ಸರ್ಕಾರ ಇದೆಯಾ ಎಂದು ಅನುಮಾನ ಬರುತ್ತಿದೆ. ತಮಗೆ ಸರ್ಕಾರದ ಬೆಂಬಲವಿದೆ, ಹೀಗಾಗಿ, ಮುಸಲ್ಮಾನ ಗೂಂಡಾಗಳು ರಾಜ್ಯದಲ್ಲಿ ನಾವು ಮಾಡಿದ್ದೆ ಸರಿ ಎಂದುಕೊಂಡು ಬಿಟ್ಟಿದ್ದಾರೆ‌ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಬಂಟ್ವಾಳದಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಂಗಳೂರಿನಲ್ಲಿ ಮಾತನಾಡಿದ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಪ್ರಕರಣದ ಎನ್‌ಐಎ ತನಿಖೆಗೆ ಆಗ್ರಹಿಸಿದ್ದಾರೆ. ವಿಜಯಪುರ ಸಂಸದ ಯತ್ನಾಳ ಮಾತನಾಡಿ, ರಾಜ್ಯ ಸರ್ಕಾರದ ಅಲ್ಪಸಂಖ್ಯಾತ ಓಲೈಕೆ ನೀತಿ ಇದಕ್ಕೆ ಕಾರಣ ಎಂದಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ತಮಗೆ ಕಾಂಗ್ರೆಸ್‌ ಸರ್ಕಾರದಲ್ಲಿ ರಕ್ಷಣೆ ಇದೆ ಎಂಬ ಕಾರಣದಿಂದಲೇ ಈ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸುಹಾಸ್ ಶೆಟ್ಟಿ ಹತ್ಯೆ: ಹಲವು ಆರೋಪಿಗಳ ವಶ?

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹಲವು ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಹತ್ಯೆ ಘಟನೆಯ ವಿಡಿಯೋ ಸಾಕ್ಷ್ಯದ ಆಧಾರದಲ್ಲಿ ಪೊಲೀಸರು ಹಲವಾರು ಮಂದಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಗೃಹ ಸಚಿವರು ಹಾಗೂ ಉಸ್ತುವಾರಿ ಸಚಿವರು ಜಂಟಿಯಾಗಿ ಶನಿವಾರ ಉನ್ನತಾಧಿಕಾರಿಗಳ ಸಭೆ ನಡೆಸುತ್ತಿರುವುದರಿಂದ ಪೊಲೀಸರು ಆದಷ್ಟು ಶೀಘ್ರವಾಗಿ ಆರೋಪಿಗಳ ಪತ್ತೆ ಕಾರ್ಯ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಂಗಳೂರಿನಲ್ಲಿ ಇಂದು ಗೃಹ ಸಚಿವ, ಉಸ್ತುವಾರಿ ಸಚಿವರ ಸಭೆ

ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ ಘಟನೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಶಾಂತಿ ಸುವ್ಯವಸ್ಥೆ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜೊತೆ ಗೃಹ ಸಚಿವ ಡಾ.ಪರಮೇಶ್ವರ್ ಅವರು ಶನಿವಾರ ಮಂಗಳೂರಿನಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಲಿದೆ.

ಸುಹಾಸ್‌ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ

ಮಂಗಳೂರಿನಲ್ಲಿ ನಡೆದ ಹಿಂದೂ ಮುಖಂಡ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಖಂಡಿಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಗುರುವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು. ಸಿಎಂ ಸಿದ್ದರಾಮಯ್ಯನವರ ಪ್ರತಿಕೃತಿ ದಹಿಸಿ, ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಕಾಂಗ್ರೆಸ್‌ ಸರ್ಕಾರ ಹಾಗೂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಹಾಸನ ಜಿಲ್ಲೆ ಸಕಲೇಶಪುರದ ಹಳೇ ಬಸ್ ನಿಲ್ದಾಣದಲ್ಲಿ ಶಾಸಕ ಸೀಮೆಂಟ್ ಮಂಜು ನೇತೃತ್ವದಲ್ಲಿ ಟೈರ್ ಸುಟ್ಟು ಪ್ರತಿಭಟನೆ ನಡೆಸಲಾಯಿತು. ಬೀದರ್‌ನ ಕಿತ್ತೂರ್‌ ರಾಣಿ ಚನ್ನಮ್ಮ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಟೈರ್‌ಗೆ ಬೆಂಕಿ ಹಚ್ಚುವ ಮೂಲಕ ಪ್ರತಿಭಟನೆ ನಡೆಸಿದರು. ಮೈಸೂರಿನಲ್ಲಿ ರಾಮಸ್ವಾಮಿ ವೃತ್ತದಲ್ಲಿ ಶಾಸಕ ಟಿ.ಎಸ್‌. ಶ್ರೀವತ್ಸ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ರಸ್ತೆಯಲ್ಲಿ ಒಣ ಹುಲ್ಲಿಗೆ ಬೆಂಕಿ ಹಚ್ಚಲು ಮುಂದಾದಾಗ ಪೊಲೀಸರು ತಡೆದರು. ಈ ವೇಳೆ, ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಶಾಸಕ ಟಿ.ಎಸ್‌. ಶ್ರೀವತ್ಸ ಮಾತನಾಡಿ, ಹತ್ಯೆಯ ಆರೋಪಿಗಳನ್ನು ಬಂಧಿಸಿಲ್ಲ ಏಕೆ?. ಹತ್ಯೆ ನಡೆದ ಒಂದು ಗಂಟೆಯ ಒಳಗೆ ಸುಹಾಸ್‌ ಅವರು ರೌಡಿಶೀಟರ್‌ ಎಂದು ಕಮಿಷನರ್‌ ಹೇಳಿಕೆ ನೀಡಿದ್ದು, ಅವರು ಯಾವ ಕಾರಣಕ್ಕಾಗಿ ರೌಡಿಶೀಟರ್‌ ಆಗಿದ್ದಾರೆಂದು ತಿಳಿಸಿಲ್ಲ. ರಾಜ್ಯದಲ್ಲೂ ಕಾಶ್ಮೀರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ಭಾರತವನ್ನು ಇಸ್ಲಾಮೀಕರಣ ಮಾಡಲು ಬಿಡುವುದಿಲ್ಲ. ಹಿಂದೂ ರಾಜ್ಯಕ್ಕಾಗಿ ರಕ್ತ ನೀಡಲೂ ನಾವು ಸಿದ್ಧರಾಗಿದ್ದೇವೆ. ನೂರು ಸಿದ್ದರಾಮಯ್ಯ, ಡಿಕೆಶಿ ಬಂದರೂ ಹಿಂದೆ ಸರಿಯುವುದಿಲ್ಲ. ಮಂಗಳೂರಿನ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಬೇಕು ಎಂದು ಅವರು ಆಗ್ರಹಿಸಿದರು.

ಇದೇ ವೇಳೆ, ಕಲಬುರಗಿ, ಶಿವಮೊಗ್ಗ, ಚಿಕ್ಕಮಗಳೂರು ಸೇರಿ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದವು.

PREV
Get the latest news from Dakshina Kannada (ದಕ್ಷಿಣ ಕನ್ನಡ ಸುದ್ದಿ) — covering coastal city Mangaluru, local governance, beaches & tourism, culture & traditions (Yakshagana, Kambala), education, industry and agriculture, environment, civic issues, and community events from the district on Kannada Prabha News.

Recommended Stories

ರೋಟರಿ ನಿಧಿ ಶೋಧ ಸ್ಪರ್ಧೆ: ನರೇಂದ್ರ ಪ್ರಭು, ಪಾರ್ವತಿ ಕುನಾಲ್‌ ತಂಡಕ್ಕೆ ಪ್ರಶಸ್ತಿ
ಸ್ವಚ್ಛತೆಯ ಸ್ವಯಂ ಜಾಗೃತಿ ರಾಷ್ಟ್ರೀಯ ಆಂದೋಲನವಾಗಲಿ: ಭರತ್ ನಿಡ್ಪಳ್ಳಿ